ಬೆಂಗಳೂರು: ಜಪಾನ್ ನಿಂದ ರಾಜ್ಯಕ್ಕೆ ಹೆಚ್ಚಿನ ಹೂಡಿಕೆ ತರಲು ಪೂರಕವಾಗಿ ಈಗಾಗಲೇ ಹೂಡಿಕೆ ಮಾಡಿರುವ ಜಪಾನ್ ದೇಶದ ಕಂಪನಿಗಳೇ ಕರ್ನಾಟಕದ ರಾಯಭಾರಿಗಳಾಗಿ ಕಾರ್ಯನಿರ್ವಹಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಇಲ್ಲಿ ಕರೆ ನೀಡಿದರು.
ಇಲ್ಲಿನ ಜಪಾನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ (ಜೆಸಿಸಿಐ) ಇಲ್ಲಿ ಏರ್ಪಡಿಸಿದ್ದ ರಾಜ್ಯದಲ್ಲಿ ನೆಲೆಯೂರಿರುವ ಜಪಾನ್ ಮೂಲದ ಉದ್ಯಮ ಸಂಸ್ಥೆಗಳ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರ್ನಾಟಕ ಹೇಗೆ ಹೂಡಿಕೆ ಸ್ನೇಹಿ? ಇಲ್ಲಿ ಲಭ್ಯ ಇರುವ ಮಾನವ ಸಂಪನ್ಮೂಲ, ಕಾನೂನು ಸುವ್ಯವಸ್ಥೆ, ಹವಾಮಾನ ಇತ್ಯಾದಿ ವಿಷಯಗಳ ಬಗ್ಗೆ ತಮ್ಮ ದೇಶದ ಇತರ ಕಂಪನಿಗಳಿಗೂ ತಿಳಿಸುವಂತೆ ಅವರು ಕರೆ ನೀಡಿದರು.
ತಮ್ಮ ನೇತೃತ್ವದ ನಿಯೋಗ ಇತ್ತೀಚೆಗಷ್ಟೆ ಜಪಾನ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪರಸ್ಪರ ಲಾಭದ ಅವಕಾಶಗಳಿರುವ ಹಲವಾರು ಹೂಡಿಕೆ ಸಾಧ್ಯತೆಗಳನ್ನು ಗುರುತಿಸಲಾಯಿತು. ಅದೊಂದು ಫಲಪ್ರದವಾದ ಭೇಟಿಯಾಗಿತ್ತು. ಇದೇ ವೇಳೆ, ಜಪಾನ್ ನ ಹಲವಾರು ಅಂಶಗಳು, ಅದರಲ್ಲೂ ಅಲ್ಲಿನ ಸಾರಿಗೆ ವ್ಯವಸ್ಥೆ ವೈಯಕ್ತಿಕವಾಗಿ ತಮಗೆ ಅತ್ಯಂತ ಹೆಚ್ಚಿನ ಅಚ್ಚರಿ ಮೂಡಿಸಿತು ಎಂದು ವಿವರಿಸಿದರು.
ಬರುವ ಫೆಬ್ರುವರಿ 12-14ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಎಲ್ಲ ಉದ್ಯಮ ಪ್ರತಿನಿಧಿಗಳಲ್ಲಿ ಮನವಿ ಮಾಡಿದರು.
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ ಅವರು ಈ ಸಂದರ್ಭದಲ್ಲಿ ಮಾತನಾಡಿ, ಹೂಡಿಕೆ ಆಧಾರದ ಮೇಲೆ ರಿಯಾಯಿತಿ ಗಳನ್ನು ನೀಡುವ ವ್ಯವಸ್ಥೆ ರೂಪಿಸಲಾಗಿದ್ದು, ತಮ್ಮ ದೇಶದ ಇತರ ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡುವ ಹಾಗೆ ಮಾಡಬೇಕು ಎಂದರು.
ಬೆಂಗಳೂರಿನಲ್ಲಿನ ಜಪಾನ್ ಕಾನ್ಸುಲೇಟ್ ಜನರಲ್ ಟ್ಸುಟೊಮು ನಕಾನೆ, ಉಪ ಕಾನ್ಸುಲೇಟ್ ಜನರಲ್ ಹೊಕುಟೊ ಕಾಯ ಸೇರಿದಂತೆ ನೂರಕ್ಕೂ ಹೆಚ್ಚು ಜಪಾನಿ ಉದ್ಯಮಿಗಳು ಈ ಸಂದರ್ಭದಲ್ಲಿ ಇದ್ದರು.