ಬೆಂಗಳೂರು: ರಾಜ್ಯದಲ್ಲಿ ಲೂಟಿ ಹೊಡೆದ ಹಣವನ್ನು ತೆಲಂಗಾಣದಲ್ಲಿ ವೆಚ್ಚ ಮಾಡಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಚುನಾವಣೆ ಫಲಿತಾಂಶದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದರು.
ಪಂಚರಾಜ್ಯಗಳನ್ನೂ ಆವರಿಸಿಕೊಂಡೇ ಬಿಟ್ಟೆವು ಎಂದು ಬೀಗುತ್ತಿದ್ದ ಕಾಂಗ್ರೆಸ್ ಗರ್ವಭಂಗ ಆಗಿದೆ. ತೆಲಂಗಾಣದ ಗೆಲುವು ಅದರ ಸ್ವಶಕ್ತಿಯಿಂದ ಪಡೆದ ಗೆಲುವಲ್ಲ. ದೇಶದ ಎಲ್ಲಾ ಕಡೆ ಕಾಂಗ್ರೆಸ್ ಪ್ರಭಾವ ಕುಗ್ಗಿದೆ ಎಂಬುದಕ್ಕೆ ಈ ಫಲಿತಾಂಶ ಸಾಕ್ಷಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹಲವಾರು ಮತಗಟ್ಟೆ ಸಮೀಕ್ಷೆಗಳು ಜನರ ಮುಂದೆ ಇದ್ದವು. ಎರಡು ರಾಜ್ಯಗಳಲ್ಲಿ ಬಿಜೆಪಿ , ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ಅಂತ ಈ ಸಮೀಕ್ಷೆಗಳು ಭವಿಷ್ಯ ಹೇಳಿದ್ದವು. ಎಲ್ಲಾ ಉಲ್ಟಾ ಆಗಿದೆ. ನರೇಂದ್ರ ಮೋದಿಯವರ ನಾಯಕತ್ವಕ್ಕೆ ಬೆಂಬಲದ ರೂಪದಲ್ಲಿ ಜನತೆ ತೀರ್ಮಾನ ಕೈಗೊಂಡಿದ್ದಾರೆ. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಆ ಪಕ್ಷದ ಮುಂದೆ ಸಾಕಷ್ಟು ಸವಾಲುಗಳು ಇವೆ. ಅನೇಕ ಆಸೆ, ಆಮಿಷಗಳನ್ನು ಮುಂದೊಡ್ಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ.
ರಾಜ್ಯದಿಂದ ಹೋದ ಹಣದ ಥೈಲಿಗಳು ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿವೆ: ಹೆಚ್.ಡಿ.ಕುಮಾರಸ್ವಾಮಿ
ಕರ್ನಾಟಕದ ನಾಯಕರ ಪ್ರಚಾರದಿಂದ ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಿಲ್ಲ. ಕರ್ನಾಟಕದಿಂದ ಅಲ್ಲಿಗೆ ರವಾನೆಯಾದ ಆರ್ಥಿಕ ಥೈಲಿಗಳು, ಚೀಲಗಳು ಈ ಗೆಲುವಿಗೆ ಕಾರಣ. ಇವರ ಸಮಾಜ ಸೇವೆ, ಅಭಿವೃದ್ಧಿಗೆ ಪೂರಕವಾಗಿ ಜನಸೇವೆ ನೋಡಿ ಜನರು ತೆಲಂಗಾಣದಲ್ಲಿ ತೀರ್ಮಾನ ಮಾಡಿದ್ದಲ್ಲ. ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲ್ಲಲು ನಾನಾ ಕಾರಣಗಳಿವೆ, ಕುತಂತ್ರಗಳು ಕೆಲಸ ಮಾಡಿವೆ. ಲೋಕಸಭೆ ಚುನಾವಣೆ ಬಳಿಕ ಏನೇನಾಗುತ್ತದೆ ಎಂಬುದನ್ನು ನೋಡ್ಬೇಕಲ್ಲ ಎಂದು ಮಾಜಿ ಮುಖ್ಯಮಂತ್ರಿ ಅವರು ಮಾರ್ಮಿಕವಾಗಿ ನುಡಿದರು.