ಬೆಂಗಳೂರು : ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪ್ರಥಮ ಏಕಾದಶಿ ಪ್ರಯುಕ್ತ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಸುದರ್ಶನ ಹೋಮದೊಂದಿಗೆ ಭಕ್ತರಿಗೆ ತಪ್ತಮುದ್ರಾಧಾರಣೆಯನ್ನು ಮಾಡಿದರು.
ಬೆಳಗ್ಗೆ 6:30ಕ್ಕೆ ಶ್ರೀರಾಮದೇವರ ಸಂಸ್ಥಾನ ಪೂಜೆಯನ್ನು ನೆರವೇರಿಸಿ ನಂತರ ಸುವರ್ಣದ ತೊಟ್ಟಿಲಿನಲ್ಲಿ ಮೂಲ ರಾಮದೇವರಿಗೆ ಮಂಗಳಾರತಿಯನ್ನು ನೆರವೇರಿಸಿ ಸುದರ್ಶನ ಹೋಮದೊಂದಿಗೆ ತಪ್ತಮುದ್ರಾಧಾರಣೆಯನ್ನು ತಾವು ಸ್ವೀಕರಿಸಿ, 35,000ಕ್ಕೂ ಮಿಗಿಲಾಗಿ ಸಹಸ್ರಾರು ಶಿಷ್ಯರಿಗೆ ಭಕ್ತರಿಗೆ ಬೆಳಗ್ಗೆ 7:30 ರಿಂದ ರಾತ್ರಿ 10:30ರವರೆಗೂ ಮುದ್ರಾಧಾರಣೆಯನ್ನು ನೆರವೇರಿಸಿದರು.
ಬೆಳಗ್ಗೆಯಿಂದ ರಾತ್ರಿಯವರೆಗೆ ನಾಡಿನ ಪ್ರಖ್ಯಾತ ವಿದ್ವಾಂಸರುಗಳಿಂದ “ಅಖಂಡ ಭಾಗವತ” ಪ್ರವಚನ ಆಯೋಜಿಸಿತ್ತು. ಈ ಎಲ್ಲಾ ಕಾರ್ಯಕ್ರಮಗಳು ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಜರುಗಿದವು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು.
ಈ ಸಂದರ್ಭದಲ್ಲಿ ಮುದ್ರಾಧಾರಣೆ ಸ್ವೀಕರಿಸಲು ಆಗಮಿಸಿದ ಶಿಷ್ಯರಿಗಾಗಿ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ವಯೋವೃದ್ಧರಿಗೂ, ವಿಕಲಚೇತನರಿಗೂ ಪ್ರತ್ಯೇಕ ವ್ಯವಸ್ಥೆಯೂ ಮಾಡಲಾಗಿತ್ತು. ಈ ವ್ಯವಸ್ಥೆಯನ್ನು ಕಂಡ ಶಿಷ್ಯರು ಭಕ್ತರು ಸಂತೋಷವನ್ನು ವ್ಯಕ್ತಪಡಿಸುತ್ತಾ ಮುದ್ರಾಧಾರಣವನ್ನು ಸ್ವೀಕರಿಸಿ, ಶ್ರೀ ಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾದರು.
ಈ ಸಂದರ್ಭದಲ್ಲಿ ಚಿತ್ರನಟಿಯರಾದ ತಾರಾ ಅನುರಾಧ ಮತ್ತು ಪ್ರೇಮ, ಸುಜಾತ ಅಕ್ಷಯ್ ರವರು ಕೂಡ ಮುದ್ರಾಧಾರಣವನ್ನು ಸ್ವೀಕರಿಸಿ ಗುರುಗಳ ಅನುಗ್ರಹಕ್ಕೆ ಪಾತ್ರರಾದರು.