ಬೆಂಗಳೂರು: ಹಲವಾರು ವಿಷಯಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ನಗೆಪಾಟಲಿಗೆ ಈಡಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಜ್.ಡಿ.ಕುಮಾರಸ್ವಾಮಿ ಅವರು ಟೀಕಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ನಬಾರ್ಡ್ ಸಾಲ ಮಿತಿ ವಿಷಯ ಹಾಗೂ ಬಿಪಿಎಲ್ ಕಾರ್ಡ್ ರದ್ದು ಸಂಬಂಧಪಟ್ಟ ಹಾಗೆ ಸರ್ಕಾರ ತಪ್ಪು ಮಾಡುತ್ತಿದೆ ಎಂದು ಅವರು ದೂರಿದರು.
ನಬಾರ್ಡ್ ವಿಷಯದಲ್ಲಿ ಸರ್ಕಾರ ರಾಜಕೀಯಾಡುತ್ತಿದೆ. ಇವರು ಯಾರ ಹಿತ ಕಾಪಾಡಿದ್ದಾರೆ? ನಬಾರ್ಡ್ ಸಾಲ ಮಿತಿ ಕೇವಲ ಕರ್ನಾಟಕಕ್ಕೆ ಮಾತ್ರ ಕಡಿಮೆ ಆಗಿದೆಯಾ? ಗುಜರಾತ್ ಸೇರಿದಂತೆ ಎಲ್ಲಾ ರಾಜ್ಯಗಳಿಗೂ ಕಡಿಮೆ ಆಗಿದೆ. ಯಾವ ಕಾರಣಕ್ಕೆ ಕಡಿಮೆ ಮಾಡಲಾಗಿದೆ ಎಂದು ಕೇಂದ್ರದ ಹಣಕಾಸಿನ ಮಂತ್ರಿಗಳೇ ಮುಖ್ಯಮಂತ್ರಿಗಳಿಗೆ ಹೇಳಿರಬೇಕಲ್ಲವೇ? ಮತ್ತೆ ಇವರು ಯಾಕೆ ರಾಜಕೀಯ ಮಾಡುತ್ತಿದ್ದಾರೆ? ಎಂದು ಅವರು ಕೇಳಿದರು.
ಮುಖ್ಯಮಂತ್ರಿ ಅವರು ಹಣಕಾಸು ಸಚಿವರ ಜತೆಯಲ್ಲಿ ಏನೆಲ್ಲಾ ಚರ್ಚೆ ಮಾಡಿದ್ದಾರೆ ಎನ್ನುವುದನ್ನು ಜನರ ಮುಂದೆ ಹೇಳಲಿ. ಅವರು ಏನು ಚರ್ಚೆ ಮಾಡಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಬಿಪಿಎಲ್ ಕಾರ್ಡ್ ಗೊಂದಲಕ್ಕೆ ಸರ್ಕಾರ ಕಾರಣ
ಬಿಪಿಎಲ್ ಕಾರ್ಡ್ ರದ್ದು ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರ ತಪ್ಪುಆಡಿದೆ. ಈ ಬಗ್ಗೆ ಸರಿಯಾದ ಪೂರ್ವ ಸಿದ್ಧತೆ ಮಾಡಿಕೊಂಡಿಲ್ಲ. ಸರ್ಕಾರ ನಗೆಪಾಟಿಲಿಗೆ ಈಡಾಗಿದೆ. ಅದು ವಿಪಕ್ಷಗಳಿಗೆ ಅಸ್ತ್ರ ಆಗುತ್ತಿದೆ. ವಿಪಕ್ಷಗಳು ಅದನ್ನು ಪ್ರಶ್ನೆ ಮಾಡಿದರೆ ರಾಜಕೀಯ ಎಂದು ಸರ್ಕಾರ ದಿಕ್ಕು ತಪ್ಪಿಸುತ್ತಿದೆ. ಬಿಪಿಎಲ್ ಕಾರ್ಡ್ ರದ್ದು ಮಾಡಿ ಎಂದು ನಾವು ಹೇಳಿದ್ದೇವೆಯೇ? ಬೀದಿಬದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ. ಇಂಥಹ ಕಳ್ಳಾಟ ಯಾಕೆ? ಇದನ್ನು ಅನ್ನಭಾಗ್ಯ ಎಂದು ಕರೆಯಬೇಕಾ? ಎಂದು ಕೇಂದ್ರ ಸಚಿವರು ಖಾರವಾಗಿ ಪ್ರತಿಕ್ರಿಯಿಸಿದರು.
ಆಗಿರುವ ತಪ್ಪಿನ ಬಗ್ಗೆ ಮಾತನಾಡಿದರೆ ವಿಪಕ್ಷಗಳು ರಾಜಕೀಯ ಮಾಡುತ್ತಿವೆ ಎನ್ನುವ ಸರ್ಕಾರಕ್ಕೆ, ತಾನು ಮಾಡುತ್ತಿರುವ ರಾಜಕೀಯ ಏನೆಂದು ಗೊತ್ತಾಗುತ್ತಿಲ್ಲವೇ? ನೀವು ಮಾಡುತ್ತಿರುವುದು ರಾಜಕೀಯ ಅಲ್ಲವೇ? ಹಸಿವಿನಿಂದ ಬಳಲುತ್ತಿರುವ ಬಡಜನರ ಅಕ್ಕಿ ಕಿತ್ತುಕೊಳ್ಳುತ್ತಿದ್ದೀರಿ. ಇದ್ಯಾವ ಸೀಮೆ ಅನ್ನಭಾಗ್ಯ? ಎಂದು ಕಿಡಿಕಾರಿದರು ಸಚಿವರು.
1997ರಲ್ಲಿ ದೇವೇಗೌಡರು ಪ್ರಧಾನಿ ಆಗಿದ್ದಾಗ ಅತ್ಯಂತ ಕಡಿಮೆ ಬೆಲೆಗೆ ಅಕ್ಕಿ ಕೊಡಲು ನಿರ್ಧಾರ ಮಾಡಿದ್ದರು. ಅದನ್ನು ನೆನೆಪಿಸಿಕೊಳ್ಳುವ ಔದಾರ್ಯ ಅವರಿಗೆ ಇಲ್ಲದಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಚನ್ನಪಟ್ಟಣದಲ್ಲಿ ಗೆಲ್ಲುತ್ತೇವೆ:
ಚನ್ನಪಟ್ಟಣ ಕ್ಷೇತ್ರದಲ್ಲಿ ಎನ್ ಡಿಎ ಅಭ್ಯರ್ಥಿ ಗೆಲ್ಲುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಜನ ತೀರ್ಮಾನ ಮಾಡಿಯಾಗಿದೆ. ಫಲಿತಾಂಶದಲ್ಲಿ ಗೊತ್ತಾಗಲಿದೆ ಎಂದರು ಸಚಿವರು.