ಬೆಂಗಳೂರು : ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ, ಔಷಧ ಆಡಳಿತವು ರಾಜ್ಯದಲ್ಲಿ ತಯಾರಾಗುವ ಮತ್ತು ಮಾರಾಟಕ್ಕಾಗಿ ಸರಬರಾಜಾಗುತ್ತಿರುವ ಗುಣಮಟ್ಟವಲ್ಲದ ಔಷಧಗಳ ಮತ್ತು ಕಾಂತಿವರ್ಧಕಗಳ ಮೇಲೆ ನಿಯಮಾನುಸಾರ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದು ಮತ್ತು ಉತ್ತಮ ಗುಣಮಟ್ಟದ, ಸುರಕ್ಷಿತ ಹಾಗೂ ಪರಿಣಾಮಕಾರಿ ಔಷಧಗಳನ್ನು ಸರ್ಕಾರ ನಿಗದಿ ಪಡಿಸಿದ ಬೆಲೆಗಳಲ್ಲಿ ಗ್ರಾಹಕರಿಗೆ ದೊರಕುವಂತೆ ಮಾಡುವುದೇ ಇಲಾಖೆಯ ಮುಖ್ಯ ಉದ್ದೇಶವಾಗಿರುತ್ತದೆ.
ಅಂತೆಯೇ ಇಲಾಖೆಯ ಆಹಾರ ಸುರಕ್ಷತಾ ವಿಭಾಗವು ಸಾರ್ವಜನಿಕರು ಸೇವಿಸುವ ಆಹಾರದ ಗುಣಮಟ್ಟ ಮತ್ತು ಸುರಕ್ಷತಾ ಅಂಶಗಳನ್ನು ಖಾತರಿಪಡಿಸುವ ಮೂಲಕ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ.
ಔಷಧ ಆಡಳಿತವು, ಏಪ್ರಿಲ್ 2025ರ ಮಾಹೆಯಲ್ಲಿ ಔಷಧ ಪರೀಕ್ಷಾ ಪ್ರಯೋಗಾಲಯ ಬೆಂಗಳೂರು, ಹುಬ್ಬಳ್ಳಿ, ಬಳ್ಳಾರಿಗಳಲ್ಲಿ ಒಟ್ಟು 1,353 ಔಷಧ ಮಾದರಿಗಳನ್ನು ವಿಶ್ಲೇಷಿಸಲಾಗಿದೆ. ಅವುಗಳಲ್ಲಿ 30 ಅನುತ್ತಮ ಗುಣಮಟ್ಟದದೆಂದು ಘೋಷಿಸಿರುತ್ತದೆ.
ಏಪ್ರಿಲ್ 2025ರ ಮಾಹೆಯಲ್ಲಿ ಅನುತ್ತಮ ಗುಣಮಟ್ಟದ ಔಷಧವೆಂದು ಘೋಷಿತವಾದ ಹಾಗೂ ಇತರ ಉಲ್ಲಂಘನೆಗಾಗಿ ವಿವಿಧ ತಯಾರಿಕ ಸಂಸ್ಥೆಗಳ ವಿರುದ್ಧ 37 ಪ್ರಕರಣಗಳಲ್ಲಿ ಮೊಕದ್ದಮೆ ಹೂಡಲು ಅನುಮತಿ ನೀಡಲಾಗಿದೆ. ಔಷಧ ಆಡಳಿತ ವಿಭಾಗದಲ್ಲಿ 26 ಸೇವೆಗಳನ್ನು ಸಕಾಲದಡಿಯಲ್ಲಿ ಒದಗಿಸಲಾಗುತ್ತಿದ್ದು ಏಪ್ರಿಲ್ ಮಾಹೆಯಲ್ಲಿ 903 ಅರ್ಜಿಗಳನ್ನು ಸ್ವೀಕರಿಸಿದ್ದು, ಹಿಂದಿನ ಬಾಕಿ ಅರ್ಜಿಗಳು ಸೇರಿ ಒಟ್ಟು 993 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿರುತ್ತದೆ.
ಔಷಧ ಆಡಳಿತದ ಅಮಲುಜಾರಿ ಅಧಿಕಾರಿಗಳು ಏಪ್ರಿಲ್ 2025ರ ಮಾಹೆಯಲ್ಲಿ ಒಟ್ಟು 1,340 ಔಷಧ ಮಾದರಿಗಳನ್ನು ವಿಶ್ಲೇಷಣೆಗೆ ಪಡೆದಿರುತ್ತಾರೆ. 2,229 ಔಷಧ ಮಳಿಗೆಗಳನ್ನು ಪರಿವೀಕ್ಷಣೆ ಕೈಗೊಂಡಿರುತ್ತಾರೆ. ಅವುಗಳಲ್ಲಿ ನಿಯಮ ಉಲ್ಲಂಘನೆ ಮಾಡಿರುವ ಒಟ್ಟು 128 ಸಂಸ್ಥೆಗಳ ಪರವಾನಿಗೆಗಳನ್ನು ಅಮಾನತ್ತುಗೊಳಿಸಲಾಗಿದೆ ಹಾಗೂ 07 ಪರವಾನಿಗೆಗಳನ್ನು ರದ್ದುಗೊಳಿಸಲಾಗಿದೆ.
ರಾಜ್ಯದಲ್ಲಿ ಎನ್.ಎಸ್.ಕ್ಯೂ ಬಂದಂತಹ ಪ್ರಕರಣಗಳಲ್ಲಿ ಏಪ್ರಿಲ್-2025ರ ಮಾಹೆಯಲ್ಲಿ ಸುಮಾರು ರೂ 11.5 ಲಕ್ಷ ಮೌಲ್ಯದ ಅನುತ್ತಮ ಗುಣಮಟ್ಟದ ಔಷಧಗಳನ್ನು ಮಾರುಕಟ್ಟೆಯಿಂದ ಹಿಂಪಡೆದು ಜಪ್ತಿ ಮಾಡಲಾಗಿರುತ್ತದೆ ಬೆಂಗಳೂರು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