ಬೆಂಗಳೂರು: ಒಕ್ಕಲಿಗ ಸಮುದಾಯದ ಸರ್ವತೋಮುಖ ಏಳಿಗೆಯ ದೃಷ್ಟಿಯಿಂದ ಹಾಗು ಒಕ್ಕಲಿಗ ಉದ್ಯಮಿಗಳ ಬೆಳವಣಿಗೆ,ಒಕ್ಕಲಿಗ ಸಮುದಾಯದ ಉದ್ಯಮಶೀಲತೆಗೆ ವೇದಿಕೆ ಒದಗಿಸುವುದರ ಮತ್ತು ಯಶಸ್ಸಿಗಾಗಿ ಕಾರ್ಯನಿರ್ವಹಿಸುತ್ತಿರುವ ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಫ್ಸಿ ಎಕ್ಸ್ಪೋ 2025ಕ್ಕೆ ಚಾಲನೆ ನೀಡುವ ಮೂಲಕ ಹೊಸ ಮೈಲುಗಲ್ಲನ್ನು ಸೃಷ್ಟಿಸಿದೆ ಎಂದು ಫಸ್ಟ್ ಸರ್ಕಲ್ ನ ರಾಜ್ಯಾಧ್ಯಕ್ಷರಾದ ನಂದೀಶ್ ರಾಜೇಗೌಡ ತಿಳಿಸಿದರು.
ಈ ಕುರಿತಂತೆ ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಫಸ್ಟ್ ಸರ್ಕಲ್ (ಎಫ್ಸಿ) ಉದ್ಯಮಿ ಒಕ್ಕಲಿಗ-ಎಫ್ಸಿ ಎಕ್ಸ್ಪೋ 2025 ಅನ್ನು ಜನವರಿ 3,4 ಮತ್ತು 5ರಂದು ನಗರದ ಅರಮನೆ ಮೈದಾನದಲ್ಲಿ ಆಯೋಜಿಸುತ್ತಿದ್ದು, ಮೂರು ದಿನಗಳ ಕಾಲ ನಡೆಯಲಿರುವ ಈ ಎಕ್ಸ್ಪೋ ಅನ್ನು ಒಕ್ಕಲಿಗ ಉದ್ಯಮಿಗಳ ಬೆಳವಣಿಗೆ ಮತ್ತು ಯಶಸ್ಸಿಗಾಗಿ ರೂಪಿಸಿದೆ. ಈ ಬೃಹತ್ ಕಾರ್ಯಕ್ರಮವು ಒಕ್ಕಲಿಗ ಸಮುದಾಯದ ಉದ್ಯಮಶೀಲತೆಗೆ ವೇದಿಕೆ ಒದಗಿಸುವುದರ ಜೊತೆಗೆ ಇನ್ನೊವೇಶನ್, ನೆಟ್ವರ್ಕಿಂಗ್ಹಾಗೂ ಸಹಭಾಗಿತ್ವಕ್ಕೆ ನೆರವಾಗಲಿದೆ ಎಂದರು.
ಹೊಸ ಆ್ಯಪ್ ನಿಂದ ಆಗುವ ಪ್ರಯೋಜನ, ವಿಶೇಷತೆಗಳು!
