ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷಾ ಕಾರ್ಯದಲ್ಲಿ ನಾಗರಿಕರು ಸಕ್ರಿಯವಾಗಿ ಪಾಲ್ಗೊಳ್ಳುವ ಉದ್ದೇಶದಿಂದ ಬಿಬಿಎಂಪಿ 8 ವಲಯಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಸರ್ಕಾರ, ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 8 ವಲಯಗಳಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಕಾರ್ಯವು ಮೇ 5 ರಿಂದ 23ನೇ ಮೇ 2025 ರವೆರೆಗೆ ನಡೆಯಲಿದೆ.
ಅದರಂತೆ, ಪಾಲಿಕೆ ಸಮನ್ವಯ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಕಲ್ಯಾಣ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್* ರವರ ನೇತೃತ್ವದಲ್ಲಿ, ಪರಿಶಿಷ್ಟ ಜಾತಿ ಸಮುದಾಯದವರು ಸಮೀಕ್ಷಾ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ನಿನ್ನೆಯಿಂದ ಮೇ 20 ರವರೆಗೆ 6 ದಿನಗಳ ಕಾಲ ಎಲ್ಲಾ 8 ವಲಯಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
*ಬೀದಿ ನಾಟಕಗಳ ಮೂಲಕ ಅರಿವು:*
ನಗರದಲ್ಲಿ ಪರಿಶಿಷ್ಟ ಜಾತಿ ಸಮುದಾಯವರು ಹೆಚ್ಚಿರುವ ಕಾಲೋನಿಗಳಲ್ಲಿ, ಜನದಟ್ಟಣೆ ಹೆಚ್ಚಿರುವ ಜಾಗಗಳಲ್ಲಿ, ಸಿಗ್ನಲ್ ಗಳಲ್ಲಿ, ಮಾಲ್ ಗಳಲ್ಲಿ, ಮಾರುಕಟ್ಟೆ ಪ್ರದೇಶಗಳಲ್ಲಿ, ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಇನ್ನಿತರೆ ಜನದಟ್ಟಣೆ ಪ್ರದೇಶಗಳಲ್ಲಿ ಬೀದಿ ನಾಟಕಗಳನ್ನು ಏರ್ಪಡಿಸಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ.
*ಧ್ವನಿವರ್ಧಕಗಳ ಮೂಲಕ ಜಾಗೃತಿ:*
ಬಿಬಿಎಂಪಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷಾ ಕಾರ್ಯ ನಡೆಸುತ್ತಿರುವ ಕುರಿತು ಆಟೋಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಿಕೊಂಡು ನಾಗರೀಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಅದರ ಜೊತೆಗೆ ಭಿತ್ತಿ ಪತ್ರಗಳು ಹಾಗೂ ಕರ ಪತ್ರಗಳನ್ನು ಹಂಚುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
*3 ಹಂತಗಳಲ್ಲಿ ಸಮೀಕ್ಷಾ ಕಾರ್ಯ:*
ನಗರದಲ್ಲಿ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷಾ ಕಾರ್ಯವು 3 ಹಂತಗಳಲ್ಲಿ ನಡೆಯುತ್ತಿದ್ದು, ಮೊದಲನೇ ಹಂತದಲ್ಲಿ ಮೇ 5 ರಿಂದ ಮೇ 17 ರವರೆಗೆ ಗಣತಿದಾರರು ಮನೆ-ಮನೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ. 2ನೇ ಹಂತದಲ್ಲಿ ಮೇ 19 ರಿಂದ ಮೇ 21 ರವರೆಗೆ ಗಣತಿದಾರರಿಂದ ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ನಡೆಯಲಿದೆ. 3ನೇ ಹಂತದಲ್ಲಿ ಮೇ 19 ರಿಂದ 23 ರವರೆಗೆ ಆನ್ ಲೈನ್ ಮೂಲಕ ಸ್ವಯಂ ಘೋಷಣೆ ಮಾಡಿಕೊಳ್ಳಬಹುದು.
*58,122 ಪರಿಶಿಷ್ಟ ಮನೆಗಳ ಸಮೀಕ್ಷೆ:*
ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ 27 ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷಾ ಕಾರ್ಯ ಸಕ್ರಿಯವಾಗಿ ನಡೆಯುತ್ತಿದ್ದು, ಸಮೀಕ್ಷೆ ಮಾಡಲು 8,072 ಗಣತಿದಾರರನ್ನು ನಿಯೋಜಿಸಲಾಗಿದೆ. ಈ ಪೈಜಿ ಈಗಾಗಲೇ 58,122 ಪರಿಶಿಷ್ಟ ಮನೆಗಳಿಗೆ ಹಾಗೂ 14,14,716 ಪರಿಶಿಷ್ಟ ಜಾತಿಯಲ್ಲದ ಮನೆಗಳಿಗೆ ಭೇಟಿ ನೀಡಿ ದತ್ತಾಂಶ ಸಂಗ್ರಹಿಸಲಾಗಿದೆ.
*ಅಗತ್ಯ ದಾಖಲೆಗಳನ್ನು ಒದಗಿಸಿ:*
ನಗರದ 8 ವಲಯಗಳ ಜನದಟ್ಟಣೆ ಪ್ರದೇಶಗಳಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಪರಿಣಾಮಕಾರಿಯಾಗಿ ನಡೆಸಲಾಗುತ್ತಿದ್ದು, ಸಮೀಕ್ಷೆಗಾಗಿ ಮನೆ-ಮನೆಗೆ ಬರುವ ಗಣತಿದಾರರಿಗೆ ಅಗತ್ಯ ದಾಖಲಾತಿಗಳನ್ನು ಒದಗಿಸಲು ಕೋರಿದೆ.
* ಪರಿಶಿಷ್ಟ ಜಾತಿಯವರು ತಮ್ಮ ಮೂಲ ಜಾತಿ ದಾಖಲೆಯ ಪ್ರಮಾಣ ಪತ್ರ
* ಶಿಕ್ಷಣ (ವಿದ್ಯಾಭ್ಯಾಸ ದಾಖಲಾತಿಗಳು)
* ವರಮಾನ (ವಾರ್ಷಿಕ ವರಮಾನದ ದಾಖಲಾತಿ)
* ಉದ್ಯೋಗದ ವಿವರ
* ಆಧಾರ್ ಕಾರ್ಡ್ ಸಂಖ್ಯೆ ಅಥವಾ ಪಡಿತರ ಚೀಟಿಯಂತಹ ಇನ್ನಿತರ ಅಗತ್ಯ ದಾಖಲಾತಿಗಳು
ಹೆಚ್ಚಿನ ಮಾಹಿತಿಗಾಗಿ ವಿಧಾನಸಭಾ ಕ್ಷೇತ್ರವಾರು ಸರ್ವೇ ಮಾಡಿರುವ ಅಂಕಿ-ಅಂಶಗಳ ಪಟ್ಟಿಯನ್ನು ಲಗತ್ತಿಸಲಾಗಿದೆ.