ಬಳ್ಳಾರಿ: ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅನುಸೂಚಿತ ಜಾತಿ ಅನುಸೂಚಿತ ಬುಡಕಟ್ಟುಗಳ ದೌರ್ಜನ್ಯ ನಿಯಂತ್ರಣ ಜಿಲ್ಲಾ ಮಟ್ಟದ ಜಾಗೃತಿ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ದಲಿತರ ಹಲವಾರು ಸಮಸ್ಯೆಗಳನ್ನು ಈಡೇರಿಸುವಂತೆ ಜಿಲ್ಲಾ ಜಾಗೃತಿ ಮೇಲುಸ್ತುವಾರಿ ಸಮಿತಿ ಸದಸ್ಯ ಮೋಹನ್ ಕುಮಾರ್ ದಾನಪ್ಪರವರು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ರವರಿಗೆ ಮನವಿ ಸಲ್ಲಿಸಿದರು,
ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ 5ಜಿ ಜನರೇಷನ್ ಕಾಲದಲ್ಲೂ ಜಾತಿಯತೇ, ದೇವಸ್ಥಾನದೊಳಗೆ ಪ್ರವೇಶ ನೀಡದಿರುವುದು, ಹೊಟೇಲ್ಗಳಲ್ಲಿ ದಲಿತರಿಗೆ ಪ್ರತ್ಯೇಕ ಆಸನ ಪ್ರತ್ಯೇಕ ತಟ್ಟೆ ಲೋಟಗಳಲ್ಲಿ ತಿಂಡಿ ಕೊಡುವ ವ್ಯವಸ್ಥೆಗಳು, ದಲಿತರಿಗೆ ಪ್ರತ್ಯೇಕ ಸ್ಮಶಾನಗಳು ಸೇರಿದಂತೆ ಅಸ್ಪೃಶ್ಯತೆ ಆಚರಣೆ, ದಲಿತರ ಮೇಲೆ ದೌರ್ಜನ್ಯದಂತಹ ಪ್ರಕರಣಗಳು ಇಂದಿಗೂ ಜೀವಂತವಾಗಿರುವುದು ದುರಂತದ ಸಂಗತಿಯಾಗಿದೆ
ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮದ ಬಗ್ಗೆ ಹಾಗೂ ಎಸ್ ಸಿ ಎಸ್ ಟಿ ಜನಾಂಗದವರ ಮೇಲೆ ದೌರ್ಜನ್ಯ, ಅಸ್ಪೃಶ್ಯತೆ ಆಚರಣೆ ಮಾಡುವುದರಿಂದ ಮಾಡುವವರ ವಿರುದ್ಧ ಇರುವ ಕಾನೂನು ಕ್ರಮಗಳ ಬಗ್ಗೆ ಗ್ರಾಮಗಳಲ್ಲಿ ವ್ಯಾಪಕವಾಗಿ ಬೀದಿ ನಾಟಕಗಳ ಬಗ್ಗೆ ನಿರಂತರವಾಗಿ ಜಾಗೃತಿ ಮೂಢಿಸಬೇಕು. ಪ್ರತಿ ಗ್ರಾಮ ಮತ್ತು ನಗರಗಳಲ್ಲಿರುವ ದೇವಸ್ಥಾನಗಳಿಗೆ ದಲಿತ ಸಮುದಾಯದ ವ್ಯಕ್ತಿಗಳ ಪ್ರವೇಶವನ್ನು ತಡೆಯುವುದರಿಂದಾಗುವ ಕಾನೂನಿನ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಕಾಣುವಂತೆ ಫಲಕವನ್ನಿರಿಸಬೇಕು, ಹಾಗೂ ಆಯಾ ದೇವಸ್ಥಾನದ ಆರ್ಚಕರು, ಪೂಜಾರಿಗಳಿಂದ ದಲಿತ ಸಮುದಾಯದ ವ್ಯಕ್ತಿಗಳಿಗೆ ಪ್ರವೇಶವನ್ನು ತಡೆಯದಂತೆ ಮುಚ್ಚಳಿಕೆ ಬರೆಸಿಕೊಳ್ಳಬೇಕು,
