ಚಿಕ್ಕಬಳ್ಳಾಪುರ: ಬಯಲು ಸೀಮೆ ಭಾಗಕ್ಕೆ ಎತ್ತಿಹೊಳೆ ಯೋಜನೆ ಮೂಲಕ ಶಾಶ್ವತ ಕುಡಿಯುವ ನೀರು ಪೂರೈಸಲು ಬದ್ಧವಾಗಿದ್ದು, ರಾಜ್ಯ ಸರ್ಕಾರದ ಬಜೆಟ್ ಅನುದಾನ ಬಿಡುಗಡೆಯಾದ ನಂತರ ಈ ಯೋಜನೆಯ ಅನುಷ್ಠಾನ ಮತ್ತಷ್ಟು ಚುರುಕುಗೊಳ್ಳಲಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್. ಮುನಿಯಪ್ಪ, ಮಾಜಿ ಸಚಿವರು ಮತ್ತು ವಿಧಾನಪರಿಷತ್ ಸದಸ್ಯರಾದ ಎಂ.ಆರ್. ಸೀತಾರಾಂ, ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಾದ ಪ್ರದೀಪ್ ಈಶ್ವರ್ ಹಾಗೂ ಪಕ್ಷದ ಹಿರಿಯ ಮುಖಂಡರ ಸಮ್ಮುಖದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎತ್ತಿನ ಹೊಳೆ ಯೋಜನೆ ಜಾರಿಗೆ ನಮ್ಮ ಪಕ್ಷದ ಹಿರಿಯ ಮುಖಂಡರು ಈಗಾಗಲೇ ಚಾಲನೆ ನೀಡಿದ್ದು, ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು. ಈ ಭಾಗದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ವಿಶೇಷ ಮುತುವರ್ಜಿ ವಹಿಸಿ ಕೆಲಸ ಮಾಡುವುದಾಗಿ ಹೇಳಿದರು.
ಕ್ಷೇತ್ರದ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಆದ್ಯತೆ ಕೋಡಲಾಗುವುದು. ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಗೌರಿ ಬಿದನೂರು ತಾಲ್ಲೂಕುಗಳಲ್ಲಿ ಕೈಗಾರಿಕಾಭಿವೃದ್ಧಿ ತಮ್ಮ ಗುರಿಯಾಗಿದೆ. ಕ್ಷೇತ್ರದ ಜನತೆ ಉದ್ಯೋಗ ಅರಸಿ ಬೇರೆ ಭಾಗಗಳಿಗೆ ವಲಸೆ ಹೋಗದಂತೆ ತಡೆಯುವುದು ನಮ್ಮ ಪರಮ ಧ್ಯೇಯವಾಗಿದೆ ಎಂದರು.
ಚಿಕ್ಕಬಳ್ಳಾಪುರ ಪುಷ್ಪೋದ್ಯಮಕ್ಕೆ ಹೆಸರಾಗಿದ್ದು, ಈ ಭಾಗವನ್ನು ಪುಷ್ಪೋದ್ಯಮದ ರಾಜಧಾನಿ ಮಾಡುವ ಗುರಿ ಇದೆ. ಪುಷ್ಪ ಕೃಷಿಗೆ ಉತ್ತೇಜನ ನೀಡುವ ಜೊತೆಗೆ ಅಗತ್ಯ ಪ್ರಮಾಣದಲ್ಲಿ ಗೋದಾಮುಗಳನ್ನು ಸಹ ನಿರ್ಮಿಸಲಾಗುವುದು. ಚಿಕ್ಕಬಳ್ಳಾಪುರ ಭಾಗವನ್ನು ದೇಶದಲ್ಲಿಯೇ ನಂಬರ್ ಒನ್ ಮಾಡಲು ಶ್ರಮಿಸುವುದಾಗಿ ರಕ್ಷಾ ರಾಮಯ್ಯ ಹೇಳಿದರು.
ನಮ್ಮದು ರಾಜಕೀಯ ಕುಟುಂಬ ಅಲ್ಲ. ತಾತ ಕೂಡ ರಾಜಕೀಯ ಕ್ಷೇತ್ರದಲ್ಲಿರಲಿಲ್ಲ. ಜನರ ಸೇವೆಗಾಗಿ ನಾವು ಪ್ರತಿಕ್ಷಣ, ಪ್ರತಿದಿನ ಕೆಲಸ ಮಾಡುತ್ತೇವೆ. ಚಿಕ್ಕಬಳ್ಳಾಪುರ, ದೇವನಹಳ್ಳಿಯಲ್ಲಿ ನಮ್ಮ ಕುಟುಂಬದ ನೆಲೆಯಾಗಿದೆ. ಕೈವಾರ ತಾತಯ್ಯನ ಪರಂಪರೆಯನ್ನು ನಾವು ಹೊಂದಿದ್ದೇವೆ. ನಮ್ಮ ಕುಟುಂಬ, ಸಂಬಂಧಿಕರು ಹೆಚ್ಚಿನ ಪ್ರಮಾಣದಲ್ಲಿ ಈ ಭಾಗದಲ್ಲಿದ್ದಾರೆ. ಜನರ ಸೇವೆಯಿಂದ ನಮ್ಮ ಕುಟುಂಬ ಶ್ರೀಮಂತವಾಗಿದ್ದು, ವಾಸ್ತವವಾಗಿ ನಾವು ದೊಡ್ಡ ಶ್ರೀಮಂತರಲ್ಲ. ನಮ್ಮ ಕುಟುಂಬ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದು, ಕ್ಷೇತ್ರದಲ್ಲಿ ಈ ಪರಂಪರೆಯನ್ನು ಮುಂದುವರೆಸಲಾಗುವುದು. ಜಿಲ್ಲೆಯಲ್ಲಿ ಪ್ಲೋರೈಡ್ ನಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳಿದ್ದು, ಇದನ್ನು ಪರಿಹರಿಸಲಾಗುವುದು. ಈ ಭಾಗವನ್ನು ಮಧುಮೇಹ ಮುಕ್ತಗೊಳಿಸಲು ವಿಶೇಷ ಗಮನ ಹರಿಸುತ್ತೇನೆ. ಶಿಕ್ಷಣದಲ್ಲಿ ಮುಂಚೂಣಿಗೆ ತರುವುದು ತಮ್ಮ ಮಹತ್ವಾಕಾಂಕ್ಷೆಯಾಗಿದ್ದು, ಚಿಕ್ಕಬಳ್ಳಾಪುರವನ್ನು ಶೇಕಡ ನೂರರಷ್ಟು ಸಾಕ್ಷರತಾ ಪ್ರದೇಶವನ್ನಾಗಿ ಮಾಡುತ್ತೇನೆ ಎಂದರು.
ಕ್ಷೇತ್ರದಲ್ಲಿ ತಮ್ಮ ಪರವಾಗಿ ಕ್ಷೇತ್ರದಲ್ಲಿ ಹಿರಿಯ ಮುಖಂಡರು, ಸ್ವಾರ್ ಪ್ರಚಾರಕರು ಪ್ರಚಾರ ಮಾಡಲಿದ್ದಾರೆ. ವಾಸ್ತವವಾಗಿ ನಮ್ಮ ಪಕ್ಷದ ಶಾಸಕರು ನಮಗೆ ಸ್ಟಾರ್ ಪ್ರಚಾರಕರು. ಕಾರ್ಯಕರ್ತರು, ಮಹಿಳೆಯರು ಸಹ ನಮ್ಮ ತಾರಾ ಪ್ರಚಾರಕರಾಗಿದ್ದಾರೆ. ಪ್ರತಿಯೊಬ್ಬರೂ ನಮ್ಮ ಪರವಾಗಿ ಪ್ರಚಾರ ಮಾಡಲಿದ್ದಾರೆ. ಪ್ರತಿಯೊಬ್ಬರೂ ನನ್ನ ಗಲುವಿಗಾಗಿ ಶ್ರಮಿಸಲಿದ್ದಾರೆ. ರಾಜ್ಯದಲ್ಲಿ ಈ ಬಾರಿಯ ಚುನಾವಣೆಯಲ್ಲಿ 9 ಮಂದಿ ಯುವ ಸಮೂಹಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿದ್ದು, ಇದು ನಿಜಕ್ಕೂ ಉತ್ತಮ ಬೆಳವಣಿಗೆ. ತಮ್ಮನ್ನು ಈ ಬಾರಿಯ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಗೆಲ್ಲಿಸುತ್ತಾರೆ ಎಂಬ ಅದಮ್ಯ ವಿಶ್ವಾಸವಿದೆ. ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆ ಬಹುಮತ ದೊರೆಯಲಿದೆ. ಕ್ಷೇತ್ರದ ಹಿರಿಯರು. ಕಿರಿಯರು, ಎಲ್ಲರೂ ಪಕ್ಷದ ಪರವಾಗಿ ಮತ ಚಲಾಯಿಸಲಿದ್ದಾರೆ. ಎಲ್ಲಾ ಕಡೆಗಳಿಂದ ತಮಗೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ರಾಜ್ಯ ಮತ್ತು ದೇಶದಲ್ಲಿ ಶಾಂತಿ ನೆಮ್ಮದಿ ದೊರೆಯಲಿದೆ. ಕಾಂಗ್ರೆಸ್ ಬಂದ ನಂತರ ಚಿಕ್ಕಬಳ್ಳಾಪುರದಲ್ಲಿ ದೌರ್ಜನ್ಯ ಪ್ರಕರಗಳು ನಡೆದಿಲ್ಲ. ಇದು ಕಾಂಗ್ರೆಸ್ ಆಡಳಿತ ವೈಖರಿಗೆ ಸಾಕ್ಷಿಯಾಗಿದೆ. ದೇಶದಲ್ಲಿ ಸಂವಿಧಾನ ರಕ್ಷಿಸುವುದು ನಮ್ಮ ಗುರಿಯಾಗಿದೆ. ಜನರಿಗೆ ಸರ್ಕಾರದ ಗ್ಯಾರೆಂಟಿ ಯೋಜನೆಗಳು ಜನ ಸಾಮಾನ್ಯರನ್ನು ತಲುಪುತ್ತಿವೆ. ಇದು ರಕ್ಷಾ ರಾಮಯ್ಯ ಮತ್ತು ಸುಧಾಕರ್ ಅವರ ನಡುವಿನ ಸ್ಪರ್ಧೆ. ಯುವ ಸಮೂಹಕ್ಕೆ ಆದ್ಯತೆ ನೀಡಿ, ಯುವ ಜನಾಂಗ ಮುಂದೆ ಬಂದಲ್ಲಿ ಹಿಂದಿನ ಗತವೈಭವವನ್ನು ಮುಂದುವರೆಸಲು ಅವಕಾಶ ದೊರೆಯಲಿದೆ. ಚಿಕ್ಕಬಳ್ಳಾಪುರದ ಜನ ಉತ್ತಮ ಜನರನ್ನು ಆಯ್ಕೆ ಮಾಡಲಿದ್ದಾರೆ. ಜಾತಿ ನೋಡಿ ಮನ್ನಣೆ ನೀಡುವುದಿಲ್ಲ ಎಂಬ ನಂಬಿಕೆ ತಮಗಿದೆ ಎಂದರು.
ಮಾಜಿ ಶಾಸಕ ಶಿವಶಂಕರ್ ರೆಡ್ಡಿ ಅವರು ತಮಗೆ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ತಮಗೆ ರಾಜಕೀಯ ಮಾರ್ಗದರ್ಶಕರು, ಕ್ಷೇತ್ರದಲ್ಲಿ ನೂರಕ್ಕೆ ನೂರರಷ್ಟು ಅಸಮಾಧಾನವಿಲ್ಲ. ಶಿವಶಂಕರ ರೆಡ್ಡಿ ಅವರೂ ಸಹ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ರಕ್ಷಾ ರಾಮಯ್ಯ ಪ್ರತಿಕ್ರಿಯೆ ನೀಡಿದರು.
ಕೆ.ಎಚ್. ಮುನಿಯಪ್ಪ ಮಾತನಾಡಿ, ಅವರ ತಾತನ ಕಾಲದಿಂದಲೂ ಕಾಂಗ್ರೆ ಪಕ್ಷದ ಪರವಾಗಿ ಇವರ ಕುಟುಂಬ ಕೆಲಸ ಮಾಡುತ್ತಿದೆ. ಯುವಕನಿಗೆ ಬಾರಿ ಕ್ಷೇತ್ರದ ಜನ ಆಶೀರ್ವಾದ ಮಾಡಬೇಕು. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು. ಕಾಂಗ್ರೆಸ್ ತತ್ವ ಸಿದ್ಧಾಂತ ಒಪ್ಪಿ ಪಕ್ಷ ಸೇರುವವರನ್ನು ನಾವು ಸ್ವಾಗತಿಸುತ್ತೇವೆ. ಕೆ.ಸಿ. ವ್ಯಾಲಿ ಯೋಜನೆಯಡಿ ಬಯಲು ಸೀಮೆಯ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಗಳಿಗೆ ಮೂರನೇ ಹಂತದಲ್ಲಿ ಶುದ್ದೀಕರಿಸಿ ಕೆರೆಗಳಿಗೆ ಹರಿಸುತ್ತೇವೆ ಎಂದರು.
ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ನಮ್ಮ ಅಭ್ಯರ್ಥಿ ಮೂರು ