ರಾಮನಗರ: ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆಗೆ ಇಡೀ ದೇಶಕ್ಕೆ ಸಂತೋಷ ತಂದಿದೆ. ದೇಶದ ಪ್ರಧಾನ ಮಂತ್ರಿಗಳು ಬಹಳ ದಿಟ್ಟ ಹೆಜ್ಜೆ ಇಟ್ಟು ಬಲವಾದ ಧೃಡ ನಿರ್ಧಾರ ತೊಟ್ಟು ಆಪರೇಷನ್ ಸಿಂಧೂರ ಕೈಗೊಂಡಿದ್ದಾರೆ. ಇದನ್ನು ಎಲ್ಲಾ ಭಾರತೀಯರು ಮೆಚ್ಚಬೇಕು ಎಂದು ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.
ಕಳೆದ ಏಪ್ರಿಲ್ 22ರಂದು ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದರು. ಭಾರತೀಯ ಕುಟುಂಬಗಳು ಅಂದು ಯಾವ ಪರಿಸ್ಥಿತಿ ಎದುರಿಸಿದ್ದರು ಎಲ್ಲರಿಗೂ ನೋವಿತ್ತು. ಪೆಹಲ್ಗಾಮ್ ದುರ್ಘಟನೆಯಲ್ಲಿ ಹೆಣ್ಣುಮಕ್ಕಳು ಕುಂಕುಮವನ್ನು ಕಳೆದುಕೊಂಡಿದ್ದರು. ಅದಕ್ಕೆ ಪ್ರತ್ಯುತ್ತರವಾಗಿ ಉಗ್ರರ ಮೇಲೆ ಭಾರತೀಯ ಸೇನೆ ದಾಳಿ ಮಾಡಿದೆ ಎಂದು ಅವರು ತಿಳಿಸಿದರು.
ಸಿಂಧೂ ನದಿಯ ಬಗ್ಗೆ ಕೂಡ ಪ್ರಧಾನ ಮಂತ್ರಿಗಳು ಚರ್ಚೆ ಮಾಡಿದ್ದಾರೆ. ಭಾರತದ ಮೂಲಕ ಪಾಕಿಸ್ತಾನಕ್ಕೆ ಸಿಂಧೂ ನದಿ ಹರಿದು ಹೋಗುತ್ತದೆ. ಪಾಕಿಸ್ತಾನಕ್ಕೆ ಸಿಂಧೂ ನದಿ ಹರಿಯುವುದನ್ನು ಕೂಡ ತಪ್ಪಿಸುತ್ತೇವೆ ಅಂತಾ ಪ್ರಧಾನಿ ಹೇಳಿದ್ದಾರೆ. ಇದು ಸ್ವಾಗತಾರ್ಹ ಎಂದರು ಅವರು.
*ಬಾಂಬ್ ಕಟ್ಕೊಂಡು ಹೋಗೋ ಮನಸ್ಥಿತಿ ಎಲ್ಲಿಂದ ಬಂತು?*
ಕಾಂಗ್ರೆಸ್ ಪಕ್ಷದಿಂದ ಶಾಂತಿ ಜಪ ಎಂಬ ಟ್ವೀಟ್ ವಿಚಾರಕ್ಕೆ ಮಾತನಾಡಿದ ಅವರು; ಅವರ ಪೋಸ್ಟ್ ನಿಂದಾಗಿ ಕಾಂಗ್ರೆಸ್ ಮನಸ್ಥಿತಿಯನ್ನು ನಾವು ಅಳೆಯಬಹುದು. ಕಾಂಗ್ರೆಸ್ ನವರಿಗೆ ಏನ್ ಶಾಂತಿ ಬೇಕಂತೆ? ಇನ್ನೆಷ್ಟು ದಿನ ಭಾರತೀಯರು ಶಾಂತಿಯಿಂದ ಇರಬೇಕು. ಪ್ರತಿಯೊಬ್ಬ ಭಾರತೀಯರು ಕೂಡ ಪ್ರಧಾನಿಯ ಕಾರ್ಯವನ್ನು ಮೆಚ್ಚಿದ್ದಾರೆ ಎಂದರು.
