ಬೆಂಗಳೂರು: ಸಂಸ್ಕರಿಸಿದ ನೀರು ವಿಫಲವಾಗಿ ಲಭ್ಯವಿದ್ದು ಅದರ ಮಾರುಕಟ್ಟೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಲಮಂಡಳಿಯ ವತಿಯಿಂದ ಸಣ್ಣ ಕೈಗಾರಿಕೆಗಳು, ಎಫ್ಕೆಸಿಸಿಐ ಮತ್ತು ಕಾಸಿಯಾ ಜೊತೆ ಸಭೆಯನ್ನು ಆಯೋಜಿಸಲಾಗುವುದು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ 20 ಲಕ್ಷದಿಂದ 40 ಲಕ್ಷ ಲೀಟರ್ ನೀರು ಬಳಕೆದಾರರೊಂದಿಗೆ ಸಭೆಯನ್ನು ನಡೆಸಿ ಅವರು ಮಾತನಾಡಿದರು. ಬೆಂಗಳೂರು ನಗರದಲ್ಲಿ ಮಾರ್ಚ್ ತಿಂಗಳಲ್ಲಿ ಇದ್ದಂತಹ ಅಭಾವ ಈಗ ಇಲ್ಲ. ನೀರಿನ ಸಮರ್ಪಕ ಬಳಕೆ ಹಾಗೂ ಉಳಿತಾಯಕ್ಕೆ ಒತ್ತು ನೀಡಿರುವುದರಿಂದ ನೀರಿನ ಸದ್ಬಳಕೆ ಅಗುತ್ತಿದೆ. ಜನಸಾಂದ್ರಿತ ಪ್ರದೇಶಗಳಲ್ಲಿ 1200 ಕ್ಕೂ ಹೆಚ್ಚು ಸಿಂಟೆಕ್ಸ್ ಟ್ಯಾಂಕ್ಗಳನ್ನು ಅಳವಡಿಸಿದ್ದು, ಪ್ರತಿ ದಿನ ಸುಮಾರು 50 ಲಕ್ಷ ಲೀಟರ್ ನಿಂದ 1 ಕೋಟಿ ಲೀಟರ್ ವರೆಗೆ ಕುಡಿಯುವ ನೀರನ್ನು ಉಚಿತವಾಗಿ ಸರಬರಾಜು ಮಾಡಲಾಗುತ್ತಿದೆ. 20 ಲಕ್ಷದಿಂದ 40 ಲಕ್ಷ ಲೀಟರ್ ನೀರು ಬಳಕೆ ಮಾಡುವ ಸುಮಾರು 18 ಸಾವಿರ ಗ್ರಾಹಕರು ಇದ್ದಾರೆ. ಇವರು ಪ್ರತಿದಿನ ಸುಮಾರು 200 ಎಂ ಎಲ್ ಡಿ ನೀರನ್ನ ಬಳಸುತ್ತಿದ್ದಾರೆ. ಇವರು ಪಂಚಸೂತ್ರಗಳನ್ನು ಅಳವಡಿಸಿಕೊಳ್ಳುವುದರಿಂದ ನೀರಿನ ಉಳಿತಾಯ ಸಾಧ್ಯವಿದೆ. ಈ ಹಿನ್ನಲೆಯಲ್ಲಿ ಪಂಚಸೂತ್ರಗಳನ್ನು ಅಳವಡಿಸಿ ಗ್ರೀನ್ ಸ್ಟಾರ್ ಚಾಲೆಂಜ್ ಸ್ವೀಕರಿಸುವಂತೆ ಜಲಮಂಡಳಿ ಅಧ್ಯಕ್ಷರು ಸೂಚನೆ ನೀಡಿದರು.
