ಬೆಂಗಳೂರು: ಬಿಬಿಎಂಪಿಯು ಹಮ್ಮಿಕೊಂಡಿದ್ದ ಮೂರು ದಿನಗಳ “ನಮ್ಮ ರಸ್ತೆ-2025” ಕಾರ್ಯಗಾರ, ಪ್ರದರ್ಶನ ಹಾಗೂ ಸಮಾವೇಶ ಕಾರ್ಯಕ್ರಮವು ಇಂದು ಯಶಸ್ವಿಯಾಗಿ ಮುಕ್ತಾಯಗೊಂಡಿತು.
ನಮ್ಮ ರಸ್ತೆ-2025 ಫೆ. 20, 21 ಹಾಗೂ 22 ರಂದು ನಡೆದ ಕಾರ್ಯಕ್ರಮದಲ್ಲಿ ಹಲವಾರು ವಿಷಯಗಳ ಕುರಿತು ಕಾರ್ಯಗಾರಗಳು, ಸಮಾವೇಶಗಳು ನಡೆಯಿತು. ಬಿಬಿಎಂಪಿಯೊಂದಿಗೆ ಡಬ್ಲ್ಯೂ.ಆರ್.ಐ ಇಂಡಿಯಾ ಜ್ಞಾನ ಪಾಲುದಾರರಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ 5,000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದು, ರಾಜ್ ಕುಮಾರ್ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ಪ್ರದರ್ಶನವನ್ನು ಸಾರ್ವಜನಿಕರು ವೀಕ್ಷಿಸಿದರು. ಸುಸ್ಥಿರ ನಗರ ಸಾರಿಗೆ ಪರಿಹಾರಗಳನ್ನು ಚರ್ಚಿಸಲು ಸರ್ಕಾರ ಮತ್ತು ನಾಗರಿಕ ಸಮಾಜ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ವೈವಿಧ್ಯಮಯ ನಾಗರಿಕರು ಮತ್ತು ಪಾಲುದಾರರಲ್ಲಿ ಕಾರ್ಯಕ್ರಮಲ್ಲಿ ಪಾಲ್ಗೊಂಡಿದ್ದರು.
ನಮ್ಮ ರಸ್ತೆ ಕಾರ್ಯಕ್ರಮದ ಮೊದಲನೇ ದಿನ:
ಸನ್ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಡಿ.ಕೆ ಶಿವಕುಮಾರ್ ರವರು ನಮ್ಮ ರಸ್ತೆ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡುವ ಜೊತೆಗೆ, ನಗರದಲ್ಲಿ ಯಾವುದೇ ಕಾಮಗಾರಿ ಕೈಗೆತ್ತಿಕೊಂಡರೂ ಒಂದೇ ಮಾದರಿಯ ವಿನ್ಯಾಸ ಕಾಪಾಡುವ ನಿಟ್ಟಿನಲ್ಲಿ ರಚಿಸಿರುವ “ನಮ್ಮ ರಸ್ತೆ ಕೈಪಿಡಿ”ಯನ್ನು ಬಿಡುಗಡೆಗೊಳಿಸಿದರು.
ನಮ್ಮ ರಸ್ತೆ ಕೈಪಿಡಿಯಲ್ಲಿರುವ ಎಲ್ಲಾ ಅಂಶಗಳನ್ನು ಚಾಚು ತಪ್ಪದೆ ಪಾಲಿಸಿ ಅದನ್ನು ಅನುಷ್ಠಾನಕ್ಕೆ ತರುವುದು ಪ್ರಮುಖ ಉದ್ದೇಶವಾಗಿದೆ. ನಗರದ ಎಲ್ಲಾ ರಸ್ತೆಗಳು, ಪಾದಚಾರಿ ಮಾರ್ಗಗಳು ವಿನ್ಯಾಸಗಳು ಏಕರೂಪತೆಯಿಂದ ಇರಬೇಕೆಂಬುದರ ಕುರಿತು ಪ್ರಮಾಣಿತ ಕಾರ್ಯವಿಧಾನ(SOP)ದ ಪ್ರಕಾರ ಕೈಪಿಡಿಯನ್ನು ಸಿದ್ದಪಡಿಸಲಾಗಿದೆ.
ಸುಸ್ಥಿರ ಸಾರಿಗೆ ಮತ್ತು ವಾಸಯೋಗ್ಯದ ಕುರಿತು, ಬೆಂಗಳೂರಿನ ಸಂಚಾರವನ್ನು ನಾವು ಹೇಗೆ ನಿರ್ವಹಿಸುವುದು, ಸಮೂಹ ಸಾರಿಗೆಗೆ ಉದ್ಯೋಗಗಳನ್ನು ಹತ್ತಿರ ತರುವುದರ ಕುರಿತು ನಡೆದ ಸಮಾವೇಶದಲ್ಲಿ ಸಾಕಷ್ಟು ಅಂಶಗಳನ್ನು ಚರ್ಚಿಸಲಾಯಿತು.
