ಬೆಂಗಳೂರು: ಮೊದಲ ಬಾರಿಗೆ ಕೋಲಾರ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ಗೆ ನಿರ್ದೇಶಕರಾಗಿರುವ ದಲಿತ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಸ್ಎನ್ ನಾರಾಯಣಸ್ವಾಮಿ ಅವರನ್ನು ಸಂಘದ ಅಧ್ಯಕ್ಷರನ್ನಾಗಿ ಮಾಡಬೇಕೆಂದು ನಾರಾಯಣಸ್ವಾಮಿಯವರ ಬೆಂಬಲಿಗರು, ಅಭಿಮಾನಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯ ಮಾಡಿದರು.
ಈ ಸಂಬಂಧ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಸಂಘದ ರಾಜ್ಯ ಸಂಚಾಲಕರಾದ ಸಿದ್ದಾರ್ಥ ಆನಂದ್ ಮಾಲೂರು ಅವರು ಮಾತನಾಡಿ, ಕಳೆದ ವಾರ ನಿರ್ದೇಶಕರಗಳ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೊಮುಲ್ ಇತಿಹಾಸದಲ್ಲಿ ಪ್ರಥಮ ಬಾರಿಗೆ ಒಬ್ಬ ದಲಿತ ಬಹುಮತಗಳಿಂದ ಗೆದ್ದು ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಹೀಗಾಗಿ ಕೋಲಾರ ಜಿಲ್ಲೆ ಬಹು ಸಂಖ್ಯಾತರ ದಲಿತ ಮತಗಳಿರುವ ಜಿಲ್ಲೆಯಾಗಿದ್ದು ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು 4 ಎಂಎಲ್ಎಗಳನ್ನು ನೀಡಿರುವ ಜಿಲ್ಲೆಯಾಗಿ. ಶೇಕಡ 90ರಷ್ಟು ದಲಿತರು ಕಾಂಗ್ರೆಸ್ಗೆ ಮತ ನೀಡಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಕಾರಣಿಭೂತರಾಗಿದ್ದಾರೆ.
ಕೋಲಾರ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಇಲ್ಲಿಯವರೆಗೂ ಒಬ್ಬ ದಲಿತ ನಿರ್ದೇಶಕರು ಆಯ್ಕೆ ಆಗದೇ ಇರುವುದು ಬಹುಸಂಖ್ಯಾತರಾಗಿರುವ ಜಿಲ್ಲೆಗೆ ಮತ್ತು ಸಂಖ್ಯೆವಾರು ಪ್ರಾತಿನಿಧ್ಯಕ್ಕೆ ಆದ ಅನ್ಯಾಯವಾಯಿತು. ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ಇಲ್ಲದಿದ್ದರೂ ಈ ಬಾರಿ ಎಸ್ ಎನ್ ನಾರಾಯಣಸ್ವಾಮಿ ಅವರು ನಿರ್ದೇಶಕರಾಗಿ ಆಯ್ಕೆ ಆಗಿರುವುದು ಕಾಂಗ್ರೆಸ್ ಪಕ್ಷಕ್ಕೆ ವರ್ಚಸ್ಸು ಹೆಚ್ಚಿದೆ ಎಂದರು.
