ಬೆಂಗಳೂರು: ಜಪಾನ್ ದೇಶದ ಪ್ರಮುಖ ಕೈಗಾರಿಕಾ ನಗರಗಳಾಗಿರುವ ಒಸಾಕಾ ಮತ್ತು ನಗೋಯಾ ನಗರಗಳಿಗೆ ಬೆಂಗಳೂರಿನಿಂದ ನೇರ ವಿಮಾನಸೇವೆ ಆರಂಭಿಸುವ ಕುರಿತು ಬೆಂಗಳೂರಿನಲ್ಲಿ ಇರುವ ಆ ದೇಶದ ಕಾನ್ಸುಲ್ ಜನರಲ್ ಜತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಚರ್ಚಿಸಿದ್ದಾರೆ.
ಅವರು ಜಪಾನ್ ಕಾನ್ಸುಲ್ ಜನರಲ್ ನಕಾನೆ ಸುಟೋಮು ಅವರೊಂದಿಗೆ ಮಾತುಕತೆ ನಡೆಸಿದರು.
ಬಳಿಕ ಮಾತನಾಡಿದ ಸಚಿವರು, ಜಪಾನ್ ಜತೆ ಬಂಡವಾಳ ಹೂಡಿಕೆ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಬಂಧ, ಹಾಗೂ ಭಾಷಾ ಕಲಿಕೆಯಂತಹ ಕೌಶಲ್ಯ ಬಲವರ್ಧನೆಗೆ ರಾಜ್ಯ ಸರಕಾರದ ಮೂಲಕ ಅಗತ್ಯ ಉಪಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಸಂಬಂಧ ಸೆ.6ರಿಂದ ಹತ್ತು ದಿನಗಳ ಜಪಾನ್ ಪ್ರವಾಸ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸದ್ಯಕ್ಕೆ ಬೆಂಗಳೂರಿನಿಂದ ಜಪಾನ್ನ ರಾಜಧಾನಿ ಟೋಕಿಯೋಗೆ ಮಾತ್ರ ನೇರ ವಿಮಾನ ಸೌಲಭ್ಯ ಇದೆ. ಈ ವರ್ಷದ ಫೆಬ್ರವರಿಯಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಜಪಾನಿನ ಹಲವು ಕಂಪನಿಗಳು ಡೇಟಾ ಸೆಂಟರ್, ಮ್ಯಾನಫ್ಯಾಕ್ಚರಿಂಗ್, ಲಾಜಿಸ್ಟಿಕ್ಸ್ ಮುಂತಾದ ವಲಯಗಳಲ್ಲಿ ರಾಜ್ಯದಲ್ಲಿ 7,500 ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಒಡಂಬಡಿಕೆ ಮಾಡಿಕೊಂಡಿವೆ. ಹೀಗಾಗಿ ಅಲ್ಲಿನ ಕೈಗಾರಿಕಾ ನಗರಗಳಾದ ಒಸಾಕಾ ಮತ್ತು ನಗೋಯಾಗೆ ನಮ್ಮಲ್ಲಿಂದ ನೇರ ವಿಮಾನ ಸೇವೆ ಆರಂಭಿಸಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.
ನಮ್ಮಲ್ಲಿ ಹಲವರಿಗೆ ಜಪಾನಿನ ಕಂಪನಿಗಳು ಕೆಲಸ ಕೊಡುತ್ತಿವೆ. ಇದಕ್ಕೆ ಪೂರಕವಾಗಿ ನಮ್ಮಲ್ಲಿರುವ ವಿಟಿಯು ತರಹದ ವಿಶ್ವವಿದ್ಯಾಲಯಗಳಲ್ಲಿ ಜಪಾನಿ ಭಾಷೆ ಕಲಿಕೆಗೆ ಒಡಂಬಡಿಕೆ ಮಾಡಿಕೊಳ್ಳುವುದು ಪರಿಣಾಮಕಾರಿಯಾಗಲಿದೆ. ಆದ್ದರಿಂದ ಜಪಾನ್ ಭೇಟಿಯ ಸಮಯದಲ್ಲಿ ಅಲ್ಲಿನ ಒಂದು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ಈ ಬಗ್ಗೆ ಮಾತುಕತೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಜಪಾನಿನ 1,400 ಕಂಪನಿಗಳಿವೆ. ಇದರಲ್ಲಿ ಅರ್ಧದಷ್ಟು ಕಂಪನಿಗಳು ತಯಾರಿಕೆ ವಲಯವೊಂದರಲ್ಲೇ ಸಕ್ರಿಯವಾಗಿವೆ. ಭಾರತದಲ್ಲಿನ ಎಫ್.ಡಿ.ಐ ಹೂಡಿಕೆಯಲ್ಲಿ ಜಪಾನ್ ಐದನೆಯ ಸ್ಥಾನದಲ್ಲಿದ್ದು, ಕಳೆದ ಎರಡು ವರ್ಷಗಳಲ್ಲಿ ಎರಡೂ ದೇಶಗಳ ನಡುವೆ 13 ಬಿಲಿಯನ್ ಡಾಲರ್ ಮೊತ್ತದ 170 ಒಡಂಬಡಿಕೆಗಳಾಗಿವೆ. ಜಪಾನ್ ಮತ್ತು ರಾಜ್ಯದ ನಡುವಿನ ವ್ಯವಹಾರ ಪ್ರಕ್ರಿಯೆಗಳ ನಿರ್ವಹಣೆಗೆ ಟೋಕಿಯೋದಲ್ಲಿ ಪ್ರಪ್ರಥಮ ಬಿಸಿಐಸಿ ಕಚೇರಿ ಆರಂಭಿಸಲಾಗಿದೆ ಎಂದು ಪಾಟೀಲ ವಿವರಿಸಿದ್ದಾರೆ.
ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಆಯುಕ್ತೆ ಗುಂಜನ್ ಕೃಷ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.