ನಮ್ಮ ರಸ್ತೆ ಕಾರ್ಯಕ್ರಮದ ಎರಡನೇ ದಿನ:
ಕಾರ್ಯಕ್ರಮದ 2ನೇ ದಿನದಂದು, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಾದ ಡಾ. ಶಾಲಿನಿ ರಜನೀಶ್ ರವರು ಬೆಂಗಳೂರು ಎದುರಿಸುತ್ತಿರುವ ಸಂಚಾರ ಸಮಸ್ಯೆಗಳ ಕುರಿತು ಮಾತನಾಡಿದರು. ಜೊತೆಗೆ ನಗರದ ಚಲನಶೀಲತೆಯ ಸವಾಲುಗಳನ್ನು ಪರಿಹರಿಸಲು ಸಹಯೋಗದ ಮಹತ್ವವದ ಕುರಿತು ತಿಳಿಸಿದರು.
ಬಿಬಿಎಂಪಿ ಎಂಜಿನಿಯರ್ಗಳ ಸಾಮರ್ಥ್ಯ ವೃದ್ಧಿ ಕಾರ್ಯಾಗಾರ, ಉತ್ತಮ ಬೀದಿಗಳನ್ನು ನಿರ್ಮಿಸುವುದು, ಸಾರ್ವಜನಿಕ ಸಾರಿಗೆಯ ತಂತ್ರಜ್ಞಾನ ವಿಕಸನದ ಸಮಾವೇಶಗಳು ನಡೆಯಿತು.
ನಮ್ಮ ರಸ್ತೆ ಕಾರ್ಯಕ್ರಮದ ಮೂರನೇ ದಿನ:
ನಮ್ಮ ರಾಸ್ತೆ ಕಾರ್ಯಕ್ರಮದ ಮೂರನೇ ದಿನವಾದ ಅಂತಿಮ ದಿನದಂದು ಫ್ರೆಂಡ್ಸ್ ಆಫ್ ಬಿಎಂಟಿಸಿ ಆಯೋಜಿಸಿದ್ದ ‘ನಮ್ಮ ಬಸ್ಸು’ ಕುರಿತು ರಸಪ್ರಶ್ನೆ ನಡೆಯಿತು. ಇದರ ನಂತರ ಬೆಂಗಳೂರಿನ ಪಾದಚಾರಿ ಮಾರ್ಗಗಳ ಕುರಿತು ಆಕರ್ಷಕ ಚರ್ಚೆ ನಡೆಯಿತು, ನಗರದಲ್ಲಿ ನಡೆಯಲು ಸುಲಭತೆಯನ್ನು ಹೆಚ್ಚಿಸಲು ಮತ್ತು ಸುರಕ್ಷಿತ ಪಾದಚಾರಿ ಮೂಲಸೌಕರ್ಯವನ್ನು ಕಲ್ಪಿಸುವ ಕುರಿತು ಮಾತುಕತೆ ನಡೆಯಿತು.
ಮೂರು ದಿನಗಳ ಕಾರ್ಯಕ್ರಮದಲ್ಲಿ 70ಕ್ಕೂ ಹೆಚ್ಚು ಭಾಷಣಕಾರರು, 68 ಸರ್ಕಾರಿ ಮತ್ತು ಪಾಲುದಾರ ಸಂಸ್ಥೆಗಳು, 16ಕ್ಕೂ ಹೆಚ್ಚು ಶಾಲೆಗಳು ಮತ್ತು ಕಾಲೇಜುಗಳು, ಹಲವಾರು ಕಾರ್ಪೊರೇಟ್ ಸಂಸ್ಥೆಗಳು ಭಾಗವಹಿಸಿ ನಗರದ ಚಲನಶೀಲತೆಯ ಸವಾಲುಗಳು ಮತ್ತು ಪರಿಹಾರಗಳ ಕುರಿತು ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿರುವ ಒಳನೋಟವುಳ್ಳ ಅಧಿವೇಶನಗಳು ಮತ್ತು ಸಂವಾದಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. BMTC, BMRCL, KRide, DULT, ಮತ್ತು BTP ಯ ಪ್ರತಿನಿಧಿಗಳು ಸಹ ಹಾಜರಿದ್ದರು. ಬೆಂಗಳೂರಿನ ಚಲನಶೀಲತೆಯ ಸವಾಲುಗಳನ್ನು ಪರಿಹರಿಸುವಲ್ಲಿ ಬಹು ಸಂಸ್ಥೆಗಳ ಸಹಯೋಗದ ಪ್ರಯತ್ನಗಳನ್ನು ಇಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು.