ಬೆಂಗಳೂರು: ನೀರಿನ ಬಳಕೆ ಮತ್ತು ನಿರ್ವಹಣೆಯಲ್ಲಿ ಸುಸ್ಥಿರ ಹಾಗೂ ಹೊಸ ತಂತ್ರಜ್ಞಾನಗಳ ಅಳವಡಿಕೆಗೆ ಹಾಗೆಯೇ, ಬಿರು ಬೇಸಿಗೆಯ ನೀರಿನ ಬವಣೆಯನ್ನು ಸಮರ್ಥವಾಗಿ ನಿಭಾಯಿಸಿದ *ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಪ್ರತಿಷ್ಠಿತ ಸಿಐಐ ಐಜಿಬಿಸಿ ಗ್ರೀನ್ ಪ್ರಾಜೆಕ್ಟ್ 2024 ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಬೆಂಗಳೂರಿನ ಅಂತರಾಷ್ಟ್ರೀಯ ಎಕ್ಸಿಬೀಷನ್ ಸೆಂಟರ್ನಲ್ಲಿ ನಡೆಯುತ್ತಿರುವ ಏಷ್ಯಾದ ಅತಿದೊಡ್ಡ ಗ್ರೀನ್ ಎಕ್ಸ್ಪೋ ಗ್ರೀನ್ ಬಿಲ್ಡಿಂಗ್ ಕಾಂಗ್ರೆಸ್ನಲ್ಲಿ ಸಿಐಐ ಐಜಿಬಿಸಿಯ ಶೇಖರ ರೆಡ್ಡಿ ಹಾಗೂ ಗುರ್ಮೀತ್ ಸಿಂಗ್ ಅರೋರ ಅವರು ಪ್ರಶಸ್ತಿ ಪ್ರಧಾನ ಮಾಡಿದರು.
ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ಅವರು, ಬೆಂಗಳೂರು ನಗರ ಈ ಬಾರಿ ಬೇಸಿಗೆಯಲ್ಲಿ ಹಿಂದೇಂದು ಕಾಣದ ರೀತಿಯ ನೀರಿನ ಸಮಸ್ಯೆಗೆ ತುತ್ತಾಗಬೇಕಾಯಿತು. ಅಂತರ್ಜಲ ಕುಸಿತದಿಂದ ಉಂಟಾಗಿದ್ದ ನೀರಿನ ಕೊರತೆಯನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ, ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಹಲವಾರು ಸುಸ್ಥಿರ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಲಾಯಿತು. ನೀರು ಅನಗತ್ಯ ಪೋಲಾಗುವುದನ್ನು ತಡೆಯುವ ನಿಟ್ಟಿನಲ್ಲಿ ಏರಿಯೇಟರ್ಗಳ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಯಿತು. ಇದಲ್ಲದೇ, ಅಪಾರ್ಟ್ಮೆಂಟ್ಗಳಿಗೆ, ವಾಣಿಜ್ಯ ಕಟ್ಟಡಗಳಿಗೆ, ಸಾರ್ವಜನಿಕ ಪ್ರದೇಶಗಳಲ್ಲಿ, ಕೈಗಾರಿಕೆಗಳಲ್ಲಿ ಇದನ್ನು ಅಳವಡಿಸಿಕೊಂಡು ನೀರಿನ ಸಮರ್ಪಕ ಬಳಕೆಗೆ ಒತ್ತು ನೀಡುವಂತೆ ಮನವೊಲಿಸಲಾಯಿತು. ಅಲ್ಲದೇ, ಅಪಾರ್ಟ್ಮೆಂಟ್ಗಳು, ಹೋಟೇಲ್ಗಳು, ಕೈಗಾರಿಕೆಗಳಿಗೆ ಪಂಚಸೂತ್ರಗಳನ್ನು ಅಳವಡಿಸಿಕೊಳ್ಳುವ ಗ್ರೀನ್ ಸ್ಟಾರ್ ಛಾಲೆಂಜ್ನ್ನು ಯಶಸ್ವಿಯಾಗಿ ಅಳವಡಿಸಿಲಾಯಿತು.
ನೀರಿನ ಉಳಿತಾಯ ಮಾಡುವಂತಹ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು, ಸಂಸ್ಕರಿಸಿದ ನೀರಿನ ಬಳಕೆಯನ್ನು ಹೆಚ್ಚಿಸುವುದು, ಕೊಳೆ ಬಾವಿಗಳ ಬಳಕೆಯಲ್ಲಿ ತಂತ್ರಜ್ಞಾನದ ಅಳವಡಿಕೆ ಮಾಡಿಕೊಳ್ಳುವುದು, ಮಳೆ ನೀರು ಇಂಗುಗುಂಡಿಗಳನ್ನು ಅಳವಡಿಸುವುದು, ಈ ಎಲ್ಲಾ ಹೊಸ ಅನುಷ್ಠಾನಗಳ ಬಗ್ಗೆ ಗ್ರಾಹಕರಿಗೆ ಹಾಗೂ ಸಿಬ್ಬಂದಿಗಳಿಗೆ ಮಾಹಿತಿಯನ್ನು ಕೊಡುವ ನೀರಿನ ಮಹತ್ವವನ್ನು ಸಾರುವುದು. ಈ ಪಂಚಸೂತ್ರಗಳ ಸಮರ್ಪಕ ಅಳವಡಿಕೆಯಿಂದ ಬೇಸಿಗೆ ನೀರಿನ ಬವಣೆಯನ್ನು ನಿಭಾಯಿಸುವಲ್ಲಿ ನಮ್ಮ ಜಲಮಂಡಳಿ ಯಶಸ್ವಿಯಾಯಿತು.
