ಬೆಂಗಳೂರು: ಹಿರಿಯ ಅಭಿನೇತ್ರಿ, ಬಹುಭಾಷಾ ನಟಿ, ಪದ್ಮಭೂಷಣ ಡಾ.ಬಿ ಸರೋಜಾದೇವಿ ಅವರ ನಿಧನಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಸಂತಾಪ ಸೂಚಿಸಿದ್ದಾರೆ.
ಶೋಕಸಂದೇಶ ನೀಡಿರುವ ಅವರು, ಕನ್ನಡ ನೆಲದವರಾಗಿದ್ದ ಸರೋಜಾದೇವಿ ಅವರು ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳ ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕ ನಟಿಯಾಗಿ ಮನೋಜ್ಞ ಅಭಿನಯ ನೀಡಿದ್ದರು. ಕಲಾಪ್ರೇಮಿಗಳ ಮನಸ್ಸಿನಲ್ಲಿ ಅವರ ಹೆಸರು ಅಚ್ಚಳಿಯದೆ ಉಳಿಯಲಿದೆ ಎಂದು ಸ್ಮರಿಸಿಕೊಂಡಿದ್ದಾರೆ.
ಐದು ದಶಕಗಳಿಗೂ ಹೆಚ್ಚು ಕಾಲ ಅವರು ಕಲಾ ಸೇವೆ ಮಾಡಿದ್ದು, ತಮ್ಮ ಕಾಲದ ದಿಗ್ಗಜ ನಟರಾದ ರಾಜಕುಮಾರ್, ಎನ್ ಟಿ ರಾಮರಾವ್, ಎಂ ಜಿ ರಾಮಚಂದ್ರನ್ ಮುಂತಾದವರ ಜೊತೆ ನಟಿಸಿದ್ದರು. ಅವರ ನಟನೆಯ ಕಿತ್ತೂರು ಚೆನ್ನಮ್ಮ, ಬಭ್ರುವಾಹನ ಮುಂತಾದ ಸಿನಿಮಾಗಳು ಚಿರಸ್ಥಾಯಿಯಾಗಿ ಇವೆ ಎಂದು ಅವರು ಹೇಳಿದ್ದಾರೆ.
ಸರೋಜಾದೇವಿ ಅವರ ಆತ್ಮಕ್ಕೆ ಭಗವಂತನು ಶಾಂತಿ ನೀಡಲಿ ಮತ್ತು ಅಭಿಮಾನಿಗಳಿಗೆ ನೋವನ್ನು ತಡೆದುಕೊಳ್ಳುವ ಶಕ್ತಿ ನೀಡಲೆಂದು ಪಾಟೀಲ ಪ್ರಾರ್ಥಿಸಿದ್ದಾರೆ.