ಬೆಂಗಳೂರು: ಮಂಗಳವಾರ ನಡೆದ ರಾಜ್ಯಸಭಾ ಚುನಾವಣೆಯ ಫಲಿತಾಂಶ ಘೋಷಣೆಯ ನಂತರ ವಿಧಾನಸೌಧದ ಆವರಣದಲ್ಲಿ ಯಾರಾದರೂ ಪಾಕಿಸ್ತಾನದ ಪರ ಜೈಕಾರ ಹಾಕಿರುವುದು ಸಾಬೀತಾದರೆ ಅಂಥವರನ್ನು ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಅಂತಹ ಶಕ್ತಿಗಳ ವಿರುದ್ಧ ಸರಕಾರ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಿದ್ದು, ಸದ್ಯಕ್ಕೆ ತನಿಖೆ ಆರಂಭಿಸಲಾಗಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಸೈಯದ್ ನಾಸಿರ್ ಹುಸೇನ್ ಅವರ ವಿಜಯೋತ್ಸವದ ಸಂದರ್ಭದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಈ ಬೆಳವಣಿಗೆ ಕುರಿತು ಮಾಧ್ಯಮ ಪ್ರತಿನಿಧಿಗಳು ವಿಧಾನಸೌಧದಲ್ಲಿ ಬುಧವಾರ ಕೇಳಿದ ಪ್ರಶ್ನೆಗಳಿಗೆ ಅವರು ಹೀಗೆ ಉತ್ತರಿಸಿದ್ದಾರೆ.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಮತ್ತು ದೇಶ ವಿಭಜನೆಯನ್ನು ತಡೆಯಲು ಶಕ್ತಿ ಮೀರಿ ಶ್ರಮಿಸಿದ್ದು ಕಾಂಗ್ರೆಸ್ ಪಕ್ಷ. ನಮಗೆ ಯಾರೂ ರಾಷ್ಟ್ರೀಯತೆಯನ್ನಾಗಲಿ, ದೇಶಭಕ್ತಿನ್ನಾಗಲಿ ಹೇಳಿಕೊಡಬೇಕಾಗಿಲ್ಲ. ಯಾರಾದರೂ ಪಾಕ್ ಪರ ಘೋಷಣೆ ಕೂಗಿರುವುದು ದೃಢಪಟ್ಟಲ್ಲಿ ಅಂಥವರಿಗೆ ಉಗ್ರ ಶಿಕ್ಷೆ ಕಾದಿದೆ. ಅಂತಹ ಯಾರನ್ನೂ ರಕ್ಷಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಮತ್ತು ಅಂತಹ ವಿದ್ಯಮಾನ ಖಂಡನಾರ್ಹ ಎಂದು ಅವರು ವಿವರಿಸಿದರು.
ಈಗ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆದ್ದರಿಂದ ಈಗಲೇ ತೀರ್ಮಾನಕ್ಕೆ ಬಂದು, ಯಾರ ಮೇಲೋ ಗೂಬೆ ಕೂರಿಸುವುದು ಸರಿಯಲ್ಲ. ಆದರೆ, ಬಿಜೆಪಿ ಇದಕ್ಕೂ ರಾಜಕೀಯ ಬಣ್ಣ ಬಳಿಯುತ್ತಿದ್ದು, ಲಾಭ ಮಾಡಿಕೊಳ್ಳಲು ಹೊರಟಿದೆ. ಹಿಂದೆ ಇಂತಹ ಘಟನೆಗಳು ವರದಿಯಾದಾಗ ಅವುಗಳ ಹಿಂದೆ ನಿಜವಾಗಿಯೂ ಇದ್ದವರು ಬಿಜೆಪಿಯ ಭಾಗವಾಗಿರುವ ಶ್ರೀರಾಮ ಸೇನೆಯ ಕಾರ್ಯಕರ್ತರು ಎನ್ನುವುದು ಗೊತ್ತಾಯಿತು. ಅಂದಮಾತ್ರಕ್ಕೆ ಈ ಘಟನೆಯಲ್ಲಿ ಯಾರಿಗೂ ರಿಯಾಯಿತಿ ನೀಡಲು ನಾನು ನೋಡುತ್ತಿಲ್ಲ ಅಥವಾ ಇದರ ಹಿಂದೆಯೂ ಬಿಜೆಪಿಯವರೇ ಇದ್ದಾರೆ ಎಂದು ನಾನು ಹೇಳಲು ಹೋಗುವುದಿಲ್ಲ ಎಂದು ಅವರು ಪ್ರತಿಪಾದಿಸಿದರು.
ಬಿಜೆಪಿ ಈ ಘಟನೆಯನ್ನು ಎನ್ ಐಎ ತನಿಖೆಗೆ ವಹಿಸುವಂತೆ ಆಗ್ರಹಿಸುತ್ತಿದೆ. ಎನ್ ಐಎ ಒಂದು ಸ್ವತಂತ್ರ ತನಿಖಾ ಸಂಸ್ಥೆ. ಯಾವ ಘಟನೆಯ ವಿಚಾರಣೆಗೂ ಅದಕ್ಕೆ ಯಾರ ಅನುಮತಿಯೂ ಬೇಕಾಗಿಲ್ಲ. ಅದಕ್ಕೆ ಬೇಕೆನಿಸಿದರೆ ಈ ಘಟನೆಯ ಕುರಿತೂ ಬಂದು ತನಿಖೆ ಮಾಡಲಿ. ಬೇಡ ಎಂದಿರುವವರಾರು. ಪ್ರತಿಪಕ್ಷದ ಸಾಲಿನಲ್ಲಿದ್ದಾಗ ಸಿಬಿಐ, ಇ.ಡಿ ಮುಂತಾದ ತನಿಖಾ ಸಂಸ್ಥೆಗಳನ್ನು ಬೈಯುತ್ತಿದ್ದ ಬಿಜೆಪಿ, ತಾನೇ ಅಧಿಕಾರದಲ್ಲಿರುವಾಗ ಇವುಗಳ ಮೂಲಕವೇ ತನ್ನ ರಾಜಕೀಯ ಎದುರಾಳಿಗಳನ್ನು ಹಣಿಯುತ್ತಿದೆ. ತಮ್ಮ ಸರಕಾರಗಳು ಇರುವ ಕಡೆಗಳಲ್ಲಿ ಅವರು ಒಂದೇಒಂದು ಘಟನೆಯನ್ನೂ ಇಂತಹ ತನಿಖಾ ಸಂಸ್ಥೆಗಳಿಗೆ ವಹಿಸಿಲ್ಲ ಎಂದು ಸಚಿವರು ಟೀಕಿಸಿದರು.