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದವರ ಆತ್ಮಸ್ಥೆರ್ಯ ಮೂಢಿಸುವ ನಿಟ್ಟಿನಲ್ಲಿ ಅವರ ಸಮಸ್ಯೆಗಳನ್ನು ಆಲಿಸಿ ಇತ್ಯರ್ಥಪಡಿಸಲು ಪೊಲೀಸ್ ಇಲಾಖೆ ಪ್ರತಿ ತಿಂಗಳ ಎರಡನೇ ಭಾನುವಾರ ದಲಿತರ ದಿನವೆಂದು ಆಚರಿಸುವಂತೆ ಸರ್ಕಾರದ ಆದೇಶಿಸಿದ್ದು ಸದರಿ ಆದೇಶದಂತೆ ಬಳ್ಳಾರಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಯಲ್ಲೂ ಕಡ್ಡಾಯವಾಗಿ ದಲಿತರ ದಿನ ಕಾರ್ಯಕ್ರಮವನ್ನು ರೂಪಿಸಿಕೊಳ್ಳಬೇಕು. ಠಾಣೆಯಲ್ಲಿ ನಡೆಯುವ ದಲಿತರ ದಿನವನ್ನು ದಲಿತ ಕಾಲೋನಿಗಳಲ್ಲಿ ಹಮ್ಮಿಕೊಳ್ಳುವುದರಿಂದ ದಲಿತ ಸಮುದಾಯದವರಿಗೆ ಆತ್ಮಸ್ಥೆರ್ಯ ತುಂಬಿದಂತಾಗುತ್ತದೆ ಹಾಗೂ ದಲಿತರ ದಿನದ ಕಾರ್ಯಕ್ರಮದಲ್ಲಿ ತಾಲೂಕಾಡಳಿತದ ಹಾಗೂ ಇತರೆ ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಆಹ್ವಾನಿಸಿ ಸಾಧ್ಯವಿರುವ ಸಮಸ್ಯೆಗಳನ್ನು ಅಂದೆ ಇತ್ಯರ್ಥಪಡಿಸುವ ಕ್ರಮ ಕೈಗೊಳ್ಳಬೇಕು ಮತ್ತು ಸದರಿ ದಲಿತರ ದಿನದ ಕಾರ್ಯಕ್ರಮ ನಡೆಯುವ ಬಗ್ಗೆ ಮುಂಚಿತವಾಗಿ ಸಮುದಾಯದವರಿಗೆ ಮತ್ತು ಸಮುದಾಯದ ಮುಖಂಡರಿಗೆ ಮಾಹಿತಿ ನೀಡಬೇಕು.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಾಸಿಸುವ ಪ್ರದೇಶಗಳಿಗೆ ಹರಿಜನ ಕೇರಿ, ಛಲವಾದಿ ಕೇರಿ, ವಡ್ಡರ ಓಣಿ ನಾಯಕರ ಓಣಿ ಎಂದು ಕರೆಯುತ್ತಿರುವುದರಿಂದ ಜಾತಿಯತೇ ಆಚರಿಸಿದಂತಾಗುತ್ತಿದ್ದು ಇಂತಹ ಪ್ರದೇಶಗಳಿಗೆ ಗಣ್ಯರ ಹೆಸರನ್ನು ನಾಮಕರಣ ಮಾಡುವ ಬಗ್ಗೆ ಕ್ರಮ ಕೈಗೊಳ್ಳಬೇಕು.
ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಯುಪಿಎಸ್ಸಿ, ಕೆಪಿಎಸ್ಸಿ ಸೇರಿದಂತೆ ಎಲ್ಲಾ ರೀತಿಯ ಹುದ್ದೆಗಳಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲು ಸಮಾಜ ಕಲ್ಯಾಣ ಇಲಾಖೆ ಮತ್ತು ಸದರಿ ಇಲಾಖೆ ವ್ಯಾಪ್ತಿಯಲ್ಲಿರುವ ಎಲ್ಲಾ ನಿಗಮಗಳ ಸಹಯೋಗದಲ್ಲಿ ಅಥವಾ ಜಿಲ್ಲಾ ಖನಿಜ ನಿಧಿಯಿಂದ ಜಿಲ್ಲಾ ತರಬ ತರಬೇತಿ ಕೇಂದ್ರ ಸ್ಥಾಪಿಸಿ ಉಚಿತ ಊಟ ವಸತಿ ನೀಡಿ ತರಬೇತಿ ನೀಡಬೇಕು.
