ನವದೆಹಲಿ / ಬೆಂಗಳೂರು : ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪನವರು ನವದೆಹಲಿಯ ಇಎಸ್ಐಸಿ ಭವನದಲ್ಲಿ ಕೇಂದ್ರದ ಸೂಕ್ಷ್ಮ ಮತ್ತು ಸಣ್ಣ, ಮದ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಸಚಿವರಾದ ಶೋಭಾ ಕರಂದ್ಲಾಜೆರವರನ್ನು ಭೇಟಿ ಮಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೌಶಲ್ಯ ತರಬೇತಿ ನೀಡಲು ಅನುಕೂಲವಾಗುವಂತೆ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಮನವಿಯನ್ನು ಸಲ್ಲಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಕ್ಷೇತ್ರದಲ್ಲಿ ಉದ್ಯಮ ಪೋರ್ಟಲ್ ಅಡಿಯಲ್ಲಿ ನೋಂದಾಯಿಸಲಾದ 45000 ಎಂಎಸ್ಎಂಇ ಘಟಕಗಳು ಸುಮಾರು ನಾಲ್ಕು ಲಕ್ಷ ಉದ್ಯೋಗಾವಕಾಶದೊಂದಿಗೆ ಕಾರ್ಯನಿರ್ವಹಿಸುತ್ತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯು ನುರಿತ ಮತ್ತು ಕೌಶಲ್ಯ ರಹಿತ ಯುವಕರನ್ನು ಹೊಂದಿದ್ದು, ಬೇಡಿಕೆ ಆಧಾರಿತ ಕೌಶಲ್ಯ ತರಬೇತಿಗಳನ್ನು ನೀಡುವ ಮೂಲಕ ಮೇಲಿನ ವಲಯಗಳಲ್ಲಿ ಕೌಶಲ್ಯ ತರಬೇತಿ ಹೆಚ್ಚಿಸುವ ಸಲುವಾಗಿ ಸಹಕರಿಸುವಂತೆ ಹಾಗೂ ಉದ್ಯಮದ ಬೇಡಿಕೆ ಆಧಾರಿತ ಎನ್ಎಸ್ಐಸಿ ತಾಂತ್ರಿಕ ಸೇವಾ ಕೇಂದ್ರ / ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಮಂಜೂರು ಮಾಡಲು ಕೋರಿದರು.
ಉತ್ತಮ ಕೈಗಾರಿಕೆಗಳ ನಿರ್ಮಾಣಕ್ಕಾಗಿ ಅಗತ್ಯವಿರುವ ಭೂಮಿ ಮತ್ತು ಇತರ ಮೂಲಸೌಕರ್ಯಗಳಾದ ರಸ್ತೆ, ವಿದ್ಯುತ್ ಮತ್ತು ನೀರಿನ ಪೂರೈಕೆಯನ್ನು ಒದಗಿಸಲು ಸಿದ್ದರಿದ್ದು ತಾವು ಅನುಮತಿ ನೀಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸಹಕರಿಸಲು ಜಿಲ್ಲೆಯಲ್ಲಿ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರದ ಯೋಜನೆಯನ್ನು ಸಾಧ್ಯವಾದಷ್ಟು ಬೇಗ ಮಂಜೂರು ಮಾಡಲು ಕೋರಿ ಸಚಿವರಿಗೆ ವಿನಂತಿಸಿದರು.