ಬೆಂಗಳೂರು: ನಗರದ ರಮಣಶ್ರೀ ಗಾರ್ಡೇನಿಯಾ ಲೇಔಟ್ ಹಾಗೂ ನಾರ್ತ್ ಹುಡ್ ವಿಲ್ಲಾ ಪ್ರದೇಶದಲ್ಲಿ ಮಳೆ ನೀರು ನಿಲ್ಲದಂತೆ ಶೀಘ್ರ ಪರ್ಯಾಯವಾಗಿ 520 ಮೀಟರ್ ಉದ್ದದ 1.600 ಎಂ.ಎಂ ಪೈಪ್ ಅಳವಡಿಸಲು ಪಾಲಿಕೆ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಯಲಹಂಕ ವಲಯದ ರಮಣಶ್ರೀ ಗಾರ್ಡೇನಿಯಾ ಲೇಔಟ್ ನಲ್ಲಿ ಕಳೆದ ಶನಿವಾರ ಸುರಿದ ಮಳೆಯಿಂದಾಗಿ ಸುಮಾರು 22 ವಿಲ್ಲಾಗಳಿಗೆ ನೀರು ನುಗ್ಗಿ ಸಮಸ್ಯೆಯುಂಟಾಗಿದ್ದ ಸ್ಥಳಕ್ಕೆ ಪಾಲಿಕೆ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಪಾಲಿಕೆ ವತಿಯಿಂದ ರಾಜಕಾಲುವೆ ಕಾಮಗಾರಿ ಪ್ರಗತಿಯಲ್ಲಿದ್ದು, ಪುಟ್ಟೇನಹಳ್ಳಿ ಕರೆಯು ಅರಣ್ಯ ಇಲಾಖೆಗೆ ಬರಲಿದೆ. ಕೆರೆಯ ಪಕ್ಕದ ಪ್ರದೇಶದಲ್ಲಿ ವಿಲ್ಲಾ ಹಾಗೂ ಅಪಾರ್ಟ್ಮೆಂಟ್ಸ್ ಗಳು ನಿರ್ಮಾಣವಾಗಿದ್ದು, ಸೀವೇಜ್ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ರಾಜಕಾಲುವೆ ನಿರ್ಮಾಣ ಮಾಡಿ ಕೆರೆಗೆ ನೀರನ್ನು ಬಿಡಲು ಅರಣ್ಯ ಇಲಾಖೆಯ ವನ್ಯಜೀವಿ ಮಂಡಳಿಯಿಂದ ಅನುಮತಿ ಸಿಕ್ಕಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಪರ್ಯಾಯವಾಗಿ 520 ಮೀಟರ್ ಉದ್ದದ 1.600 ಎಂ.ಎಂ ಪೈಪ್ ಲೈನ್ ಅನ್ನು ಕೆರೆಯ ವಾಯು ವಿಹಾರ ಮಾರ್ಗದ ಪಕ್ಕದಲ್ಲಿ ಮಾಡಿಕೊಂಡು ಮುಂದೆ ಬರುವ ರಾಜಕಾಲುವೆಗೆ ಸಂಪರ್ಕ ಕಲ್ಪಿಸಲಾಗುವುದು. ಈ ಪೈಕಿ ತ್ವರಿತವಾಗಿ ಕೆಲಸ ಪ್ರಾರಂಭಿಸಿ ಶೀಘ್ರ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ರಮಣಶ್ರೀ ಲೇಔಟ್ ಪ್ರದೇಶದಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ಯಾವುದೇ ಮನೆಗಳು ಇಲ್ಲದ ಕಾರಣ ಅಲ್ಲಿ ಯಾವುದೇ ಸಮಸ್ಯೆ ಕಂಡುಬಂದಿರಲಿಲ್ಲ. ಇದೀಗ ಸದರಿ ಸ್ಥಳದಲ್ಲಿ ವಿಲ್ಲಾ ಹಾಗೂ ಅಪಾರ್ಟ್ಮ್ಂಟ್ ಗಳು ನಿರ್ಮಾಣವಾಗಿರುವ ಕಾರಣ ಮಳೆ ನೀರು ನಿಲ್ಲುವಂತಾಗಿದೆ. ಸದರಿ ಸ್ಥಳದಲ್ಲಿ ತಾತ್ಕಾಲಿಕವಾಗಿ ಪಂಪ್ ವ್ಯವಸ್ಥೆ ಮಾಡಿಕೊಂಡು ನೀರನ್ನು ಬೇರೆಡೆ ಬಿಡಲಾಗುತ್ತಿದೆ ಎಂದು ಹೇಳಿದರು.
ರಮಣಶ್ರೀ ಗಾರ್ಡೇನಿಯಾ ಲೇಔಟ್ ನಲ್ಲಿ ನಿಂತಿದ್ದ ನೀರನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದ್ದು, ಸದ್ಯ ಯಾವುದೇ ಸಮಸ್ಯೆ ಇರುವುದಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ನಿಂತ ನೀರನ್ನು ತೆರವುಗೊಳಿಸುವ ಸಲುವಾಗಿ ಪಂಪ್ ಅನ್ನು ಅಲ್ಲಿಯೇ ಇಡಲಾಗುವುದು ಎಂದು ತಿಳಿಸಿದರು.
ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾದ ಎನ್. ಮಂಜುನಾಥ್ ಪ್ರಸಾದ್ರ ವರು ಮಾತನಾಡಿ, ಯಲಹಂಕದ ರಮಣಶ್ರೀ ಗಾರ್ಡೇನಿಯಾ ಲೇವಟ್ ನಲ್ಲಿ ನೀರು ನಿಲ್ಲದಂತೆ ಕ್ರಮವಹಿಸಲು ಪಾಲಿಕೆಗೆ ಅರಣ್ಯ ಇಲಾಖೆ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದೆಂದು ತಿಳಿಸಿದರು.
ಈ ವೇಳೆ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾದ ಶ್ರೀ ಕುಮಾರ್ ಪುಷ್ಕರ್, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯಪಡೆ ಮುಖ್ಯಸ್ಥರಾದ ಬ್ರಿಜೇಶ್ ಕುಮಾರ್ ದೀಕ್ಷಿತ್, ವಲಯ ಆಯುಕ್ತರಾದ ಕರೀ ಗೌಡ, ಜಂಟಿ ಆಯುಕ್ತರಾರ ನಯೀಮ್ ಮೊಹ್ಮದ್ ಮೊಮಿನ್, ಕಾರ್ಯಪಾಲಕ ಅಭಿಯಂತರರಾದ ಸುಧಾಕರ್, ಸವಿತಾ, ಜಲಮಡಳಿ, ಅರಣ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.