*ಕೋವಿಡ್ ಹಗರಣದಲ್ಲಿ ಭಾಗಿಯಾಗಿರುವ ಬಿ.ಎಸ್ ಯಡಿಯೂರಪ್ಪ, ಡಾ. ಸುಧಾಕರ್ ಸೇರಿ ನಾಯಕರ ಬಂಧನಕ್ಕೆ ಎಎಪಿ ಆಗ್ರಹ*
*ಬೆಂಗಳೂರು:* ಇಡೀ ಜಗತ್ತೇ ಕೋವಿಡ್ ಹೊಡೆತಕ್ಕೆ ಸಿಕ್ಕು ನರಳುತ್ತಿದ್ದಾಗ, ಬಿಜೆಪಿ ಸರ್ಕಾರವು ಹೆಣದ ಮೇಲೂ ಹಣ ಮಾಡುವ ಕೆಲಸ ಮಾಡಿದೆ. ಕೋವಿಡ್ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ನ್ಯಾಯಮೂರ್ತಿ ಮೈಕೆಲ್ ಡಿ. ಕುನ್ಹಾ ವರದಿಯಲ್ಲಿ ತಿಳಿಸಲಾಗಿದ್ದು, ಕಾಂಗ್ರೆಸ್ ಸರ್ಕಾರ ಕೂಡಲೇ ಭ್ರಷ್ಟಾಚಾರ ಮಾಡಿದ ಬಿಜೆಪಿ ನಾಯಕರನ್ನು ಬಂಧಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ನಂಜಪ್ಪ ಕಾಳೇಗೌಡ ಆಗ್ರಹಿಸಿದ್ದಾರೆ.
ನಗರದ ಪಕ್ಷದ ಮುಖ್ಯ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಕೋವಿಡ್ ಹಗರಣದ ಬಗ್ಗೆ ತನಿಖೆ ಮಾಡಲಾಗುತ್ತದೆ ಎಂದು ಚುನಾವಣೆಗೆ ಮೊದಲು ಕಾಂಗ್ರೆಸ್ ಭರವಸೆ ನೀಡಿತ್ತು, ಅಧಿಕಾರಕ್ಕೆ ಬಂದ ಬಳಿಕ ನ್ಯಾಯಮೂರ್ತಿ ಮೈಕೆಲ್ ಡಿ.ಕುನ್ಹಾ ನೇತೃತ್ವದಲ್ಲಿ ಆಯೋಗ ರಚನೆ ಮಾಡಿತ್ತು. ಆಯೋಗ ಮಧ್ಯಂತರ ವರದಿ ನೀಡಿದ್ದು ₹187.8 ಕೋಟಿ ಅಕ್ರಮ ನಡೆದಿದೆ ಎಂದು ಹೇಳಿದೆ. ಸರ್ಕಾರ ಕೂಡಲೇ ಬಿ.ಎಸ್. ಯಡಿಯೂರಪ್ಪ, ಡಾ. ಸುಧಾಕರ್, ಅಶ್ವಥನಾರಾಯಣ ಹಾಗೂ ಶ್ರೀರಾಮುಲು ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ನಿಯಮಗಳನ್ನು ಉಲ್ಲಂಘಿಸಿದ ಕಾರಣ ಸರ್ಕಾರಕ್ಕೆ ಅಪಾರ ನಷ್ಟವಾಗಿದ್ದು, ಅದರಲ್ಲಿ ₹187.8 ವಸೂಲಿ ಮಾಡಬೇಕು. ಖರೀದಿ ಒಪ್ಪಂದ ಮಾಡಿಕೊಂಡು ನಷ್ಟಕ್ಕೆ ಕಾರಣವಾದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಆಯೋಗ ಹೇಳಿದೆ. ಸರ್ಕಾರ ಕೂಡಲೇ ವರದಿಯನ್ನು ಆಧರಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.
ನಿವೃತ್ತ ನ್ಯಾಯಮೂರ್ತಿಗಳು ನೀಡಿರುವ ವರದಿಗೆ ಅವಮಾನ ಮಾಡಬಾರದು. ಸಿಎಂ ಸಿದ್ದರಾಮಯ್ಯನವರು ಅಡ್ಜಸ್ಟ್ಮೆಂಟ್ ರಾಜಕಾರಣ ಮಾಡದೆ, ಯಾವ ಒತ್ತಡಕ್ಕೂ ಮಣಿಯದೆ ತಕ್ಷಣ ಬಿಎಸ್ವೈ, ಶ್ರೀರಾಮುಲು, ಡಾ. ಸುಧಾಕರ್ ಹಾಗೂ ಡಾ. ಅಶ್ವತ್ಥನಾರಾಯಣ ಅವರನ್ನು ಬಂಧಿಸಲು ಆದೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.
ವಿಪಕ್ಷಗಳ ನಾಯಕರ ಮೇಲೆ ಸುಳ್ಳು ಆರೋಪ ಕೇಳಿಬಂದರೂ ತಕ್ಷಣ ಕಾರ್ಯಪ್ರವೃತ್ತರಾಗಿ ತನಿಖೆ ನಡೆಸುವ ಜಾರಿ ನಿರ್ದೇಶನಾಲಯ, ಸಿಬಿಐ ಅಧಿಕಾರಿಗಳು ಈಗ ಏನು ಮಾಡುತ್ತಿದ್ದಾರೆ? ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಕ್ರಮ ನಡೆದಿದೆ ಎಂದು ತನಿಖಾ ಆಯೋಗವೇ ವರದಿ ನೀಡಿದರೂ ಪ್ರಧಾನಿ ನರೇಂದ್ರ ಮೋದಿ ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಿದರು. ಕೂಡಲೇ ಇಡಿ, ಸಿಬಿಐ ಮಧ್ಯಪ್ರವೇಶಿಸಿ ಹಗರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ತೆಗೆದುಕೊಳ್ಳಲಿ ಎಂದು ಆಗ್ರಹಿಸಿದರು.