ಮುಂದಿನ ಪೀಳಿಗೆಗಾಗಿ ರೂಪಿಸಿರುವ ಆಲ್ ಇನ್ ಒನ್ ಆ್ಯಪ್ ಆಗಿರುವ ಎಫ್ ಸಿ ನೆಕ್ಸ್ಟ್ ಆ್ಯಪ್ ಬಿಡುಗಡೆ ಮಾಡಲಾಗಿದೆ. ಇದು ಭವಿಷ್ಯದ ಪೀಳಿಗೆಗೆ ಉದ್ಯಮ ಸೇರಿದಂತೆ ಹಲವು ಕ್ಷೇತ್ರಗಳನ್ನೊಳಗೊಂಡಂತೆ ಸಿದ್ದಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಸಕ್ತಿಯುಳ್ಳವರು ಆ್ಯಪ್ ಮೂಲಕ ನೊಂದಣಿ ಮಾಡಿಕೊಳ್ಳಬಹುದು. ಈ ಆ್ಯಪ್ ಮೂಲಕ ಮುಂದಿನ ಮೂರು ವರ್ಷಗಳಲ್ಲಿ ಅಂದಾಜು 7 ರಿಂದ 8 ಲಕ್ಷ ಉದ್ಯಮಿಗಳನ್ನ ಸೇರಿಸುವ ನಿರೀಕ್ಷೆಯಿದೆ. ಒಟ್ಟು 14 ಜಿಲ್ಲೆಗಳಿಂದ 143 ತಾಲ್ಲೂಕುಗಳಲ್ಲಿ ಒಕ್ಕಲಿಗ ಸಮುದಾಯದ ಅಧ್ಯಯನ ಕೈಗೊಂಡಿದ್ದು, ಮೊದಲ ವರ್ಷ 10 ಲಕ್ಷ, ಎರಡನೇ ವರ್ಷ 20 ಲಕ್ಷ ಹಾಗೂ ಮೂರನೇ ವರ್ಷ 30 ಲಕ್ಷ ಗ್ರಾಹಕರು ಹಾಗೂ ಅಂದಾಜು 7 ರಿಂದ 8 ಲಕ್ಷ ಒಕ್ಕಲಿಗ ಉದ್ಯಮಿಗಳ ಮಾಹಿತಿಯನ್ನು ಸಂಗ್ರಹಿಸುವ ಗುರಿ ಹೊಂದಿದ್ದೇವೆ.
ಒಂದೇ ಸೂರಿನಡಿ ಆ್ಯಪ್ ನಲ್ಲಿ ಆಧುನಿಕ ಜಗತ್ತಿನ ಸ್ಪರ್ಶ
ನಾವು ಇಲ್ಲಿಯವರೆಗೆ 14 ವಲಯಗಳನ್ನು ಪ್ರಾರಂಭಿಸಿದ್ದು, ಬಿಸಿನೆಸ್ ಕನೆಕ್ಟ್ ಫೀಚರ್, ಬಳಕೆದಾರರು ಡಿಜಿಟಲಿ ಮೀಟಿಂಗ್ಗಳನ್ನ ವೀಕ್ಷಿಸುವ ಅವಕಾಶ, ವಿಚಾರಣೆಗಳನ್ನು ಟ್ರ್ಯಾಕ್ ಮಾಡಲು ಮತ್ತು ವ್ಯವಹಾರವನ್ನು ಮೇಲ್ವಿಚಾರಣೆ ಮಾಡಲು ಹಾಗೂ ಇ-ಲೆಡ್ಜರ್ ವೈಶಿಷ್ಟ್ಯತೆಯನ್ನು ಸಹ ಹೊಂದಿದೆ. ಇಲ್ಲಿಯವರೆಗೆ ರೂ. 2,500 ಕೋಟಿ ವ್ಯವಹಾರ ನಡೆಸಲಾಗಿದೆ. ಕೆಲವು ಅಸಂಘಟಿತ ವ್ಯವಹಾರಗಳು, ಕಿರು ಉದ್ಯಮಗಳು, ಸನ್ಣ ಉದ್ಯಮಗಳನ್ನು ಬೆಳೆಯಲು ಮಾರ್ಗದರ್ಶನ ನೀಡುವ ಕಾರ್ಯ ಮಾಡಲಾಗುತ್ತದೆ. 123 ತಾಲ್ಲೂಕುಗಳಲ್ಲಿ ಎಲ್ಲಾ 24 ವಲಯಗಳ ಸಂಯೋಜಕರು ಮತ್ತು 24 ಮಹಿಳಾ ಉದ್ಯಮಿಗಳಿದ್ದಾರೆ. ನಾವು ಈ ಮುಂಚೆ ಮಾಹಿತಿಯನ್ನು ಸಂಗ್ರಹಿಸಿರಲಿಲ್ಲ, ಆದರೆ ಈಗ ಮಾಹಿತಿ ಸಂಗ್ರಹಣೆಯನ್ನು ಆರಂಭಸಿದ್ದು, 3 ವರ್ಷಗಳಲ್ಲಿ ಪೂರ್ಣಗೊಳಿಸಲಿದ್ದೇವೆ ಎಂದರು.
ರೈತರ ಸಬಲೀಕರಣಕ್ಕೆ ಹೊಸ ಎಫ್ ಸಿ ನೆಕ್ಸ್ಟ್ಅಪ್ಲಿಕೇಷನ್ ಸಹಕಾರಿ
ಬರುವ ದಿನಗಳಲ್ಲಿ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಸಿಗುವ ನಿಟ್ಟಿನಲ್ಲಿ ವಿಶೇಷ ಆದ್ಯತೆ ವಹಿಸುತ್ತಿದ್ದೇವೆ. ಪ್ರತಿ ಋತುವಿನಲ್ಲಿಯೂ ಯಾವ ಬೆಲೆಯನ್ನ ಎಷ್ಟು ಪ್ರಮಾಣದಲ್ಲಿ ಬೆಳೆದರೆ ರೈತರಿಗೆ ಲಾಭ ದೊರೆಯಲಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನೀಡುವ ಉದ್ದೇಶ ಹೊಂದಿದ್ದೇವೆ. ನಾವೇ ಬೆಂಬಲ ಬೆಲೆ ನೀಡಿ ಕೊಂಡುಕೊಳ್ಳುವ ವ್ಯವಸ್ಥೆ ಕೂಡಾ ಎಫ್ಸಿ ನೆಕ್ಸ್ಟ್ಅಪ್ಲಿಕೇಷನ್ ಮುಖಾಂತರ ಸಾಧ್ಯವಾಗಲಿದೆ. ಅಷ್ಟೇ ಅಲ್ಲ ರೈತ ಬೆಳೆದ ಬೆಳೆಗಳನ್ನ ಸುಲಭವಾಗಿ ಮಾರುಕಟ್ಟೆಗೆ ತಲುಪಿಸಲು ಸಾರಿಗೆ ವ್ಯವಸ್ಥೆ ಕೂಡಾ ಮಾಡುವ ಯೋಜನೆ ಹೊಂದಿದ್ದೇವೆ. ಒಟ್ಟಾರೆಯಾಗಿ ರೈತರ ಆರ್ಥಿಕ ಸಬಲೀಕರಣಕ್ಕೆ ಸೂಕ್ತ ವ್ಯವಸ್ಥೆ ಹಾಗೂ ಯೋಜನೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜನವರಿಯಲ್ಲಿ ನಡೆಯುವ ಎಕ್ಸ್ಪೋ ಕುರಿತಾಗಿ ಮಾತನಾಡಿ, ಮೂರನೇ ಆವೃತ್ತಿಯ ಕಾರ್ಯಕ್ರಮ ಇದಾಗಿದ್ದು, 3 ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಎರಡನೇ ಆವೃತ್ತಿಯಲ್ಲಿ 15,000 ಹಾಜರಿದ್ದರು, ಆದರೆ ಈ ಬಾರಿ ಗ್ರಾಹಕರನ್ನು ಒಳಗೊಂಡಂತೆ 1 ಲಕ್ಷ ಜನರನ್ನು ನಿರೀಕ್ಷಿಸುತ್ತಿದ್ದೇವೆ. ಅಪ್ಲಿಕೇಶನ್ ಡೌನ್ಲೋಡ್ ಮಾಡುವವರಿಗೆ ಉಚಿತ ಪ್ರವೇಶ ಸಿಗಲಿದೆ. ನಮ್ಮಲ್ಲಿ ರೈತರ ಸಂತೆ, ಗಂಗರು, ಹೊಯ್ಸಳರು, ಕೆಂಪೇಗೌಡರ ಆಳ್ವಿಕೆ ಮತ್ತು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳ ಶ್ರೀಮಂತ ಪರಂಪರೆಯನ್ನು ಪ್ರದರ್ಶಿಸಲು ಮ್ಯೂಸಿಯಂ ಮಾದರಿಯನ್ನು ಪ್ರದರ್ಶಿಸಲಾಗುತ್ತಿದೆ. ಎಕ್ಸ್ಪೋದಲ್ಲಿ ಉತ್ಪನ್ನಗಳು ಮತ್ತು ವ್ಯಾಪಾರದ 200 ಮಳಿಗೆಗಳು ಇರುತ್ತವೆ. ಅದರಲ್ಲಿ ಜಿಲ್ಲೆಯ ಪ್ರತಿನಿಧಿಗಳು ತಮ್ಮ ಸ್ಥಳೀಯ ವ್ಯವಹಾರಗಳ ಬಗ್ಗೆ ಚರ್ಚಿಸಲು ನಾವು ಸಮಯವನ್ನು ನಿಗದಿಪಡಿಸಿದ್ದೇವೆ. ಈ ಚರ್ಚೆಯಲ್ಲಿ ಹನ್ನೊಂದರ ಜೊತೆಗೆ ಕೃಷಿ ಕ್ಷೇತ್ರವನ್ನು ಪ್ರಮುಖವಾಗಿ ತೆಗೆದುಕೊಂಡು ಆಯಾ ಕ್ಷೇತ್ರಗಳ ಬಗೆಗೆ ಒತ್ತು ನೀಡಲಾಗುತ್ತದೆ.
ಸಂಸ್ಥೆ ಬಗ್ಗೆ ಸದಸ್ಯರು ಅಭಿಪ್ರಾಯ ಹಂಚಿಕೆ
ಮಂಜುಳಾ ಪ್ರಕಾಶ್ ಮಾತನಾಡಿ, ‘ಮಹಿಳಾ ಉದ್ಯಮಿಗಳು ಸೇರಿದಂತೆ ಎಲ್ಲರಿಗೂ ಇದೊಂದು ಉತ್ತಮ ವೇದಿಕೆಯಾಗಿದ್ದು, ಇದರಲ್ಲಿ ಭಾಗವಹಿಸುವ ಎಲ್ಲರಿಗೂ ಅನುಕೂಲವಾಗಲಿದೆ’ ಎಂದರು.
ಚಂದ್ರಪ್ಪ ಮಾತನಾಡಿ, 2022ರಲ್ಲಿ ಫಸ್ಟ್ ಸರ್ಕಲ್ ಆರಂಭಿಸಿದಾಗ ಐವರು ಸದಸ್ಯರಿದ್ದರು, ಇಂದು 1200 ಮಂದಿ ಇದ್ದಾರೆ. 2022ರಲ್ಲಿ 5 ಕೋಟಿ ರೂ. ವಹಿವಾಟು ನಡೆದಿದೆ. ಕಳೆದ ವರ್ಷ 2 ಸಾವಿರ ಕೋಟಿ ರೂ, ಆರು ತಿಂಗಳ ಹಿಂದೆ ನಾವು ಮೈಸೂರಿನಲ್ಲಿ ಹೂಡಿಕೆದಾರರ ಸಭೆಯನ್ನು ಕೂಡ ಆಯೋಜಿಸಿದ್ದೆವು ಮತ್ತು ಅದು ಯಶಸ್ವಿಯಾಗಿ ಜರುಗಿತು. ಈ ಬಾರಿ ನಾವು 200 ಸ್ಟಾಲ್ಗಳನ್ನು ಹೊಂದಿದ್ದು, ಆರೋಗ್ಯ, ಶಿಕ್ಷಣ, ಎಂಎಸ್ಎಂಇ, ಆಹಾರ ಮತ್ತು ಆತಿಥ್ಯ ಸೇರಿದಂತೆ ಇನ್ನೂ ಹಲವಾರು ವಲಯಗಳು ಒಂದೇ ಸೂರಿನಡಿ ಆಯೋಜಿಸಿದ್ದೇವೆ ಎಂದು ತಿಳಿಸಿದರು.
