ಬೆಂಗಳೂರು: ಕಾಶ್ಮೀರದ ಪಹಲ್ಗಾಂವ್ ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ನಡೆಸಿರುವ ದಾಳಿ ಅತ್ಯಂತ ಹೇಯ ಮತ್ತು ಹೇಡಿತನದ ಕೃತ್ಯವಾಗಿದೆ. ಇದಕ್ಕೆ ಕಾರಣರಾದ ಉಗ್ರಗಾಮಿಗಳನ್ನು ಯಾವ ಮುಲಾಜೂ ಇಲ್ಲದೆ ಸದೆಬಡಿಯುವ ಕೆಲಸ ಆಗಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಬುಧವಾರ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜತೆ ಇಲ್ಲಿ ಮಾತನಾಡಿದ ಅವರು, ‘ಉಗ್ರಗಾಮಿಗಳಿಗೆ ಯಾವುದೇ ಧರ್ಮ, ಜಾತಿ, ಸಂಸ್ಕೃತಿ ಏನೂ ಇಲ್ಲ. ಅಮಾಯಕರ ಹತ್ಯೆ ಅಮಾನುಷ ಕೃತ್ಯ. ಅವರನ್ನು ಹತ್ತಿಕ್ಕಬೇಕಷ್ಟೆ. ಇದಕ್ಕೆ ಪಾಕಿಸ್ತಾನದ ಬೆಂಬಲವಿದ್ದರೆ ಆ ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಲೆಗುಂಪು ಮಾಡಬೇಕು’ ಎಂದಿದ್ದಾರೆ.
ಕಾಶ್ಮೀರದಲ್ಲಿ ಇತ್ತೀಚೆಗೆ ಪರಿಸ್ಥಿತಿ ಸಹಜವಾಗಿತ್ತು. ಅಲ್ಲಿಯ ಜನರು ಕೂಡ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಕೊಂಡು ಸಂತಸದಿಂದ ಇದ್ದರು. ಹೀಗಾಗಿ, ಕೇಂದ್ರ ಸರಕಾರವು ಸೇನಾಪಡೆಗಳನ್ನು ಸ್ವಲ್ಪ ಮಟ್ಟಿಗೆ ಹಿಂತೆಗೆದುಕೊಂಡಿತ್ತು. ಉಗ್ರಗಾಮಿಗಳು ಇದರ ದುರ್ಲಾಭ ಪಡೆದುಕೊಂಡು ಈ ಬರ್ಬರ ಕೃತ್ಯ ಎಸಗಿದ್ದಾರೆ. ಕೇಂದ್ರವು ಈಗ ಪುನಃ ಮತ್ತಷ್ಟು ಸೇನಾಪಡೆಯನ್ನು ಕಾಶ್ಮೀರದಲ್ಲಿ ನಿಯೋಜಿಸಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಈ ದುರಂತದಲ್ಲಿ ರಾಜ್ಯದ ಇಬ್ಬರು ಅಸುನೀಗಿದ್ದಾರೆ. ಅವರ ಕುಟುಂಬಗಳಿಗೆ ಸರಕಾರ ಎಲ್ಲಾ ನೆರವು ನೀಡಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸಚಿವ ಸಂತೋಷ್ ಲಾಡ್ ಅವರನ್ನು ಕಾಶ್ಮೀರಕ್ಕೆ ಕಳಿಸಿಕೊಟ್ಟು, ತ್ವರಿತವಾಗಿ ಸ್ಪಂದಿಸಿದ್ದಾರೆ ಎಂದು ಪಾಟೀಲ ತಿಳಿಸಿದ್ದಾರೆ.