ಪ್ರತಿಯೊಬ್ಬರ ಮನಸ್ಸಿನಲ್ಲೂ ಆಕ್ರೋಶ ಇದೆ, ಒಳಗಡೆ ನೋವಿದೆ. ಅದಕ್ಕೆ ಪ್ರಧಾನಮಂತ್ರಿಗಳು ಉತ್ತರ ಕೊಡಬೇಕು ಅಂತಾ ಕೇಳಿದ್ವಿ ಅದಕ್ಕೆ ಉತ್ತರ ಕೊಟ್ಟಿದ್ದಾರೆ.ಆಪರೇಷನ್ ಸಿಂಧೂರದ ಜವಾಬ್ದಾರಿಯನ್ನು ಇಬ್ಬರು ವೀರ ಮಹಿಳೆಯ ಹೊತ್ತಿದ್ದಾರೆ ಎಂದರು.
ಕಾಂಗ್ರೆಸ್ ನ ಮನಸ್ಥಿತಿ ಇದರಿಂದ ಸ್ಪಷ್ಟವಾಗಿ ಗೊತ್ತಾಗಿದೆ.ಮೊನ್ನೆ ಕಾಂಗ್ರೆಸ್ ನ ಸಚಿವರೊಬ್ಬರು ಬಾಂಬ್ ಕಟ್ಟಿಕೊಂಡು ಹೋಗ್ತೀನಿ ಅಂದ್ರು. ಬಾಂಬ್ ಕಟ್ಟಿಕೊಂಡು ಹೋಗ್ತೀನಿ ಎನ್ನುವ ಮನಸ್ಥಿತಿ ಎಲ್ಲಿಂದ ಬಂತು. ಮಾತೆತ್ತಿದರೆ ಬಾಂಬ್ ಬಾಂಬ್ ಅಂತಾರೆ ಎಂದು ಸಚಿವ ಜಮೀರ್ ಅಹಮದ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
*ಶಾಸಕ ಇಕ್ಬಾಲ್ ಹುಸೇನ್ ಗೆ ಟಾಂಗ್ ಕೊಟ್ಟ ನಿಖಿಲ್*
ಪೆಹಲ್ಗಾಮ್ ದಾಳಿಯಿಂದ ಅಂದು ದೇಶಾದ್ಯಂತ ನೋವಿನ ಪರಿಸ್ಥಿತಿ, ಶೋಕಾಚರಣೆ ಇತ್ತು. ಆದ್ರೆ ಈ ಜಿಲ್ಲೆಯ ಶಾಸಕರೊಬ್ಬರು ಸೀರಿ ಹಂಚಿ ಸಂಭ್ರಮದ ಕಾರ್ಯಕ್ರಮ ಮಾಡಿದ್ದಾರೆ. ಮಹಿಳೆಯರಿಗೆ ಸೀರೆಯನ್ನ ಕೊಡುವ ಅಧಿಕಾರ ಇರುವುದು ನಿಮ್ಮ ಮನೆಯವರಿಗೆ ಮಾತ್ರ, ಇನ್ಯಾರೋ ಮೂರನೇ ವ್ಯಕ್ತಿ ಸೀರೆ ಕೊಡ್ತೀನಿ ಅಂದ್ರೆ ಕಾರ್ಯಕ್ರಮಕ್ಕೆ ಹೋಗಬೇಡಿ ಎಂದು ಮಹಿಳೆಯರಿಗೆ ಅವರು ಮನವಿ ಮಾಡಿದರು.
*ಸಿಎಂಗೆ ಭಗವಂತನ ಮೇಲೆ ಭಕ್ತಿ ಬಂದಿದೆ*
ಸಿದ್ದರಾಮಯ್ಯ ಹಣೆಗೆ ಸಿಂಧೂರ ಇಟ್ಟುಕೊಂಡ ವಿಚಾರಕ್ಕೆ ಮಾತನಾಡಿದ ಅವರು. ಸಿಎಂ ಸಿದ್ದರಾಮಯ್ಯ ಅವರಿಗೆ ಈಗಲಾದರೂ ಮನಸ್ಸಿನಲ್ಲಿ ಭಗವಂತನ ಮೇಲೆ ಭಕ್ತಿ ಬಂದಿದೆ ಅಷ್ಟೇ ಸಾಕು ಎಂದರು.