ಕಾಂಗ್ರೆಸ್ ಪಕ್ಷವು ಅಹಿಂದ ಸಿದ್ಧಾಂತದ ಮೇಲೆ ಹಲವು ಬಾರಿ ಅಧಿಕಾರಕ್ಕೆ ಬಂದಿದ್ದು ಒಮ್ಮೆಯೂ ಕೊಮುಲ್ ನಲ್ಲಿ ಅವಕಾಶ ಸಿಗದ ದಲಿತರನ್ನು ಅಧ್ಯಕ್ಷರನ್ನಾಗಿ ಮಾಡಿ ಕಾಂಗ್ರೆಸ್ ಕೋಲಾರ ಜಿಲ್ಲೆ ದಲಿತರ ಋಣ ತೀರಿಸಬೇಕಾಗಿದೆ ಎಂದು ಮುಖ್ಯಮಂತ್ರಿಗಳಿಗೆ ಒತ್ತಾಯವನ್ನು ಸಹ ಮಾಡಿದರು . ಎಸ್ ಎನ್ ನಾರಾಯಣಸ್ವಾಮಿ ಅವರು ಮೂರು ಬಾರಿ ಶಾಸಕರು ಅಷ್ಟೇ ಅಲ್ಲದೆ ಕರ್ನಾಟಕದ ಅಭಿವೃದ್ಧಿ ಹೊಂದಿದ ತಾಲೂಕುಗಳಲ್ಲಿ ಬಂಗಾರಪೇಟೆಯನ್ನು ಪಕ್ಷಕ್ಕೆ ಹೆಚ್ಚು ಮನ್ನಣೆಯನ್ನು ತಂದಿರುವ ಕ್ಷೇತ್ರವಾಗಿದೆ.
ಶಾಸಕ ನಂಜೇಗೌಡರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ
ಇನ್ನು ಈಗ ಹಾಲಿ ನಿರ್ದೇಶಕರಾಗಿರುವ ಎಸ್ಎನ್ ನಾರಾಯಣಸ್ವಾಮಿ ಅವರಿಗೆ ಪ್ರತಿಸ್ಪರ್ಧಿಯಾಗಿ ಮಾಲೂರು ಶಾಸಕರಾದ ನಂಜೇಗೌಡರ ಮೇಲೆ ಇಡಿ ಕೇಸ್ , ನೇಮಕಾತಿ ಹಗರಣ, ಅಕ್ರಮ ದಾಖಲಾತಿಗಳನ್ನು ಸೃಷ್ಟಿಸಿ ಸರ್ಕಾರಿ ಜಮೀನು ಮಂಜೂರು ಆರೋಪ, 200 ಕೋಟಿ ಮೇಘ ಡೈರಿ ಹಗರಣ, 140 ಕೋಟಿ ರಾಜಧನ ವಂಚನೆ ಸೇರಿದಂತೆ ಅನೇಕ ಭ್ರಷ್ಟಾಚಾರದ ಕೇಸುಗಳ ಜೊತೆಗೆ ಆರೋಪಗಳು ಇದ್ದರೂ ಸಹ ಇವೆಲ್ಲವೂ ಇತ್ಯರ್ಥವಾಗದೆ ಅವರಿಗೆ ಅಧ್ಯಕ್ಷ ಸ್ಥಾನ ನೀಡಿದರೆ ಕಾಂಗ್ರೆಸ್ಗೆ ಮುಖಭಂಗವಾಗುತ್ತದೆ. ಅದರ ಜೊತೆಯಲ್ಲಿಯೇ ಮುಂದಿನ ದಿನಗಳಲ್ಲಿ ದಲಿತರು ಕಾಂಗ್ರೆಸ್ ವಿರುದ್ಧವಾಗಿ ಮತ ಚಲಾವಣೆ ಮಾಡಬೇಕಾಗುತ್ತದೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ ಎಚ್ಚರಿಕೆಯನ್ನೂ ಸಹ ನೀಡಿದರು.
ಇನ್ನು ಪತ್ರಿಕಾಗೋಷ್ಠಿಯಲ್ಲಿ ಸಂಘದ ಶಂಕರ್ ಸೇರಿದಂತೆ ಪದಾಧಿಕಾರಿಗಳು ಹಾಗೂ ಎಸ್ಎನ್ ನಾರಾಯಣಸ್ವಾಮಿಯವರ ಬೆಂಬಲಿಗರು, ನಿರ್ದೇಶಕರುಗಳು, ದಲಿತ ಮುಖಂಡರು ಇದೇ ವೇಳೆ ಉಪಸ್ಥಿತರಿದ್ದರು.