ಸಂಸ್ಕರಿಸಿದ ನೀರಿನ ಮಾರುಕಟ್ಟೆಯನ್ನು ಹೆಚ್ಚಿಸಲು ಜಲಮಂಡಳಿಯಿಂದ ಕ್ರಮ:
ಬೆಂಗಳೂರು ನಗರದಲ್ಲಿ ಸಂಸ್ಕರಿಸಿದ ನೀರು ವಿಫಲವಾಗಿ ಲಭ್ಯವಿದೆ. ಇದರ ಸದ್ಬಳಕೆಯಿಂದ ನಾವು ಕಾವೇರಿ ನೀರಿನ ಮೇಲಿನ ಅವಲಂಬನೆಯನ್ನು ಆದಷ್ಟು ಕಡಿಮೆ ಮಾಡಬಹುದಾಗಿದೆ. ಇದಲ್ಲದೇ, ಅಪಾರ್ಟ್ಮೆಂಟ್ಗಳು ಹಾಗೂ ಖಾಸಗಿ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದಲೂ ನೀರು ಲಭ್ಯವಿದೆ. ಇದರ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಲಮಂಡಳಿ ಕಾರ್ಯಪ್ರವೃತ್ತವಾಗಿದೆ. ಇದರ ಜೊತೆಯಲ್ಲೇ ಸಂಸ್ಕರಿಸಿದ ನೀರಿನ ಮಾರುಕಟ್ಟೆಯನ್ನು ಹೆಚ್ಚಿಸುವ ನಿಟ್ಟಿನಲ್ಲೂ ಹಲವಾರು ನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಂದು ಸಂಸ್ಕರಿಸಿದ ನೀರಿನ ಬಳಕೆ ಕಡಿಮೆಯಿದೆ. ಆದರೆ ಮುಂದಿನ ದಿನಗಳಲ್ಲಿ ಜನರು ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಣ್ಣ ಕೈಗಾರಿಕೆಗಳು ಸೇರಿದಂತೆ ಪ್ರಮುಖ ಸಂಸ್ಥೆಗಳು ಇದರ ಬಳಕೆಯನ್ನು ಮಾಡಬೇಕು ಎನ್ನುವ ದೃಷ್ಟಿಯಿಂದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ನಾಳೆ ಜಲಮಂಡಳಿಯ ವತಿಯಿಂದ ಸಣ್ಣ ಕೈಗಾರಿಕೆಗಳು, ಎಫ್ಕೆಸಿಸಿಐ ಮತ್ತು ಕಾಸಿಯಾ ಜೊತೆ ಸಭೆಯನ್ನು ಆಯೋಜಿಸಿ ಅವರಿಗೆ ಸಂಸ್ಕರಿಸಿದ ನೀರನ್ನ ಬಳಸುವಂತೆ ಮನವೊಲಿಸುವ ಪ್ರಯತ್ನ ಮಾಡಲಾಗುವುದು *ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ವಿ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಒಂದು ಲೀಟರ್ ಬಾಟಲ್ ದರದಲ್ಲಿ ಸಾವಿರ ಲೀಟರ್ ಕಾವೇರಿ ನೀರು:
ಒಂದು ಲೀಟರ್ ಬಾಟಲ್ ನೀರು ತಗೆದುಕೊಳ್ಳಲು ಖರ್ಚು ಮಾಡುವ ದುಡ್ಡಿನಲ್ಲಿ ಬೆಂಗಳೂರು ಜಲ ಮಂಡಳಿ ಸಾವಿರ ಲೀಟರ್ ನಷ್ಟು ನೀರನ್ನ ಮನೆಗಳಿಗೆ ಸರಬರಾಜು ಮಾಡುತ್ತಿದೆ. ಕಡಿಮೆ ದರದಲ್ಲಿ ದೊರೆಯುವ ವಸ್ತುಗಳ ಮೇಲೆ ಯಾವಾಗಲೂ ಜನರಿಗೆ ಹೆಚ್ಚಿನ ಪ್ರೀತಿ ಇರುವುದಿಲ್ಲ. ಇದು ಕಾವೇರಿ ನೀರಿನ ವಿಷಯದಲ್ಲೂ ಸ್ಪಷ್ಟವಾಗಿ ಗೋಚರವಾಗುತ್ತದೆ. 1 ಲೀಟರ್ ನೀರನ್ನು ಜೋಪಾನ ಮಾಡುವ ಜನರು ಕೆಲವೆಡೆಗಳಲ್ಲಿ ಅಮೂಲ್ಯ ಕಾವೇರಿ ನೀರನ್ನ ಅನಗತ್ಯವಾಗಿ ಪೋಲು ಮಾಡುತ್ತಿದ್ದಾರೆ. ಇದನ್ನ ತಡೆಗಟ್ಟುವಲ್ಲಿ ನಿಮ್ಮ ಬಳಕೆದಾರರಲ್ಲಿ ಜಾಗೃತಿ ಮೂಡಿಸಬೇಕಾಗಿರುವುದು ಬಹಳ ಅಗತ್ಯವಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ವಾಟರ್ ಸಫೀಶಿಯೆಂಟ್ ಬೆಂಗಳೂರು ನಿರ್ಮಾಣದ ಜನಾಂದೋಲನಕ್ಕೆ ಕೈಜೋಡಿಸಿ:
ನೀರಿನ ಉಳಿತಾಯ ಮಾಡುವಂತಹ ತಂತ್ರಜ್ಞಾನಗಳನ್ನ ಅಳವಡಿಸಿಕೊಳ್ಳುವುದು, ಸಂಸ್ಕರಿಸಿದ ನೀರಿನ ಬಳಕೆಯನ್ನು ಹೆಚ್ಚಿಸಿಕೊಳ್ಳುವುದು, ಕೊಳವೆ ಬಾವಿಗಳ ಬಳಕೆಯಲ್ಲಿ ತಂತ್ರಜ್ಞಾನದ ಅಳವಡಿಕೆ ಮಾಡಿಕೊಳ್ಳುವುದು, ಮಳೆ ನೀರು ಇಂಗು ಗುಂಡಿಗಳನ್ನ ಅಳವಡಿಸಿಕೊಳ್ಳುವುದು ಹಾಗೂ ಈ ಎಲ್ಲಾ ಹೊಸ ಅನುಷ್ಠಾನಗಳ ಬಗ್ಗೆ ಬಳಕೆದಾರರಿಗೆ ಮಾಹಿತಿಯನ್ನು ಕೊಡುವ ಮೂಲಕ ನೀರಿನ ಉಳಿತಾಯದ ಮಹತ್ವವನ್ನು ಸಾರುವುದು. ಈ ಪಂಚ ಸೂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಅಮೂಲ್ಯ ನೀರನ್ನ ಉಳಿಸಲು ಆಯೋಜಿಸಿರುವ ಜನಾಂದೋಲನಕ್ಕೆ ಕೈಜೋಡಿಸಿ ಎಂದು ಅಧ್ಯಕ್ಷರು ಕರೆ ನೀಡಿದರು.
ಏಪ್ರಿಲ್ 14 ರಿಂದ ಶೇಕಡಾ 10 ರಷ್ಟು ನೀರಿನ ಕಡಿತ
ಬೆಂಗಳೂರು ಜಲಮಂಡಳಿಯಿಂದ ಪ್ರತಿ ತಿಂಗಳು 20 ಲಕ್ಷ ದಿಂದ 40 ಲಕ್ಷ ಲೀಟರ್ಗಳಷ್ಟು ಬಳಕೆ ಮಾಡುವ ಬಲ್ಕ್ ಬಳಕೆದಾರರಿಗೆ ಏಪ್ರಿಲ್ 14 ರಿಂದ ಶೇಡಕಾ 10 ರಷ್ಟು ನೀರನ್ನ ಕಡಿತಗೊಳಿಸಲಾಗುವುದು. ಪಂಚಸೂತ್ರಗಳನ್ನು ಅಳವಡಿಸಿಕೊಳ್ಳುವುದರಿಂದ ಶೇಕಡಾ 10 ರಷ್ಟು ನೀರಿನ ಉಳಿತಾಯ ಆಗಲಿದೆ. ಕಡಿತಗೊಳಿಸಿದ ನೀರನ್ನ ಅಗತ್ಯವಿರುವಂತಹ ಪ್ರದೇಶಗಳಿಗೆ ಸರಬರಾಜು ಮಾಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ಸಭೆಯಲ್ಲಿ ವಿವಿಧ ಅಪಾರ್ಟ್ಮೆಂಟಗಳ ಹಾಗೂ ಬಲ್ಕ್ ಯೂಸರ್ಸ್ ಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.