ಬೆಂಗಳೂರು: ರಾಜರಾಜೇಶ್ವರಿ ನಗರ ಹಾಗೂ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಸಭೆ ನಡೆಸಿದರು.
ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಕುರಿತು ಸಭೆ:
ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಬೋರ್ವೆಲ್ ಕೊರೆಯುವ(ರಿಗ್ಸ್) ವಾಹನಗಳನ್ನು ಬಳಿಸಿಕೊಂಡು ನೀರಿನ ಸಮಸ್ಯೆ ಬಗೆಹರಿಸಲು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ವಲಯ ಕಛೇರಿಯಲ್ಲಿ ನಡೆಸಿದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದುರಸ್ತಿಯಲ್ಲಿರುವ ಬೋರ್ ವೆಲ್ ಗಳನ್ನು ಕೂಡಲೆ ಸರಿಪಡಿಸಿ ನೀರು ಪೂರೈಕೆ ಮಾಡಲು ಸೂಚಿಸಲಾಯಿತು.
ರಾಜರಾಜೇಶ್ವರಿ ನಗರ ವಲಯದಲ್ಲಿ 110 ಹಳ್ಳಿಗಳ ಪೈಕಿ 20 ಹಳ್ಳಿಗಳು ಬರಲಿದ್ದು, ಎಲ್ಲಿಯೂ ನೀರಿನ ಅಭಾವವಾಗದಂತೆ ನೋಡಿಕೊಳ್ಳಬೇಕು. ಈ ವಲಯದಲ್ಲಿ 146 ಶುದ್ಧ ಕುಡಿಯುವ ನೀರಿನ ಘಕಟಗಳು ಬರಲಿದ್ದು, 93 ಘಟಕಗಳಿಗೆ ಬೋರ್ ವೆಲ್ ಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ. 36 ಘಟಕಗಳಿಗೆ ಜಲಮಂಡಳಿ ವತಿಯಿಂದ ನೀರು ಪೂರೈಕೆ ಮಾಡಲಾಗುತ್ತಿದ್ದು, 17 ಘಟಕಗಳು ಸ್ಥಗಿತಗೊಂಡಿರುತ್ತವೆ. ಅವುಗಳನ್ನು ಕೂಡಾ ಕಾರ್ಯನಿರ್ವಹಿಸುವಂತೆ ಮಾಡಲು ಸೂಚಿಸಿದರು.
ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ನೀರು ಸಮಸ್ಯೆಯಿರುವ ವಿವಿಧ 91 ಸ್ಥಳಗಳಲ್ಲಿ ಸಿಂಟೆಕ್ಸ್ ಟ್ಯಾಂಕ್ ಗಳನ್ನು ಅಳವಡಿಸಿದ್ದು, ಜಲಮಂಡಳಿಯಿಂದ ನೀರಿನ ವ್ಯವಸ್ಥೆ ಮಾಡಿಕೊಂಡು ನೀರಿನ ಸಮಸ್ಯೆ ಆಗದಂಗೆ ನೋಡಿಕೊಳ್ಳಲು ಸೂಚಿಸಿದರು.
ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಕುರಿತು ಸಭೆ:
ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಹೊಸದಾಗಿ ಬೋರ್ ವೆಲ್ ಗಳನ್ನು ಕೊರೆಸಲು ಗುರುತಿಸಿರುವ ಸ್ಥಳಗಳಲ್ಲಿ ಕೂಡಲೆ ಬೋರ್ ವೆಲ್ ಕೊರೆದು ನೀರಿನ ಸಂಪರ್ಕ ಕಲ್ಪಿಸಲು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಇಂದು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಪಾಲಿಕೆಯ 38 ಹಾಗೂ ಜಲಮಂಡಳಿಯ 18 ನೀರಿನ ಟ್ಯಾಂಕರ್ ಗಳ ಮೂಲಕ ನೀರಿನ ಪೂರೈಕೆ ಮಾಡಲಾಗುತ್ತಿದೆ. 113 ಸ್ಥಳಗಳಲ್ಲಿ ಸಿಂಟೆಕ್ಸ್ ಟ್ಯಾಂಕ್ಗಳನ್ನು ಇರಿಸಲಾಗಿದ್ದು, ಜಲಮಂಡಳಿಯಿಂದ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ 80 ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ, 24 ಘಟಕಗಳು ಸ್ಥಗಿತಗೊಂಡಿದ್ದು, ಜಲಮಮಡಳಿಯಿಂದ ನೀರಿನ ವ್ಯವಸ್ಥೆ ಮಾಡಲು ಸೂಚಿಸಿದರು.
ಈ ವೇಳೆ ವಲಯ ಆಯುಕ್ತರಾದ ಶಿವಾನಂದ ಕಪಾಶಿ, ರಮ್ಯಾ, ವಿಪತ್ತು ನಿರ್ವಹಣೆಯ ನೋಡಲ್ ಅಧಿಕಾರಿಯಾದ ಸುರೋಳ್ಕರ್ ವಿಕಾಸ್ ಕಿಶೋರ್, ಮುಖ್ಯ ಅಭಿಯಂತರರಾದ ರಾಘವೇಂದ್ರ ಪ್ರಸಾದ್, ಶಶಿ ಕುಮಾರ್, ಕಾರ್ಯಪಾಲಕ ಅಭಿಯಂತರರು, ಜಲಮಂಡಳಿ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು