ದಾವೋಸ್ (ಸ್ವಿರ್ಟರ್ಲೆಂಡ್): ರಾಜ್ಯದ ವಿಜಯಪುರದಲ್ಲಿ ಹೆಸರಾಂತ ಲುಲು ಗ್ರೂಪ್ ಮತ್ತು ಬಿಎಲ್ ಆಗ್ರೋ ಕಂಪನಿಗಳು ಆಹಾರ ಸಂಸ್ಕರಣೆ ವಲಯದಲ್ಲಿ ಬೃಹತ್ ಮೊತ್ತದ ಹೂಡಿಕೆ ಮಾಡುವ ಸಂಬಂಧ ರಾಜ್ಯ ಸರ್ಕಾರದ ಜತೆ ಒಡಂಬಡಿಕೆ ಮಾಡಿಕೊಂಡವು
ಇಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಸಮಾವೇಶದಲ್ಲಿ ಪಾಲ್ಗೊಂಡಿರುವ ವಿಜಯಪುರ ಜಿಲ್ಲಾ ಸಚಿವರೂ ಆಗಿರುವ ಎಂ ಬಿ ಪಾಟೀಲ ಅವರ ಸಮ್ಮುಖದಲ್ಲಿ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಮತ್ತು ಲುಲು ಕಂಪನಿ ವ್ಯವಸ್ಥಾಪಕ ನಿರ್ದೇಶಕ ಯೂಸುಫ್ ಅಲಿ ಅವರು ಒಪ್ಪಂದಕ್ಕೆ ಸಹಿ ಹಾಕಿದರು.ಈ ಮೂಲಕ ಪಾಟೀಲ ಅವರು ತವರು ಜಿಲ್ಲೆಗೆ ಸಿಹಿಸುದ್ದಿ ನೀಡಿದ್ದಾರೆ.
‘ಕತಾರ್, ಕುವೈತ್, ಸೌದಿ ಅರೇಬಿಯಾ ಮತ್ತು ಈಜಿಪ್ಟ್ ನಲ್ಲಿ ಹೆಸರು ಮಾಡಿರುವ ಲುಲು ಗ್ರೂಪ್ 250 ಮಾಲ್ ಗಳನ್ನು ಹೊಂದಿದೆ. ಈಗ ಈ ಕಂಪನಿಯು ವಿಜಯಪುರದಲ್ಲಿ 300 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ ಎಂದು ಹೇಳಿದರು.
ಲುಲು ಗ್ರೂಪ್ ಸದ್ಯಕ್ಕೆ ಪ್ರತೀ ತಿಂಗಳು 250 ಟನ್ನುಗಳಷ್ಟು ಸೀಬೆಹಣ್ಣು, ಸಪೋಟ, ಹಸಿ ಮೆಣಸಿನಕಾಯಿ, ಬೆಂಡೇಕಾಯಿ, ಬದನೆಕಾಯಿ ಇತ್ಯಾದಿಗಳನ್ನು ಖರೀದಿಸುತ್ತಿದೆ. ವಿಜಯಪುರದಲ್ಲಿ ಜೋಳ, ದ್ರಾಕ್ಷಿ, ಹತ್ತಿ, ಕುಸುಬೆ, ಎಳ್ಳು, ಲಿಂಬೆ ಇತ್ಯಾದಿಗಳ ಕಣಜವಾಗಿದೆ. ಲುಲು ಹೂಡಿಕೆಯಿಂದ ಸ್ಥಳೀಯ ರೈತರಿಗೆ ಅನುಕೂಲ ಆಗಲಿದೆ ಎಂದು ಪಾಟೀಲ ವಿವರಿಸಿದ್ದಾರೆ.
ವಿಜಯಪುರದಲ್ಲಿ ಜಮೀನು, ನೀರು, ವಿದ್ಯುತ್ ಕೊರತೆ ಇಲ್ಲ. ಸದ್ಯದಲ್ಲೇ ವಿಮಾನ ನಿಲ್ದಾಣವೂ ಉದ್ಘಾಟನೆ ಆಗಲಿದೆ. ಇವೆಲ್ಲವನ್ನೂ ಪರಿಗಣಿಸಿ ವಿಜಯಪುರದಲ್ಲೇ ಹೂಡಿಕೆ ಮಾಡುವಂತೆ ಸಮೂಹದ ಮುಖ್ಯಸ್ಥ ಯೂಸುಫ್ ಅವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಉತ್ತರ ಪ್ರದೇಶ ಮೂಲದ ಬಿಎಲ್ ಗ್ರೂಪ್ ಕಂಪನಿಯು ದಕ್ಷಿಣ ಭಾರತದಲ್ಲಿ ತನ್ನ ಆಹಾರ ಸಂಸ್ಕರಣ ಘಟಕ ತೆರೆಯಲು ತೀರ್ಮಾನಿಸಿದ್ದು, ಇದಕ್ಕಾಗಿ ವಿಜಯಪುರವನ್ನು ಆಯ್ಕೆ ಮಾಡಿಕೊಂಡಿದೆ. ಈ ಸಂಬಂಧ ಕೂಡ ಒಡಂಬಡಿಕೆಗೆ ಅಂಕಿತ ಹಾಕಲಾಗಿದೆ ಎಂದು ಪಾಟೀಲ ಅವರು ವಿವರಿಸಿದ್ದಾರೆ.