ಮೈಸೂರು: ನಾವು ಜಾತಿ ರಾಜಕಾರಣ ಮಾಡುವವರಲ್ಲ, ನೀತಿ ಮೇಲೆ ರಾಜಕಾರಣ ಮಾಡುವವರು. ನಾವು ಸಮಾಜದ ಒಳಿತಿಗೆ ಕೆಲಸ ಮಾಡುವವರು. ಆದ ಕಾರಣ ಸಮಾಜದ ಬಗ್ಗೆ ಕಳಕಳಿ ಹೊಂದಿರುವ ಲಕ್ಷ್ಮಣ್ ಅವರನ್ನು ಆಯ್ಕೆ ಮಾಡಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಿಳಿಸಿದರು.
ಮೈಸೂರಿನಲ್ಲಿ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಲಕ್ಷ್ಮಣ್ ಅವರ ನಾಮಪತ್ರ ಸಲ್ಲಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದವರು,ಕ್ಷೇತ್ರದಲ್ಲಿ ಒಕ್ಕಲಿಗರಿಗೆ ಟಿಕೆಟ್ ಸಿಕ್ಕಿ 40 ವರ್ಷವಾಗಿತ್ತು. ಆದ ಕಾರಣ ನಾನು ಮತ್ತು ಸಿದ್ದರಾಮಯ್ಯ ಇಬ್ಬರು ಚರ್ಚೆ ನಡೆಸಿ ಲಕ್ಷ್ಮಣ್ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿದ್ದೇವೆ.ಈ ಸಿದ್ದʼರಾಮʼನಿಗೆ ಲಕ್ಷ್ಮಣಗೌಡ.
ವಿಶ್ವನಾಥ್ ಅವರು, ಚಂದ್ರಪ್ರಭಾ ಅರಸ್, ಸಿ.ಎಚ್.ವಿಜಯಶಂಕರ್, ಶ್ರೀಕಂಠದತ್ತ ಒಡೆಯರ್ ಇವರಿಗೆ ಟಿಕೆಟ್ ನೀಡಿದ್ದೆವು. ಕೆಪಿಸಿಸಿ ಅಧ್ಯಕ್ಷರಾಗಿರುವ ಕಾರಣ ಸಮುದಾಯಕ್ಕೆ ಅವಕಾಶ ಒದಗಿಸಬೇಕು ಎಂದು ಹಲವಾರು ಮುಖಂಡರು ಮನವಿ ಮಾಡಿದ್ದರು. ಆದ ಕಾರಣ ಈ ಬಾರಿ ಎಂಟು ಮಂದಿ ಒಕ್ಕಲಿಗರಿಗೆ ಅವಕಾಶ ಮಾಡಿಕೊಡಲಾಗಿದೆ.
ನಾವು ಜಾತಿ ರಾಜಕಾರಣ ಮಾಡುವವರಲ್ಲ, ನೀತಿ ಮೇಲೆ ರಾಜಕಾರಣ ಮಾಡುವವರು. ನಾವು ಸಮಾಜದ ಒಳಿತಿಗೆ ಕೆಲಸ ಮಾಡುವವರು. ಆದ ಕಾರಣ ಸಮಾಜದ ಬಗ್ಗೆ ಕಳಕಳಿ ಹೊಂದಿರುವ ಲಕ್ಷ್ಮಣ್ ಅವರನ್ನು ಆಯ್ಕೆ ಮಾಡಿದ್ದೇವೆ. ದಿನದ 24 ಗಂಟೆಯೂ ಜನರ ಸೇವೆಗೆ ಇವರು ಸಿಗುತ್ತಾರೆ.