ಆಮ್ ಆದ್ಮಿ ಪಾರ್ಟಿ ರಾಜ್ಯ ಯುವ ಘಟಕದ ಅಧ್ಯಕ್ಷ ರೋಹಿತ್ ಕುಮಾರ್, ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಮನೆ ಮನೆಯಲ್ಲಿ ಹೆಣ ಬೀಳುವಾಗ ಬಿಜೆಪಿ ಸರ್ಕಾರ ಹಣ ಮಾಡಿಕೊಳ್ಳುತ್ತಿತ್ತು. ಅಂದಿನ ಆರೋಗ್ಯ ಸಚಿವರಾಗಿದ್ದ ಡಾ. ಸುಧಾಕರ್ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಮ್ ಆದ್ಮಿ ಪಾರ್ಟಿ ಆಗಲೇ ಒತ್ತಾಯಿಸಿತ್ತು ಎಂದರು.
ಸ್ಮೆಕ್ಸ್ ಕಂಪನಿಯಿಂದ ಹೆಮಟಾಲಜಿ ಸೆಲ್ ಕೌಂಟರ್ ಉಪಕರಣವನ್ನು ದೆಹಲಿ ಸರ್ಕಾರ 1.80 ಲಕ್ಷ ರೂಪಾಯಿಗೆ ಖರೀದಿ ಮಾಡಿದರೆ, ಕರ್ನಾಟಕ ಬಿಜೆಪಿ ಸರ್ಕಾರ 2.96 ಲಕ್ಷ ರೂಪಾಯಿಗೆ ಖರೀದಿ ಮಾಡಿತ್ತು. 1195 ಉಪಕರಣ ಖರೀದಿಗೆ 19.85 ಕೋಟಿ ರೂಪಾಯಿ ಹೆಚ್ಚುವರಿ ಹಣ ಖರ್ಚು ಮಾಡಿ ಸರ್ಕಾರಕ್ಕೆ ನಷ್ಟ ಮಾಡಿದೆ. ಇದು ಒಂದು ಸಣ್ಣ ಉದಾಹರಣೆಯಷ್ಟೆ ಇಂತಹ ಅನೇಕ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದರು.
ಕೋವಿಡ್ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವೈದ್ಯಕೀಯ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ವಿಕ್ಟೋರಿಯಾ ಆಸ್ಪತ್ರೆಯಲ್ಲೆ ಕೊರೊನಾ ಚಿಕಿತ್ಸೆ ನೀಡಲು ಸಾಕಷ್ಟು ಬೆಡ್ ಗಳು ಖಾಲಿ ಇದ್ದರೂ ಸಹ ರೋಗಿಗಳನ್ನು ದಾಖಲು ಮಾಡಿಕೊಳ್ಳದೆ ಸಾಯುವ ಪರಿಸ್ಥಿತಿಗೆ ದೂಡಿದ್ದರೂ, ಖಾಸಗಿ ಆಸ್ಪತ್ರೆಗಳಿಗೆ ಅನುಕೂಲ ಮಾಡಿಕೊಡಲು ಜನರ ಜೀವದ ಜೊತೆ ಆಟವಾಡಿದ್ದಾರೆ. ಈ ಸರ್ಕಾರಕ್ಕೆ ಸ್ವಲ್ಪವಾದರೂ ಮಾನ ಮರ್ಯಾದೆ ಇದ್ದರೆ ಕೂಡಲೇ ಭ್ರಷ್ಟಾಚಾರ ಮಾಡಿದವರನ್ನು ಬಂಧಿಸಿ, ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಿ ಎಂದು ಆಗ್ರಹಿಸಿದರು.
ನಾವು ಇಷ್ಟಕ್ಕೆ ಸುಮ್ಮನೆ ಬಿಡುವುದಿಲ್ಲ, ಇನ್ನೆರಡು ದಿನಗಳಲ್ಲಿ ಈ ಬಗ್ಗೆ ರಾಜ್ಯಪಾಲರಿಗೆ ದೂರು ಕೊಡುತ್ತೇವೆ. ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ. ಸರ್ಕಾರ ಏನಾದರೂ ಕ್ರಮ ತೆಗೆದುಕೊಳ್ಳದೇ ಇದ್ದರೆ, ನಾವೇ ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ರುದ್ರಯ್ಯ ನವಲಿ ಹಿರೇಮಠ್ ಭಾಗವಹಿಸಿದ್ದರು.
*ಈ ವರದಿಯನ್ನು ಮಾಧ್ಯಮ ಮಿತ್ರರು ತಮ್ಮ ಪತ್ರಿಕೆ, ವಾಹಿನಿ ಹಾಗೂ ಪೋರ್ಟಲ್ ಗಳಲ್ಲಿ ಪ್ರಕಟಪಡಿಸಬೇಕು ಎಂದು ವಿನಂತಿಸುತ್ತಿದ್ದೇವೆ.*
ಧನ್ಯವಾದಗಳೊಂದಿಗೆ,
*ಜಗದೀಶ್ ವಿ. ಸದಂ*
ರಾಜ್ಯ ಮಾಧ್ಯಮ ಸಂಚಾಲಕರು
ಎಎಪಿ
ಸಂಪರ್ಕ ಸಂಖ್ಯೆ: 95911 99556
93800 29038