ಬೆಂಗಳೂರು : ಗೃಹಲಕ್ಷ್ಮಿ ಹಣ ಬಿಡುಗಡೆಗೆ ಆಗ್ರಹಿಸಿ ಮತ್ತು ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ಆಡಳಿತವನ್ನು ಖಂಡಿಸಿ ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಜೆಡಿಎಸ್ ಪಕ್ಷದ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಈಗಾಗಲೇ ಬೆಂಗಳೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಗೃಹಲಕ್ಷ್ಮಿ ಹಣ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದೆ. ಆದರ ಮುಂದುವರೆದ ಭಾಗವಾಗಿ ಇಂದು ಜೆಡಿಎಸ್ ಶಾಸಕರು ಹಾಗೂ ವಿಧಾನ ಪರಿಷತ್ ಸದ್ಯಸರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹಣ ಬಿಡುಗಡೆ ದಿನಾಂಕವನ್ನು ಪ್ರಕಟಿಸಿಸುವ ವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಸರ್ಕಾರ ವಿರುದ್ಧ ಜೆಡಿಎಸ್ ನಾಯಕರು ಆಕ್ರೋಶವ್ಯಕ್ತ ಪಡಿಸಿದರು.
*ಮಹಿಳೆಯರಿಗೆ ಅನ್ಯಾಯ ಮಾಡುತ್ತಿದೆ*
ಈ ವೇಳೆ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು ಅವರು ರಾಜ್ಯಸರ್ಕಾರ ಮಹಿಳೆಯರಿಗೆ ಅನ್ಯಾಯ ಮಾಡುತ್ತಿದೆ. ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸ್ವಂತ ಹಣವೆಂಬಂತೆ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ. ಯಾವಾಗ ಬೇಕೋ ಆಗ ಮಾತ್ರ ಜಮೆ ಮಾಡುತ್ತಾರೆ. ಬಹುತೇಕ ಚುನಾವಣಾ ಸಂದರ್ಭದಲ್ಲೇ ಗೃಹಲಕ್ಷ್ಮಿ ಹಣ ಬಿಡುಗಡೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
*ಅಧಿಕಾರಿಗಳಿಗೆ ರಕ್ಷಣೆ ಇಲ್ಲ*
ಪಶುಸಂಗೋಪನ ಸಚಿವ ವೆಂಕಟೇಶ್ ಅವರು ವೈರಲ್ ಆಡಿಯೋ ವಿಚಾರಕ್ಕೆ ಮಾತಡಿದ ಅವರು ; ಸಚಿವರ ಅಧಿಕಾರಿಗಳಿಗೆ ಫೋನಿನಲ್ಲಿ ಧಮ್ಕಿ ಹಾಕಿದ್ದಾರೆ. ನಮ ಪಕ್ಷದ ವಿರುದ್ಧ ಅವಾಚ್ಯ ಶಬ್ದವನ್ನು ಬಳಕೆ ಮಾಡಿದ್ದಾರೆ. ಇದರ ಬಗ್ಗೆ ನಾವು ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡುತ್ತೇವೆ. ಅಧಿಕಾರಿಗಳಿಗೆ ಈ ಸರ್ಕಾರದಲ್ಲಿ ರಕ್ಷಣೆ ಇಲ್ಲದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮೈಕ್ರೋ ಫೈನಾನ್ಸ್ ಹಾವಳಿ ರಾಜ್ಯದಲ್ಲಿ ಹೆಚ್ಚಾಗಿದೆ. ಗುತ್ತಿಗೆದಾರರ ಬಾಕಿ ಬಿಲ್ಗಳು ಬಿಡುಗಡೆಯಾಗುತ್ತಿಲ್ಲ. ಎಸ್ಸಿಪಿ /ಟಿಎಸ್ಪಿ ಹಣ ದುರ್ಬಳಕೆಯಾಗುತ್ತದೆ. ಸಚಿವರೊಬ್ಬರು ಜೈಲಿಗೆ ಹೋಗಿಬಂದರೂ ಸರ್ಕಾರಕ್ಕೆ ಬುದ್ಧಿ ಬಂದಿಲ್ಲ. ಮುಂದಿನ ದಿನಗಳಲ್ಲಿ ಜನ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.
*ಗೃಹಲಕ್ಷ್ಮೀ ಹಣ ಬಿಡುಗಡೆಗೆ ದಿನಾಂಕ ನಿಗದಿ ಮಾಡಿ*
ಶಾಸಕ ಎಂ.ಪಿ.ಕೃಷ್ಣಪ್ಪ ಮಾತನಾಡಿ, ಗ್ಯಾರಂಟಿ ಯೋಜನೆಯ ಹಣ ಬಿಡುಗಡೆಗೆ ದಿನಾಂಕ ನಿಗದಿ ಮಾಡಬೇಕು. ಚುನಾವಣೆ ಬಂದಾಗ 2 ಸಾವಿರ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡುವುದು, ಉಳಿದಂತೆ ಅದನ್ನು ಮುಂದೂಡಿಕೆ ಮಾಡುವುದು ಸರಿಯಲ್ಲ ಎಂದರು. ಜಿ.ಪಂ. ಹಾಗೂ ತಾ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಾಣುವುದು ಸ್ಪಷ್ಟವಾಗಿದೆ. ಅದಕ್ಕಾಗಿಯೇ ಚುನಾವಣೆಯನ್ನು ಮುಂದೂಡಿಕೆ ಮಾಡಿಕೊಂಡು ಬರುತ್ತಿದ್ದಾರೆ. ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ ಯೋಜನೆ ಹಣದಿಂದ ಕಾಂಗ್ರೆಸ್ಗೆ ಲಾಭವಾಗುವುದಿಲ್ಲ ಎಂದು ಹೇಳಿದರು.
ಇದೇ ವೇಳೆ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು, ಶಾಸಕರುಗಳಾದ ಎಂ.ಟಿ. ಕೃಷ್ಣಪ್ಪ ಸಿ.ಎನ್. ಬಾಲಕೃಷ್ಣ, ನೇಮಿರಾಜ್ ನಾಯಕ್, ಜಿ.ಡಿ. ಹರೀಶ್ ಗೌಡ ಅವರು, ಬಿ.ಎನ್. ರವಿಕುಮಾರ್ ಅವರು, ಶಾರದಾ ಪೂರ್ಯನಾಯಕ್, ಶ್ರೀಮತಿ ಕರೆಮ್ಮ ಜಿ. ನಾಯಕ್, ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡ,ಇಂಚರ ಗೋವಿಂದರಾಜು, ಸಿ.ಎನ್. ಮಂಜೇಗೌಡ ಅವರು, ಟಿ.ಎ. ಶರವಣ ಅವರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.