ದೇವನಹಳ್ಳಿ : ಇಲ್ಲಿಯವರೆಗೆ ಗ್ಯಾರಂಟಿಗಳ ಮೂಲಕ 80 ಸಾವಿರ ಕೋಟಿ ರೂಪಾಯಿಯನ್ನು ಜನರ ಜೇಬಿಗೆ ಹಾಕಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶದಲ್ಲಿ ಗ್ರಾಮಾಂತರ ಜಿಲ್ಲೆಯ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು.
ಗ್ರಾಮಾಂತರ ಜಿಲ್ಲೆಯಲ್ಲಿ ಸಾವಿರ ಸಾವಿರ ಕೋಟಿ ವೆಚ್ಚದ ಕಾಮಗಾರಿಗಳಿಗೆ ಒಂದೇ ದಿನ ಚಾಲನೆ ನೀಡಿದ್ದೇವೆ. ಅಭಿವೃದ್ಧಿಗೆ ಹಣ ಇಲ್ಲ ಎನ್ನುವ ಬಿಜೆಪಿ ಪರಿವಾರದ ಸುಳ್ಳುಗಳೆಗೆ ಅಭಿವೃದ್ಧಿ ಮೂಲಕವೇ ಉತ್ತರ ನೀಡುತ್ತಿದ್ದೇವೆ ಎಂದರು.
ಬಿಜೆಪಿ ಕನ್ನಡಕದ ಗಾಜುಗಳು ಅವರ ಅಧಿಕಾರಾವಧಿಯ ಕಲೆಗಳಿಂದ ಕೂಡಿದೆ. ಅದಕ್ಕೇ ಅವರು ನೋಡುವ ಕಡೆಯಲ್ಲೆಲ್ಲಾ ಕಲೆಗಳೇ ಕಾಣುತ್ತಿವೆ. ಬಿಜೆಪಿ ತನ್ನ ಕನ್ನಡಕ ಕ್ಲೀನ್ ಮಾಡಿಕೊಂಡರೆ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾಣುತ್ತದೆ ಎಂದು ಟೀಕಿಸಿದರು.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಅಭಿವೃದ್ಧಿ ಮತ್ತು ಪ್ರಗತಿಗೆ ನಮ್ಮ ಸರ್ಕಾರ ನಿರಂತರವಾಗಿ ಅನುದಾನಗಳನ್ನು ನೀಡಿ, ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡುತ್ತಿದೆ. ಚುನಾವಣೆ ವೇಳೆ ನಾವು ಕೊಟ್ಟ ಭರವಸೆಗಳನ್ನೆಲ್ಲಾ ಈಡೇರಿಸುತ್ತಲೇ ಇದ್ದೇವೆ. ಅಧಿಕಾರಕ್ಕೆ ಬಂದ ಬಳಿಕ ಮೊದಲ ಕ್ಯಾಬಿನೆಟ್ ನಲ್ಲೇ ಗ್ಯಾರಂಟಿಗಳನ್ನು ಜಾರಿ ಮಾಡಿ ಇದಕ್ಕಾಗಿ 80 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದ್ದೇವೆ ಎಂದರು.