ಎಸ್ ಸಿ ಸಮುದಾಯದವರು ವಾಸಿಸುವ ಕಂಪ್ಲಿಯ 4 ಮತ್ತು 10ನೇ ವಾರ್ಡ್ನ ರಸ್ತೆ ಮತ್ತು ಚರಂಡಿಗಳು ಸುಮಾರು ವರ್ಷಗಳಿಂದ ಹಾಳಾಗಿದ್ದು ರಸ್ತೆ ಬಳಸುವ ಜನ ಪರಿತಪಿಸುವಂತಾಗಿರುತ್ತದೆ ಕೂಡಲೇ ಎಸ್ಪಿ, ಟಿ ಎಸ್ ಪಿ ಯೋಜನೆಯಡಿಯಲ್ಲಿ ಅಥವಾ ಇತರೆ ಯೋಜನೆಯಡಿಯಲ್ಲಿ ರಸ್ತೆಗಳಿಗೆ ಕಾಂಕ್ರೀಟ್/ಡಾಂಬರೀಕರಣ ಹಾಕುವ ಬಗ್ಗೆ ಕ್ರಮ ಕೈಗೊಳ್ಳಬೇಕು,
ಜಿಲ್ಲೆಯಲ್ಲಿ ವೃತ್ತಿ ನಿರತವಾಗಿರುವ ಎಸ್ ಸಿ, ಎಸ್ ಟಿ ಸಮುದಾಯ ವಕೀಲರಿಗೆ ಎಸ್ ಸಿ ಪಿ, ಟಿ ಎಸ್ ಪಿ ಯೋಜನೆ, ಕ್ರಿಯಾ ಯೋಜನೆಯಡಿಯಲ್ಲಿ ಹಣವನ್ನು ಮೀಸಲಿಟ್ಟು ಪ್ರತಿವರ್ಷವು ಆಯಾ ಸ್ಥಳೀಯ ಸಂಸ್ಥೆಗಳ ಮೂಲಕ ಕಾನೂನು ಪುಸ್ತಕಗಳನ್ನು ಮತ್ತು ಲ್ಯಾಪ್ ಟ್ಯಾಪ್ ನೀಡುವ ಮೂಲಕ ಪ್ರೋತ್ಸಾಹ ನೀಡಬೇಕು.
ಕಂಪ್ಲಿ ತಾಲೂಕಿನಲ್ಲಿ ವಾಸಿಸುತ್ತಿರುವ ಎಸ್ ಸಿ ಸಮುದಾಯದ ಸುಮಾರು 8 ಜನ ಯುವಕರು ಹಾರ್ಮೋನ್ ಸಮಸ್ಯೆಯಿಂದ ಮಂಗಳಮುಖಿಯರಾಗಿ ಪರಿವರ್ತನೆಗೊಂಡಿರುವುದು ಕಳವಳಕಾರಿ ವಿಷಯವಾಗಿದ್ದು ಮನೆಯಿಂದ ಹೊರಗಿಡಲ್ಪಟ್ಟಿದ್ದು ಸಮುದಾಯದ ಯುವಕರು ಭೀಕ್ಷಾಟನೆಯಲ್ಲಿ ತೊಡಗಿರುವುದು ಸಮಾಜವು ನಾಚಿಕೆ ಪಡುವಂತಾಗಿದ್ದು ಜಿಲ್ಲಾಡಳಿತವು ಆ ಯುವಕರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ತಲಾ 1 ಲಕ್ಷ ರೂಪಾಯಿಗಳಂತೆ ಸಹಾಯಧನ ನೀಡಬೇಕು ಹಾಗೂ ಜಿಲ್ಲೆಯಲ್ಲಿನ ವಸತಿ ಶಾಲೆ & ನಿಲಯಗಳಲ್ಲಿ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಗುತ್ತಿಗೆ ಆಧಾರದಲ್ಲಿ ಅಡುಗೆ ಸಹಾಯಕರು ಅಥವಾ ಸಹಾಯಕರ ಹುದ್ದೆಯನ್ನ ಅಥವಾ ಜಿಲ್ಲೆಯ ಜಿಲ್ಲಾ ಮತ್ತು ತಾಲೂಕು ಕಛೇರಿಗಳಲ್ಲಿ ಹೊರ ಗುತ್ತಿಗೆಯಾಧಾರದಲ್ಲಿ ಡಿ ದರ್ಜೆಯ ಹುದ್ದೆಗಳಿದ್ದಲ್ಲಿ ಆದ್ಯತೆ ಮೇರೆಗೆ ನೀಡಿ ಭೀಕ್ಷಾಟನೆಯಿಂದ ಮುಕ್ತಿಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಹಾಗೂ ಪಡಿತರ ಚೀಟಿ, ಯಶಸ್ವಿನಿ ಕಾರ್ಡ್ ಸೇರಿದಂತೆ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ದೊರಕುವಂತೆ ಕ್ರಮವಹಿಸಬೇಕು.
ಜಿಲ್ಲೆಯಲ್ಲಿನ ಸ್ಮಶಾನ ಕಾರ್ಮಿಕರು ಎಸ್ ಸಿ ಸಮುದಾಯದವರಾಗಿದ್ದು ಆಯಾ ಗ್ರಾಮ ಮತ್ತು ನಗರಗಳಲ್ಲಿ ಯಾವುದೇ ಜಾತಿಯವರು ಮರಣಹೊಂದಿದರೆ ಸದರಿ ಸಮುದಾಯದವರೇ ಗುಂಡಿ ತೋಡುವ ಹೆಣ ಹೂಳುವ ಮತ್ತು ಸುಡುವ ಕಾರ್ಯವನ್ನು ನಿಭಾಯಿಸುತ್ತಿದ್ದು ಕೆಲವೊಮ್ಮೆ ಮಾರಾಣಾಂತಿಕ ಖಾಯಿಲೆ, ಹಾಗೂ ಇತರೆ ಸೋಂಕಿನ ಖಾಯಿಲೆಯಿಂದ ಮರಣ ಹೊಂದಿದ ದೇಹಗಳನ್ನು ಹೂಳುವ ಸುಡುವ ಕಾರ್ಯವನ್ನು ಮಾಡುವುದರಿಂದ ಅನ್ಯರೀತಿಯ ರೋಗಗಳಿಗೆ ಕಾರ್ಮಿಕರು ತುತ್ತಾಗುತ್ತಿದ್ದು ಇವರುಗಳಿಗೆ ಯಾವುದೇ ಆರೋಗ್ಯ ರಕ್ಷಣೆಯಿಲ್ಲಾದಂತಾಗಿದ್ದು ಜಿಲ್ಲಾಡಳಿತವು ಇವರುಗಳನ್ನು ಡಿ ದರ್ಜೆಯ ಗುತ್ತಿಗೆ ನೌಕರರೆಂದು ಪರಿಗಣಿಸಿ ಕುಟುಂಬಕ್ಕೆ ಇ ಎಸ್ ಐ ಕಾರ್ಡ್ ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕು.
ಕಂಪ್ಲಿ ತಾಲೂಕಿನಲ್ಲಿ ಎಸ್ ಸಿ ಎಸ್ ಟಿ ಸಮುದಾಯದ ಯುವಕರು ಸೇರಿ ಸುಮಾರು 3-4 ವರ್ಷಗಳ ಹಿಂದೆ ಕಂಪ್ಲಿ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಂಸ್ಥೆಯನ್ನು ನಿಯಮದಂತೆ ನೊಂದಣಿ ಮಾಡಿ ಸರ್ಕಾರದ ಯಾವುದೇ ಸೌಲಭ್ಯ ಪಡೆಯದೇ ತಾಲೂಕಿನ 200 ರಿಂದ 250 ಜನ ದಲಿತ ಸಮುದಾಯದ ಯುವಕ ಯುವತಿಯರಿಗೆ ಕಬಡ್ಡಿ ಕುಸ್ತಿ ಸೇರಿದಂತೆ ಇತರೆ ಕ್ರೀಡೆಯನ್ನು ಸಮುದಾಯದ ಯುವಕರು ತಮ್ಮ ವೈಯಕ್ತಿಕ ಹಣದಿಂದ ಉಚಿತವಾಗಿ ತರಬೇತಿ ನೀಡಿ ಜಿಲ್ಲಾ ಮಟ್ಟ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಗಳಿಗೆ ಕಳುಹಿಸಿಕೊಡುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು ಸದರಿ ಸಂಸ್ಥೆಗೆ ಎಸ್ ಸಿ ಪಿ, ಟಿ ಎಸ್ ಪಿ ಯೋಜನೆಯಡಿಯಲ್ಲಿ ಕ್ರೀಡೆಗೆ ಬೇಕಾಗಿರುವ ಕಬಡ್ಡಿ ಕ್ರೀಡೆಗೆ ಮ್ಯಾಟ್ಗಳು ಸೇರಿದಂತೆ ಕ್ರೀಡಾ ಸಾಮಾಗ್ರಿಗಳನ್ನು ನೀಡಿ ದಲಿತ ಸಮುದಾಯದ ಕ್ರೀಡಾಪಟುಗಳನ್ನು ಬೆಳೆಸುವ ಬಗ್ಗೆ ಕ್ರಮ ಕೈಗೊಳ್ಳಬೇಕು.