ಬಿಜೆಪಿ ಅಭ್ಯರ್ಥಿಯ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಮಾತನಾಡಿದರೂ ಏನೂ ಪ್ರಯೋಜನವಿಲ್ಲ. ಜನರ ಸೇವೆ ಮಾಡುವವರನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ನೆನಪಿಟ್ಟುಕೊಳ್ಳುತ್ತಾರೆ. ಬಿಜೆಪಿಯವರು ಅಭಿವೃದ್ದಿ ಕೆಲಸಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಿಲ್ಲ. ಮೋದಿ ಅಲೆ ಹೆಸರೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. 15 ಲಕ್ಷ ಕೊಟ್ಟು ಮಾತನ್ನು ಉಳಿಸಿಕೊಂಡಿದ್ದೇವೆ, ಅಚ್ಚೇದಿನ್ ತಂದಿದ್ದೇವೆ, ರೈತರ ಆದಾಯ ದುಪ್ಪಟ್ಟು ಮಾಡಿದ್ದೇವೆ ಎಂದು ಹೇಳಿ ಮತ ಕೇಳುತ್ತಿಲ್ಲ.
ಮೋದಿ ಅಲೆ ಇದೆ ಎಂದು ಓಡಾಡುತ್ತಿದ್ದಾರೆ. ಎಲ್ಲಿದೆ ಮೋದಿ ಅಲೆ?. ಮೋದಿ ಅವರು ವಿಧಾನಸಭಾ ಚುನಾವಣೆಯಲ್ಲಿ ಹಳ್ಳಿ, ಊರೂರು, ಗಲ್ಲಿ ಸುತ್ತಾಡಿದರು ಬಿಜೆಪಿ ಗತಿ ಏನಾಯಿತು? ಅಮಿತ್ ಷಾ ಅವರು ಚನ್ನಪಟ್ಟಣದಲ್ಲಿ ಏಕೆ ರೋಡ್ ಶೋ ಮಾಡಿದರು?. ಏಕೆಂದರೆ ರಾಜ್ಯದಲ್ಲಿ ಮೋದಿ ಅಲೆ ಇಲ್ಲ.
ಕಮಲ ಕೆರೆಯಲ್ಲಿ ಇದ್ದರೆ ಚೆಂದ, ತೆನೆ ಹೊಲದಲ್ಲಿ ಇದ್ದರೆ ಚೆಂದ, ದಾನ, ಧರ್ಮ ಮಾಡುವ ಕೈ ಅಧಿಕಾರದಲ್ಲಿ ಇದ್ದರೆ ಚೆಂದ. ಕೊಟ್ಟ ಮಾತನ್ನು ನಾವು ಉಳಿಸಿಕೊಂಡು ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ನಮ್ಮ ತಾಯಂದಿರು ʼಗ್ಯಾರಂಟಿʼ ಉಪಕಾರ ಸ್ಮರಣೆಯನ್ನು ಮರೆಯವುದಿಲ್ಲ. ರಾಜ್ಯದಲ್ಲಿ ಗ್ಯಾರಂಟಿ ಅಲೆ ಬಿಟ್ಟರೆ ಯಾವ ಅಲೆಯೂ ಇಲ್ಲ.
15 ಲಕ್ಷ ಎಲ್ಲಿ, ಅಚ್ಚೇದಿನ್ ಎಲ್ಲಿ, 2 ಕೋಟಿ ಉದ್ಯೋಗ ಎಲ್ಲಿ ಎಂದು ಬಿಜೆಪಿಯವರು ಬಂದರೆ ಅವರನ್ನು ಪ್ರಶ್ನೆ ಮಾಡಿ. ಅವರಿಗೆ ಮತ ಕೇಳುವ ಹಕ್ಕು ಇಲ್ಲ. ಈಗ ಇರುವ ಎಂಪಿಗಳ ಮುಖ ನೋಡಿದರೆ ಜನ ಮತ ಹಾಕುವುದಿಲ್ಲ ಎಂದು ಬಿಜೆಪಿಯವರು 12 ಲೋಕಸಭಾ ಸದಸ್ಯರನ್ನು ಬದಲಾಯಿಸಿದ್ದಾರೆ.
