ಬೆಂಗಳೂರು: ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ ಖಾಲಿ ಸ್ಥಳಗಳಲ್ಲಿ ಕಸ ಬಿಸಾಡುವುದನ್ನು ತಡೆಗಟ್ಟಲುಸ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ ಇಂದು ಹೆಸರಘಟ್ಟ ಮುಖ್ಯ ರಸ್ತೆ ಸಪ್ತಗಿರಿ ಮೆಡಿಕಲ್ ಕಾಲೇಜಿನಿಂದ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ರಸ್ತೆ ಬದಿ, ಖಾಲಿ ಸ್ಥಳಗಳಲ್ಲಿ ಕಸ ಬಿಸಾಡಿ ಬ್ಲಾಕ್ ಸ್ಪಾಟ್ ಗಳು ನಿರ್ಮಾಣವಾಗತ್ತವೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜಿನ ಎದುರುಗಡೆ ಇರುವ ಅಡ್ಡಮೋರಿ (ಕಲ್ವರ್ಟ್)ಯ ಬಳಿ ರಸ್ತೆ ಕಿರಿದಾಗಿದ್ದು, ರಸ್ತೆಯನ್ನು 7.5 ಮೀಟರ್ ಗೆ ಅಗಲಗೊಳಿಸಲು ಸೂಚಿಸಿದರು. ಹೆಸರಘಟ್ಟ ಮುಖ್ಯ ರಸ್ತೆ ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜಿನ ಬಳಿ ರಸ್ತೆ ಅಗಲೀಕರಣ ಕಾರ್ಯ ಪ್ರಕ್ರಿಯೆಲ್ಲಿದ್ದು, ಅಗಲೀಕರಣಕ್ಕಾಗಿ ಪಡೆದಿರುವ ಜಾಗವನ್ನು ಕೂಡಲೆ ಪಾಲಿಕೆಗೆ ವಶಪಡಿಸಿಕೊಳ್ಳಲು ಸೂಚಿಸಿದರು.
*ಕಿರ್ಲೋಸ್ಕರ್ ಜಂಕ್ಷನ್ ಅಭಿವೃದ್ಧಿಪಡಿಸಿ:*
ಸಹೆಸರುಘಟ್ಟ ರಸ್ತೆ ಕಿರ್ಲೋಸ್ಕರ್ ಜಂಕ್ಷನ್ ನಲ್ಲಿ ವಾಹನಗಳು ಸರಾಗವಾಗಿ ಸಂಚರಿಸುವ ಸಂಬಂಧ ಅಡೆತಡೆಗಳನ್ನು ನಿವಾರಿಸಿ ಜಂಕ್ಷನ್ ಅಭಿವೃಧ್ಧಿಗೊಳಿಸಬೇಕು. ಜಂಕ್ಷನ್ ಬಳಿಯಿರುವ ಕೃಷ್ಣ ಭವನ ಹೋಟೆಲ್ ಪಾದಚಾರಿ ಮಾರ್ಗ ಒತ್ತುವರಿ ಮಾಡಿದ್ದು, ಅದನ್ನು ಕೂಡಲೇ ತೆರವುಗೊಳಿಸಲು ಸೂಚಿಸಿದರು.
*ಹೊಸದಾಗಿ ಸಸಿಗಳನ್ನು ನೆಡಿ:*
ಕಿರ್ಲೋಸ್ಕರ್ ಲೇಔಟ್ ನ ರಸ್ತೆಗಳಲ್ಲಿ ತುಂಬಾ ಕೆಳಭಾಗದಲ್ಲಿ ವಾಹನಗಳಿಗೆ ತಾಗುವ ರೀತಿಯಲ್ಲಿ ಇರುವ ಮರಗಳ ರೆಂಬೆ-ಕೊಂಬೆಗಳನ್ನು ತೆರವುಗೊಳಿಸಬೇಕು. ಜೊತೆಗೆ ಅಪಾಯಕಾರಿಯಾದ ಮತ್ತು ಒಣಗಿರುವ ಮರಗಳನ್ನು ತೆರವುಗೊಳಿಸಿ ಹೊಸದಾಗಿ ಸಸಿಗಳನ್ನು ನೆಡಲು ಕ್ರಮ ವಹಿಸಲು ಸೂಚಿಸಿದರು.
*ಅಗೆದಿರುವ ರಸ್ತೆಗಳನ್ನು ದುರಸ್ತಿಪಡಿಸಿ:*
ನೇವಿ ಬಡಾವಣೆಯ ಕೆಲ ರಸ್ತೆಗಳಲ್ಲಿ ಜಲಮಂಡಳಿ ವತಿಯಿಂದ ಅಗೆದಿದ್ದು, ಅದನ್ನು ದುರಸ್ತಿಗೊಳಿಸದೆ ಹಾಗೆಯೇ ಬಿಟ್ಟಿರುವುದನ್ನು ಗಮನಿಸಿ, ಹಾಳಾಗಿರುವ ರಸ್ತೆಯ ಭಾಗವನ್ನು ಸರಿಪಡಿಸುವಂತೆ ಸೂಚಿಸಿದರು.
*ಪುನರ್ ಬಳಕೆ ಮಾಡಿ:*
ರಸ್ತೆ ಬದಿ ಸೋಫಾ, ಕುರ್ಚಿ, ಪೀಠೋಪಕರಣಗಳು, ಬಟ್ಟೆ, ದಿಂಬು, ಹಾಸಿಗೆ, ಶೌಚಾಲಯದ ಟೈಲ್ಸ್, ಕಮೋಡ್ ಗಳು ಸೇರಿದಂತೆ ಇನ್ನಿತರೆ ವಸ್ತುಗಳನ್ನು ಬಿಸಾಡಿದ್ದು, ಅದನ್ನು ಒಣತ್ಯಾಜ್ಯ ಸಂಗ್ರಹಣಾ ಘಟಕದಲ್ಲಿ ಪುನರ್ ಬಳಕೆ ಮಾಡಲು ವ್ಯವಸ್ಥೆ ಮಾಡಲು ಸೂಚಿಸಿದರು. ಜೊತೆಗೆ ಇನ್ನು ಮುಂದೆ ರಸ್ತೆ ಬದಿ ಬಿಸಾಡದಂತೆ ಸಾರ್ವಜನಿಕರೇ ಸ್ವತಃ ಘಟಕಕ್ಕೆ ತಂದುಕೊಡುವ ವ್ಯವಸ್ಥೆ ನಿರ್ಮಿಸಲು ಹಾಗೂ ಆಸಕ್ತ ಹಿರಿಯ ನಾಗರೀಕರು ಈ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಅನುವು ಮಾಡುವಂತೆ ಸೂಚಿಸಿದರು.
*ಹೊಸದಾಗಿ ಆರ್.ಸಿ.ಸಿ ಗೋಡೆ ನಿರ್ಮಿಸಿ:*
ಚೊಕ್ಕಸಂದ್ರ ವಾರ್ಡ್ ನಲ್ಲಿರುವ ಕಚ್ಚಾ ನೀರುಗಾಲುವೆಗಳನ್ನು ಆರ್.ಸಿ.ಸಿ ಗೋಡೆ ನಿರ್ಮಿಸಿ ಅಭಿವೃಧ್ಧಿಗೊಳಿಸಬೇಕು. ಈ ಸಂಬಂಧ ಮೂಲ ಗ್ರಾಮ ನಕ್ಷೆ/ಸರ್ವೇ ದಾಖಲೆಗಳಲ್ಲಿರುವ ಅಲೈನ್ ಮೆಂಟ್ ನಂತೆ ಹಾಗೂ ಅಳತೆಗಳಂತೆ ನೀರುಗಾಲುವೆ ನಿರ್ಮಿಸಲು ಸೂಚಿಸಿದರು. ಅದಲ್ಲದೆ ನೀರುಗಾಲುವೆಯಲ್ಲಿ ಹೋಳೆತ್ತಿ ಸ್ವಚ್ಛವಾಗಿರುವಂತೆ ನೋಡಿಕೊಳ್ಳಲು ಸೂಚಿಸರು.
*2.5 ಕಿ.ಮೀ ಪರಿಶೀಲನೆ:*
ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ ಬೆಳಗ್ಗೆ 7.00 ಗಂಟೆಯಿಂದ ಹೆಸರಘಟ್ಟ ಮುಖ್ಯ ರಸ್ತೆ ಸಪ್ತಗಿರಿ ಮೆಡಿಕಲ್ ಕಾಲೇಜಿನಿಂದ ತುಮಕೂರು ರಸ್ತೆ ಕಡೆಗೆ, ಕಿರ್ಲೋಸ್ಕರ್ ಲೇಔಟ್, ನೇವಿ ಲೇಔಟ್ ವರೆಗೆ 2.5 ಕಿ.ಮೀ ರಷ್ಟು ನಡಿಗೆಯ ಮೂಲಕ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.
ಈ ವೇಳೆ ವಲಯ ಆಯುಕ್ತರಾದ ನವೀನ್ ಕುಮಾರ್ ರಾಜು, ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.