ಇದಲ್ಲದೇ, ಯುನೈಟೆಡ್ ನೇಷನ್ಸ್ನ ಕ್ಲೈಮೇಟ್ ಚೆಂಜ್ ಸಮಾವೇಶದಲ್ಲಿ ಭಾಗವಹಿಸುವ ಮೂಲಕ ಬೆಂಗಳೂರು ನಗರದ ನೀರು ನಿರ್ವಹಣೆಯ ಮಾದರಿಯನ್ನು ಪ್ರಪಂಚದ ಇತರೆ ದೊಡ್ಡ ನಗರಗಳ ಪ್ರಮುಖರಿಗೆ ವಿವರಿಸಲಾಯಿತು. ನಮ್ಮ ಸುಸ್ಥಿರ ಯೋಜನೆಗಳ ಬಗ್ಗೆ ಯುನೈಟೆಡ್ ನೇಷನ್ಸ್ನ ವೇದಿಕೆಯಲ್ಲಿ ಉತ್ತಮ ಪ್ರಶಂಸೆಗೆ ಪಾತ್ರವಾಯಿತು. ಅಲ್ಲದೇ, ನೀರಿನ ಬವಣೆಯನ್ನು ಎದುರಿಸುತ್ತಿರುವ ಇತರ ದೊಡ್ಡ ನಗರಗಳಿಗೆ “ಬೆಂಗಳೂರು ಮಾದರಿ” ಯನ್ನು ಅನುಷ್ಠಾನಗೊಳಿಸುವಂತೆಯೂ ಸಲಹೆ ನೀಡಲಾಯಿತು.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವ ಹಾಗೂ ಮಾರ್ಗದರ್ಶನದ ಯೋಜನೆಗಳಿಗೆ ರಾಷ್ಟ್ರೀಯ ಮನ್ನಣೆ
ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಬೆಂಗಳೂರು ಜಲಮಂಡಳಿ ಅಳವಡಿಸಿಕೊಂಡ ಸುಸ್ಥಿರ ಹಾಗೂ ಪರಿಸರ ಸ್ನೇಹಿ ಯೋಜನೆಗಳು ವಿಶ್ವದ ಗಮನ ಸೆಳೆದಿವೆ. ಇದನ್ನ ಗುರುತಿಸಿರುವ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ಈ ಬಾರಿ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಗೆ 2024 ನೇ ಸಾಲಿನ ಪ್ರತಿಷ್ಠಿತ ಐಜಿಬಿಸಿ ಗ್ರೀನ್ ಪ್ರಾಜೇಕ್ಟ್ ವಿಶೇಷ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಈ ಮೂಲಕ ಬಿಡಬ್ಲೂಎಸ್ಎಸ್ಬಿಯನ್ನು ಪರಿಸರ ಸ್ನೇಹಿ ಹಾಗೂ ಸುಸ್ಥಿರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಉತ್ತಮ ಮನ್ನಣೆ ದೊರೆತಂತಾಗಿದೆ. ಸರಕಾರಿ ಸಂಸ್ಥೆಗಳು ಇನ್ನಷ್ಟು ದಕ್ಷವಾಗಿ ಕಾರ್ಯನಿರ್ವಹಿಸಲು ಸಿಐಐ ಸೇರಿದಂತೆ ಖಾಸಗಿ ಸಂಸ್ಥೆಗಳ ಪಾಲುದಾರಿಕೆ ಬಹಳ ಮುಖ್ಯವಾಗಿದೆ. ಮಾನ್ಯ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ಬ್ರಾಂಡ್ ಬೆಂಗಳೂರು ಕನಸನ್ನ ನನಸು ಮಾಡುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ಇಚ್ಚಾಶಕ್ತಿಯಿಂದ ಕಾರ್ಯ ನಿರ್ವಹಿಸುತ್ತಿದೆ. ಅವರ ನೇತೃತ್ವದಲ್ಲಿ ಬೆಂಗಳೂರು ಜಲಮಂಡಳಿ ಇನ್ನಷ್ಟು ಸುಸ್ಥಿರ ಯೋಜನೆಗಳನ್ನ ಅಳವಡಿಸಿಕೊಳ್ಳಲಿದೆ ಎಂದು ಹೇಳಿದರು.