ಇತ್ತಿಚ್ಚೆಗೆ ಜಿಲ್ಲೆಯ ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳಿಗೆ ನಿಲಯದ ಸಿಬ್ಬಂದಿಗಳು ದೌರ್ಜನ್ಯ, ಹಲ್ಲೆ ಮಾಡುವ ಪ್ರಸಂಗಗಳು ಹೆಚ್ಚಾಗುತ್ತಿದ್ದು ಜಿಲ್ಲೆಯ ಎಲ್ಲಾ ವಸತಿ ನಿಲಯ ಮತ್ತು ವಸತಿ ಶಾಲೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಹಾಗೂ ಹಲ್ಲೆ ಮಾಡಿದ ಸಿಬ್ಬಂದಿಯನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಹಾಗೂ ಅವರ ವಿರುದ್ಧ ಸದರಿ ಎಸ್ ಸಿ ಎಸ್ ಟಿ ಅಟ್ರಾಸಿಟಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಬೇಕು ಹಾಗೂ ಮತ್ತೊಮ್ಮೆ ಇಂತಹ ಪ್ರಕರಣಗಳುಮರುಕಳಿಸದಂತೆ ಎಚ್ಚರವಹಿಸಬೇಕು,
ಜಿಲ್ಲೆಯ ಯಾವುದೇ ಗ್ರಾಮ ನಗರಗಳಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ರವರ ಭಾವಚಿತ್ರಗಳಿಗೆ, ಮೂರ್ತಿಗಳಿಗೆ ಅವಮಾನ ಮಾಡಿದ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಅಂತಹ ಕಿಡಗೇಡಿಗಳನ್ನು ಬಂಧಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕು
ದಲಿತ ಸಮುದಾಯದವರ ಮೇಲೆ ರೌಡಿ ಶೀಟ್ ತೆರೆದಿದ್ದಲ್ಲಿ ಕ್ರಿಮಿನಲ್ ಹಿನ್ನಲೆಯಿಲ್ಲದವರ ಮತ್ತು ಸಮರ್ಥನೀಯವಲ್ಲದ ವ್ಯಕ್ತಿಗಳ ಪಟ್ಟಿಯನ್ನು ಪರೀಶೀಲಿಸಿ ರೌಡಿ ಶೀಟ್ ಪಟ್ಟಿಯಿಂದ ಕೈಬಿಡುವಂತೆ ಕ್ರಮವಹಿಸಬೇಕು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗಳು ಕಲೆ. ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸೇವೆ ಸಲ್ಲಿಸಿ ಸಾಧನೆ ಮಾಡಿರುವ ವ್ಯಕ್ತಿಗಳನ್ನು ಗುರುತಿಸಿ ಎಪ್ರಿಲ್ 14 ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ರವರ ಜನ್ಮದಿನದಂದು ಗಣ್ಯರ ಹೆಸರಿನಲ್ಲಿ ಗೌರವ ಸನ್ಮಾನ ಪ್ರಶಸ್ತಿಗಳನ್ನು ನೀಡಿ ಆಯಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ಪ್ರೋತ್ಸಾಹ ಧನ ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಜಾಗೃತಿ ಮೇಲುಸ್ತುವಾರಿ ಸಮಿತಿ ಸದಸ್ಯ ಮೋಹನ್ ಕುಮಾರ್ ದಾನಪ್ಪನವರು ಒತ್ತಾಯಿಸಿದರು!