ಬೆಂಗಳೂರು: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳು ರಾಜ್ಯದ ಬಡ ಜನರ ಜೀವನ ಆರ್ಥಿಕವಾಗಿ ಸುಧಾರಿಸಿಕೊಳ್ಳಲು ವಿವಿಧ ರೀತಿಗಳಲ್ಲಿ ನೆರವಾಗುತ್ತಿವೆ. ಅದರಲ್ಲೂ ಮುಖ್ಯವಾಗಿ ಮನೆಯ ಯಜಮಾನಿಗೆ ಪ್ರೋತ್ಸಾಹಿಸಲು ಧನ ಸಹಾಯ ನೀಡುವ ಗೃಹಲಕ್ಷ್ಮಿ ಯೋಜನೆಯು ಪ್ರತಿ ಮಹಿಳೆಯರ ಹಾಗೂ ಮನೆಯವರ ಮನೆ ಮಾತಾಗಿದೆ.
ಅನೇಕ ಮಹಿಳೆಯರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಮಗೆ ಗೃಹಲಕ್ಷ್ಮಿ ಯೋಜನೆ ಯಾವೆಲ್ಲಾ ರೀತಿಯಲ್ಲಿ ಸಹಾಯಕವಾಗಿದೆ ಎಂದು ತಮ್ಮ ಯಶಸ್ಸಿನ ಯಶೋಗಾಥೆಯನ್ನು ಹಂಚಿಕೊಂಡಿದ್ದಾರೆ. ಗೃಹಲಕ್ಷ್ಮಿ ಹಣದಿಂದ ಮಕ್ಕಳ ಶಾಲೆ ಶುಲ್ಕ, ವೈದ್ಯಕೀಯ ಖರ್ಚು, ದಿನಸಿ ಖರೀದಿ ಹೀಗೆ ನಾನಾ ರೀತಿಯಲ್ಲಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ನೀಡುವ ಧನಸಹಾಯವು ಸದ್ಭಳಕೆಯಾಗುತ್ತಿದೆ.
ರಾಯಬಾಗ ತಾಲ್ಲೂಕಿನ ಮಂಟೂರು ಗ್ರಾಮದ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಬೆಂಗಳೂರು, ಧಾರವಾಡ, ವಿಜಯಪುರಕ್ಕೆ ಹೋಗುತ್ತಾರೆ. ಅಲ್ಲಿ ತರಬೇತಿ ಪಡೆಯಲು ಅವರಿಗೆ ಆರ್ಥಿಕ ಸಮಸ್ಯೆ ಆಗುತ್ತಿತ್ತು. ಊಟ, ಆರೋಗ್ಯದ ಸಮಸ್ಯೆ ಕೂಡ ಕಾಡುತ್ತಿತ್ತು. ಹೀಗಾಗಿ ಗ್ರಾಮದಲ್ಲಿಯೇ ಒಂದು ಗ್ರಂಥಾಲಯ ಕಟ್ಟಬೇಕು ಅನ್ನೋದು ಶ್ರೀಮತಿ ಮಲ್ಲವ್ವ ಮೇಟಿರವರ ಕನಸಾಗಿತ್ತು.
ಈ ಹಿನ್ನಲೆಯಲ್ಲಿ ಶ್ರೀಮತಿ ಮಲ್ಲವ್ವ ಮೇಟಿರವರು ಗೃಹಲಕ್ಷ್ಮಿ ಯೋಜನೆಯ ಹಣದಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಸಣ್ಣ ಗ್ರಂಥಾಲಯ ನಿರ್ಮಿಸಿದ್ದಾರೆ.
ವಿದ್ಯಾಭ್ಯಾಸಕ್ಕೆ ನೆರವಾದ ಗೃಹಲಕ್ಷ್ಮಿ
ದ್ವಿತೀಯ ಪಿಯುಸಿಯ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವೇದಾಂತ್ ಕುಟುಂಬಕ್ಕೆ ನೆರವಾಗಿದ್ದು ಗೃಹಲಕ್ಷ್ಮಿ ಯೋಜನೆಯ ಹಣ. ಗೃಹಲಕ್ಷ್ಮಿ ಯೋಜನೆಯ ಹಣ ಆಸರೆಯಾಗಿ, ಶಿಕ್ಷಣ ಪಡೆಯಲು ನೆರವಾಗಿದ್ದು, ಈ ಯೋಜನೆಯ ಸಾರ್ಥಕತೆಗೆ ಮತ್ತೊಂದು ಸಾಕ್ಷಿಯಾಗಿದೆ.
ತಂದೆಯನ್ನು ಕಳೆದುಕೊಂಡ ಕುಟುಂಬಕ್ಕೆ ತಾಯಿಯೇ ಆಸರೆಯಾಗಿದ್ದರು. ಅವರಿಗೆ ಬರುತ್ತಿದ್ದ ಗೃಹಲಕ್ಷ್ಮಿ ಹಣವು ವೇದಾಂತ್ ಅವರ ಅಧ್ಯಯನ ಮತ್ತು ಹಾಸ್ಟೆಲ್ ವಾಸ್ತವ್ಯ ಹಾಗೂ ಇತರೆ ಖರ್ಚುಗಳೀಗೆ ಸಹಾಯವಾಗಿದೆ ಎಂದು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಗೃಹಲಕ್ಷ್ಮಿ ಹಣ ಓದಿಗೆ ಸಹಕಾರಿ: ಮಹಾದೇವಿ
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ನಿಟ್ರೆ ಗ್ರಾಮದ ನಿವಾಸಿಗಳಾದ ಮಹೇಶ್ ಮತ್ತು ಶ್ರೀಮತಿ ಪುಟ್ಟತಾಯಮ್ಮ ಇವರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು ಸದರಿ ದಂಪತಿಗಳ ಮಗಳಾದ ಕುಮಾರಿ ಮಹಾದೇವಿ ಬೇಗೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ 591 ಅಂಕ ಗಳಿಸಿ ಶೇಕಡಾ 98.00 ಫಲಿತಾಂಶ ಪಡೆದಿರುತ್ತಾರೆ. ಗೃಹಲಕ್ಷ್ಮಿ ಯೋಜನೆಯ ಧನಸಹಾಯದಿಂದ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಿರುವುದಾಗಿ ಮಹಾದೇವಿ ತಿಳಿಸಿರುತ್ತಾರೆ.
ಚಿತ್ರದುರ್ಗ ಜಿಲ್ಲೆಯ ಬೇಡರ ಶಿವನಕೆರೆ ಗ್ರಾಮ ಸುನಿತಾ, ಗೃಹಲಕ್ಷ್ಮಿ ಯೋಜನೆ ಫಲಾನುಭವಿಯಾಗಿದ್ದಾರೆ. 14 ತಿಂಗಳಿಂದ ಈ ಯೋಜನೆಯಡಿ ಪ್ರತಿ ತಿಂಗಳು 2000 ರೂಪಾಯಿ ಹಣ ಅವರ ಖಾತೆಗೆ ಜಮೆಯಾಗುತ್ತಿದೆ. ಮಕ್ಕಳ ಶಾಲೆ ಶುಲ್ಕ ಜೊತೆಗೆ ಟೈಲರ್ ವೃತ್ತಿಯನ್ನು ಆರಂಭಿಸಿ ದುಡಿಮೆಯ ಮಾರ್ಗ ಕಂಡುಕೊಳ್ಳಲು ಯೋಚಿಸಿದ ಸುನಿತಾ ಗೃಹಲಕ್ಷ್ಮಿ ಹಣದಲ್ಲಿ ಹೊಸ ಹೊಲಿಗೆ ಯಂತ್ರ ಖರೀದಿ ಮಾಡಿದ್ದಾರೆ.
ಪತಿಯ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ನೆರವಾದ ಗೃಹಲಕ್ಷ್ಮಿ ಯೋಜನೆ
ಬೆಳಗಾವಿಯ ಆನಗೋಳದ ಚಂದ್ರಶೇಖರ ಬಡಿಗೇರ ಅವರು ಖಾಸಗಿ ಕಂಪನಿಯಲ್ಲಿ ಬಡಗಿ ಕೆಲಸ ಮಾಡುವ ಸಂದರ್ಭದಲ್ಲಿ ಕಣ್ಣಿನ ನರ ದೋಷ ಸರಿಪಡಿಸಲು ಶಸ್ತ್ರ ಚಿಕಿತ್ಸೆಗಾಗಿ ಆರ್ಥಿಕ ಸಮಸ್ಯೆಯಿಂದ ಇವರು ಪರದಾಡುತ್ತಿದ್ದರು. ಚಂದ್ರಶೇಖರ ಅವರ ಸೇವಾ ಅವಧಿಯ ಮೊತ್ತವನ್ನೆಲ್ಲ ಸೇರಿಸಿ ಈ ಮೊದಲು ಶಸ್ತ್ರ ಚಿಕಿತ್ಸೆ ಮಾಡಿಸಲಾಗಿತ್ತು. ಆ ಬಳಿಕವೂ ಅವರಿಗೆ ಕಣ್ಣಿನ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿರಲಿಲ್ಲ.
ಇಂತಹ ಸನ್ನಿವೇಶದಲ್ಲಿ ಶ್ರೀ ಚಂದ್ರಶೇಖರ ಬಡಿಗೇರ ಇವರ ಪತ್ನಿಯ ಗೃಹಲಕ್ಷ್ಮಿ ಯೋಜನೆಯ ಧನಸಹಾಯದಿಂದ ಪತಿಗೆ ಶಸ್ತ್ರಚಿಕಿತ್ಸೆ ಮಾಡಿಸುವ ಮೂಲಕ ದೃಷ್ಟಿ ದೋಷವನ್ನು ನಿವಾರಿಸಿಕೊಂಡಿರುತ್ತಾರೆ.
ಬಳ್ಳಾರಿ ಜಿಲ್ಲೆಯ ಸಂಗನಕಲ್ಲು ಗ್ರಾಮದ ಶ್ರೀಮತಿ ಜೆ. ಅರುಣಾ ಹಾಗೂ ಶ್ರೀ ಬಸವರಾಜ್ ಬಡ ದಂಪತಿಗಳು ಗೃಹಲಕ್ಷ್ಮಿ ಯೋಜನೆಯ ಧನಸಹಾಯವನ್ನು ಕೂಡಿಟ್ಟು ಯುಗಾದಿ ಹಬ್ಬದ ಪ್ರಯುಕ್ತ ರೂ. 13,600/- ಮೊತ್ತದ ಹೊಸ ಟಿವಿಯನ್ನು ಖರೀದಿಸಿ ಸಂಭ್ರಮಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಹಣದಿಂದ ಮೊಬೈಲ್ ಖರೀದಿಸಿ ವಾಲ್ಪೇಪರ್ನಲ್ಲಿ ಸಿಎಂ ಪೋಟೋ ಹಾಕಿದ ಮಹಿಳೆ
ಹಾವೇರಿ ಜಿಲ್ಲೆಯ ನಿವಾಸಿ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯೊಬ್ಬರು ಯೋಜನೆಯ ಪ್ರತಿ ತಿಂಗಳ ಧನಸಹಾಯವನ್ನು ಕೂಡಿಟ್ಟು ತಮ್ಮ ಇಷ್ಟದ ಮೊಬೈಲ್ ಖರೀದಿಸಿ, ಮಾನ್ಯ ಮುಖ್ಯಮಂತ್ರಿಗಳ ಫೋಟೋವನ್ನು ವಾಲ್ ಪೇಪರ್ನಲ್ಲಿರಿಸಿ ಸಂಭ್ರಮಿಸಿರುತ್ತಾರೆ. ಹಾವೇರಿಯಲ್ಲಿ ನಡೆದ ಸಮಾವೇಶಕ್ಕೆ ಹೊಸ ಮೊಬೈಲ್ನೊಂದಿಗೆ ಬಂದಾಗ ಅವರ ಖುಷಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಗೃಹಲಕ್ಷ್ಮಿ ಹಣದಿಂದ ಮಹಿಳೆಯರು ತಮ್ಮ ಮನೆ ಮಂದಿಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಖರೀದಿ ಮಾಡಿರುವ ಘಟನೆಗಳೂ ನಡೆದಿವೆ. ವಿವಿಧ ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿರುವ ಜನತೆಗೆ ರಾಜ್ಯ ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆಗಳು ಆಸರೆಯಾಗಿವೆ. ಜೊತೆಗೆ ಕೆಲ ಮಹಿಳೆಯರು ಸ್ವಂತ ವ್ಯಾಪಾರ, ಹೊಲಿಗೆ ಯಂತ್ರ ಖರೀದಿ, ಹೈನುಗಾರಿಕೆ, ಮನೆಗೆ ಫ್ರಿಡ್ಜ್ ಖರೀದಿಸಿ ಗೃಹಲಕ್ಷ್ಮೀ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ವರದಾನವಾಗಿದೆ.