ದೇಶದಲ್ಲಿ ಬಿಜೆಪಿ 200 ಸ್ಥಾನಗಳನ್ನೂ ಗೆಲ್ಲುವುದಿಲ್ಲ
ದೇಶದಲ್ಲಿ ಬಿಜೆಪಿಯವರು 200 ಸ್ಥಾನಗಳ ಮೇಲೆ ಗೆಲ್ಲುವುದಿಲ್ಲ. ಕರ್ನಾಟಕದಲ್ಲಿ ಇಂಡಿಯಾ ಮಿತ್ರ ಪಕ್ಷಗಳ ಸದಸ್ಯರು ಕಾಂಗ್ರೆಸ್ 28 ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಎಲ್ಲಾ ಮಿತ್ರ ಪಕ್ಷಗಳ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೂತ್ ಮಟ್ಟದಲ್ಲಿ ಪ್ರಚಾರ ಮಾಡಬೇಕು.
ಚಾಮರಾಜನಗರದಲ್ಲಿ ಶ್ರೀನಿವಾಸ್ ಪ್ರಸಾದ್ ಅವರ ಬೆಂಬಲಿಗರು, ನೆಂಟರು ಬಂದು ʼನಮಗೆ ಬಿಜೆಪಿಯಲ್ಲಿ ಇರಲು ಆಗುವುದಿಲ್ಲʼ ಎಂದು ಕಾಂಗ್ರೆಸ್ ಸೇರಲು ಬಂದಿದ್ದಾರೆ. ಜನತಾದಳ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಕಿವಿಮಾತು ಹೇಳುತ್ತೇನೆ. ಮುಂದಿನ 10 ವರ್ಷ ಕಾಂಗ್ರೆಸ್ ಸರ್ಕಾರ ಇರುತ್ತದೆ.
ಅಮಿತ್ ಷಾ ಅವರೇ ನಿಮ್ಮಲ್ಲಿ ಇರುವಷ್ಟು ಭಿನ್ನಾಬಿಪ್ರಾಯ, ಕಿತ್ತಾಟ ನಮ್ಮಲ್ಲಿ ಇಲ್ಲ
ನಾನು ಮತ್ತು ಸಿದ್ದರಾಮಯ್ಯ ಅವರು ಹಾಗು ಸಂಪುಟದ ಸಹೋದ್ಯೋಗಿಗಳು ಒಗ್ಗಟ್ಟಾಗಿ ಈ ಸರ್ಕಾರವನ್ನು ಯಶಸ್ವಿಯಾಗಿ ಮುನ್ನಡೆಸುತ್ತೇವೆ. ಅಮಿತ್ ಷಾ ಅವರೇ ಅಧಿಕಾರ ಉಳಿಸಿಕೊಳ್ಳಲು ನಾನು ಕಾಯುತ್ತಾ ಇದ್ದೇನೆ ಎನ್ನುವುದು ನಿಮ್ಮ ಭ್ರಮೆ. ತಲೆಕೆಡಿಸಿಕೊಳ್ಳಬೇಡಿ ನಿಮ್ಮಲ್ಲಿ ಇರುವಷ್ಟು ಭಿನ್ನಾಬಿಪ್ರಾಯ, ಕಿತ್ತಾಟ ನಮ್ಮಲ್ಲಿ ಇಲ್ಲ.
ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಅವರು ಬುಧವಾರ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಹಾಜರಿದ್ದ ಕೆಪಿಸಿಸಿ ಅಧ್ಯಕ್ಷರು, ಡಿಸಿಎಂ ಡಿ ಕೆ ಶಿವಕುಮಾರ್ ಅವರು ನಂತರ ರಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಸಿಎಂ ಸಿದ್ದರಾಮಯ್ಯ, ಸಚಿವ ವೆಂಕಟೇಶ್, ಮಾಜಿ ಸಚಿವ, ಶಾಸಕ ತನ್ವಿರ್ ಸೇಠ್, ಶಾಸಕ ಮಂಥರ್ ಗೌಡ, ಮುಖಂಡ ಮರಿತಿಬ್ಬೇಗೌಡ ಮತ್ತಿತರರು ಉಪಸ್ಥಿತರಿದ್ದರು.