ಬೆಂಗಳೂರು: ಮಹಾರಾಷ್ಟ್ರದ ನಾಸಿಕ್‌ನ ಐಟಿ ಕಂಪನಿಯಲ್ಲಿ ಬಹಿರಂಗಗೊಂಡಿರುವ ಗಂಭೀರ ಪ್ರಕರಣದ ಹಿನ್ನೆಲೆ ರಾಜ್ಯದ ವಿವಿಧ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಮತ್ತು ಜಿಮ್ ಗಳಲ್ಲಿ ಮಹಿಳಾ ಸುರಕ್ಷತೆ, ಧಾರ್ಮಿಕ ಒತ್ತಡ ಮತ್ತು ಕಾರ್ಯಸ್ಥಳದ ದುರ್ಬಳಕೆ ಕುರಿತಾಗಿ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ವತಿಯಿಂದ ಇಂದು ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳು, ಗೃಹ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಯಿತು.
ಈ ವಿಷಯಕ್ಕೆ ಸಂಬಂಧಿಸಿದಂತೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಸಂಯೋಜಕರಾದ ಶರತ್ ಕುಮಾರ್ ಮಾತನಾಡಿ, ಇತ್ತೀಚೆಗೆ 19 ಏಪ್ರಿಲ್, ಭಾನುವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲವು ಹಿಂದೂ ಸಂಘಟನೆಗಳ ಪ್ರಮುಖರು ಮತ್ತು ಧರ್ಮಾಭಿಮಾನಿಗಳು ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ನಾಸಿಕ್‌ನಲ್ಲಿ ನಡೆದ ಘಟನೆ ಕೇವಲ ಮಹಿಳಾ ಹಿಂಸೆ ಪ್ರಕರಣವಲ್ಲದೆ, ಕಾರ್ಯಸ್ಥಳದಲ್ಲಿ ನಡೆಯುತ್ತಿರುವ ಗಂಭೀರ ದುರುಪಯೋಗ ಮತ್ತು ಸಂಘಟಿತ ಅಪರಾಧದ ಸೂಚನೆಯಾಗಿರಬಹುದು ಎಂದು ಕಳವಳ ವ್ಯಕ್ತಪಡಿಸಿದ್ದರು.
ಮಹಿಳಾ ನೌಕರರಿಂದ ಬಂದ ದೂರಿನ ಪ್ರಕಾರ, ಕೆಲವು ಕಂಪನಿಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ, ಬೆದರಿಕೆ, ಧಾರ್ಮಿಕ ಒತ್ತಡ ಸೇರಿದಂತೆ ಗಂಭೀರ ಆರೋಪಗಳು ಕೇಳಿಬರುತ್ತಿದ್ದು, ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ನಿಷ್ಪಕ್ಷಪಾತ ತನಿಖೆ ನಡೆಸುವುದು ಅಗತ್ಯವಾಗಿದೆ ಎಂದು ಸಮಿತಿ ಮನವಿ ಮಾಡಿದೆ.
ಸಮಿತಿ ತಿಳಿಸಿರುವಂತೆ, ಮಹಿಳಾ ಗೌರವ ಮತ್ತು ಸುರಕ್ಷತೆ ಯಾವುದೇ ಸಮಾಜದ ಮೂಲಭೂತ ಅಂಶವಾಗಿದ್ದು, ಇಂತಹ ಪ್ರಕರಣಗಳಲ್ಲಿ ತಕ್ಷಣ ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ವಿಷಯದಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಲಾಯಿತು.
ಈ ಸಂಧರ್ಭದಲ್ಲಿ ಶ್ರೀರಾಮ ಸೇನೆಯ ಶ್ರೀ. ಸುಂದ್ರೇಶ್ ನರ್ಗಲ್, ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಶ್ರೀ. ಶರತ್ ಕುಮಾರ್, ವಕೀಲರಾದ ಶ್ರೀ. ರವಿ ಶಂಕರ್, ಹಿಂದೂ ಮುಖಂಡರಾದ ಸೌ. ಜ್ಯೋತಿ ಗೌಡ, ಶ್ರೀ. ಮಂಜುನಾಥ್ ಮುಂತಾದ ಧರ್ಮ ಪ್ರೇಮಿಗಳು ಉಪಸ್ಥಿತರಿದ್ದರು.