ಅಮರೇಶ ಎಂ ಮಾತನಾಡಿ, ‘ಹಿಂದಿನ ಎಕ್ಸ್ಪೋದಲ್ಲಿ ಬೆಂಗಳೂರು ನಗರಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು, ಈ ಬಾರಿ 123 ತಾಲ್ಲೂಕುಗಳಿಗೆ ವಿಸ್ತರಿಸಿದ್ದು, ಈ ಪ್ರದೇಶದ ಉದ್ಯಮಿಗಳು ಮತ್ತು ಗ್ರಾಹಕರು ಎಕ್ಸ್ಪೋ ದಲ್ಲಿ ಭಾಗವಹಿಸಲಿದ್ದಾರೆ. ಕಳೆದ ಬಾರಿ ನಾವು ಉದ್ಯಮಿಗಳನ್ನು ಮಾತ್ರ ಆಹ್ವಾನಿಸಿದ್ವಿ, ಆದರೆ ಈ ಬಾರಿ ಸುಮಾರು 1 ಲಕ್ಷ ಗ್ರಾಹಕರನ್ನು ಆಹ್ವಾನಿಸುತ್ತಿದ್ದೇವೆ ಎಂದು ಹೇಳಿದರು.
ಭುವನ ಸುರೇಶ್ ಮಾತನಾಡಿ, ʼಒಕ್ಕಲಿಗರು ಉದ್ಯಮಿಗಳಾಗಿ ಹೊರಹೊಮ್ಮಲು ಇದೊಂದು ಪರಿಪೂರ್ಣ ವೇದಿಕೆಯಾಗಿದ್ದು, ಪ್ರಮುಖ ಕ್ಷೇತ್ರವಾದ ಕೃಷಿಗೆ ವಿಶೇಷ ಆದ್ಯತೆ ನೀಡಲಾಗಿದೆ. ನಾವು ಕೃಷಿಗೆ ಮೌಲ್ಯವರ್ಧಿತ ಸೇವೆಗಳನ್ನು ನೀಡುತ್ತಿದ್ದೇವೆ ಮತ್ತು ತಂತ್ರಜ್ಞಾನವು ಹೇಗೆ ಸುಧಾರಿಸುತ್ತಿದೆ ಎಂಬುದನ್ನು ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ರೈತ ಉತ್ಪಾದಕ ಸಂಸ್ಥೆಗಳು ಮತ್ತು ಕಾಟೇಜ್ ಇಂಡಸ್ಟ್ರಿಗಳ ಜೊತೆಗೆ ಹಾರ್ಟಿಕಲ್ಚರ್ ಅನ್ನು ಉತ್ತೇಜಿಸಲಾಗುವುದು. ಒಕ್ಕಲಿಗ ಸಮುದಾಯದಲ್ಲಿರುವ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಮುಂತಾದ ಕ್ಷೇತ್ರಗಳ ವೃತ್ತಿಪರರ ಜೊತೆಗೆ ಸಂಸ್ಥೆಗಳು ಮತ್ತು ಗುಡಿ ಕೈಗಾರಿಕೆಗಳನ್ನು ಸೇರಿಸಲಾಗುವುದು ಮತ್ತು ನಾವು ಅವರಿಗೆ ವಿಶೇಷವಾಗಿ ಸೆಷನ್ಗಳನ್ನು ಕೈಗೊಳ್ಳಲಿದ್ದೇವೆ ಎಂದು ಮಾಹಿತಿ ನೀಡಿದರು.