ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಂಚಾರ, ಸುರಕ್ಷತೆ ಮತ್ತು ಮೂಲಭೂತ ಸೌಕರ್ಯಗಳನ್ನು ಉತ್ತಮಗೊಳಿಸುವ ಉದ್ದೇಶದಿಂದ ಗುಂಡಿ ಮುಕ್ತ ರಸ್ತೆ, ಬ್ಲಾಕ್ ಸ್ಪಾಟ್ ರಹಿತ ಮತ್ತು ಒತ್ತುವರಿ ಮುಕ್ತ ಪಾದಚಾರಿ ಮಾರ್ಗ ನಿರ್ಮಾಣಕ್ಕಾಗಿ ತ್ವರಿತ ಕ್ರಮ ಕೈಗೊಳ್ಳುವಂತೆ *ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ರಾಜೇಂದ್ರ ಚೋಳನ್ ಪಿ* ರವರು ಸೂಚನೆ ನೀಡಿದರು.
ಬೆಂಗಳೂರು ಕೇಂದ್ರ ನಗರ ಪಾಲಿಕೆ ಕಛೇರಿಗೆ ಇಂದು ಭೇಟಿ ನೀಡಿ ಅಭಿಯಂತರರು ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಯಾವುದೇ ಅನಾಹುತಗಳು ಉಂಟಾಗದಂತೆ ಮುಂಜಾಗ್ರತಾ ಕ್ರಮ ವಹಿಸಲು, ರಸ್ತೆ ಗುಂಡಿಗಳು ಮತ್ತು ಇನ್ನಿತರೆ ಕಾಮಗಾರಿ ವಿಭಾಗಕ್ಕೆ ಸಂಬಂಧಿಸಿದ ವಿಷಯಗಳ ಕುರಿತಂತೆ ಸೂಕ್ತ ಕ್ರಮ ವಹಿಸಲು ಸೂಚನೆ ನೀಡಿದರು.
*ತ್ವರಿತಗತಿಯಲ್ಲಿ ರಸ್ತೆ ಗುಂಡಿ ಮುಚ್ಚಲು ಸೂಚನೆ:*
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ವಿಭಾಗಕ್ಕೂ ಪ್ರತ್ಯೇಕ ಗುತ್ತಿಗೆದಾರರನ್ನು ನೇಮಿಸುವಂತೆ ಸೂಚನೆ ನೀಡಿ, ಪ್ರಮುಖ ರಸ್ತೆಗಳಲ್ಲಿನ ರಸ್ತೆ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಲು ಸೂಚನೆ ನೀಡಿದರು. ರಸ್ತೆ ಗುಂಡಿಗಳಿಗೆ ಸಂಬಂಧಿಸಿದಂತೆ ವೆಬ್ ಅಥವಾ ಅಪ್ಲಿಕೇಶನ್ ಗಳಲ್ಲಿ ಯಾವುದೇ ದೂರು ಬಾಕಿ ಇರದಂತೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
*ಪ್ರಮುಖ ರಸ್ತೆಗಳ ಆದ್ಯತೆಯ ಜೊತೆಗೆ ಮಾದರಿ ರಸ್ತೆಗಳಾಗಿ ಅಭಿವೃದ್ಧಿ:*
ಸಿಬಿಡಿ ರಸ್ತೆಗಳು, ಟೆಂಡರ್ ಶ್ಯೂರ್ ರಸ್ತೆ, ವೈಟ್ ಟಾಪಿಂಗ್ ರಸ್ತೆಗಳು ಮತ್ತು ಹೈ ಡೆನ್ಸಿಟಿ ಕಾರಿಡಾರ್ ಗಳನ್ನು ಗುರುತಿಸಿ, ಮಾದರಿ ರಸ್ತೆಗಳನ್ನಾಗಿ ಮಾಡುವಂತೆ ಕಾರ್ಯಪಾಲಕ ಅಭಿಯಂತರರಿಗೆ ಸೂಚನೆ ನೀಡಿದರು. *ಈ ರೀತಿ ಗುರುತಿಸಲ್ಪಡುವ ರಸ್ತೆಗಳಿಗೆ ರಸ್ತೆವಾರು ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ನೇಮಿಸಿ ಈ ರಸ್ತೆಗಳ ನಿರ್ವಹಣೆ ಜವಾಬ್ದಾರಿಯನ್ನು ವಹಿಸಲು ಸೂಚಿಸಲಾಯಿತು.*
ಮುಂದುವರೆದಂತೆ, ಮೆಟ್ರೋ ಪಿಲ್ಲರ್ ಗಳ ಸೌಂದರೀಕರಣ, ರಸ್ತೆ ಇಕ್ಕೆಲಗಳ ಸೌಂದರೀಕರಣಕ್ಕಾಗಿ ಗಿಡಗಳನ್ನು ನೆಡುವಂತೆ, ಅಗತ್ಯ ಸ್ಥಳಗಳಲ್ಲಿ ಬೀದಿ ದೀಪಗಳನ್ನು ಅಳವಡಿಸುವಂತೆ ಹಾಗೂ ಅವುಗಳ ಸೂಕ್ತ ನಿರ್ವಹಣೆಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಯುಕ್ತರು ಸೂಚನೆ ನೀಡಿದರು.
*ಪಾದಚಾರಿ ಮಾರ್ಗ ಒತ್ತುವರಿ ತೆರವು ಹಾಗೂ ತೀವ್ರ ಸ್ವಚ್ಛತಾ ಅಭಿಯಾನ:*
ಪ್ರತಿ ವಾರ ಒಂದು ರಸ್ತೆ ಮಾರ್ಗವನ್ನು ಗುರುತಿಸಿ, ಪಾದಚಾರಿ ಮಾರ್ಗ ಒತ್ತುವರಿದಾರರಿಗೆ ಒಂದು ದಿನದ ಮುಂಚಿತವಾಗಿ ನೋಟಿಸ್ ನೀಡಿ ಎಚ್ಚರಿಸಿ, ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಹಾಗೂ ತೀವ್ರ ಸ್ವಚ್ಛತಾ ಅಭಿಯಾನ ನಡೆಸಲು ಆಯುಕ್ತರು ಸೂಚನೆ ನೀಡಿದರು.
ಕಾರ್ಯಾಚರಣೆಯ ವೇಳೆ ಏಕ ಬಳಕೆ ಪ್ಲಾಸ್ಟಿಕ್ ತಪಾಸಣೆ ಸೇರಿದಂತೆ ಇತರೆ ವಿಷಯಗಳಲ್ಲೂ ಗಮನ ಹರಿಸಿ, ಎಲ್ಲಾ ವಿಭಾಗಗಳ ಅಧಿಕಾರಿಗಳೂ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಆಯುಕ್ತರು ತಿಳಿಸಿದರು.
ಈ ವೇಳೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ಜಂಟಿ ಆಯುಕ್ತರಾದ ರಂಗನಾಥ್, ಮುಖ್ಯ ಅಭಿಯಂತರಾದ ಸುಗುಣ, ವಿಜಯಕುಮಾರ್ ಹರಿದಾಸ್, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು.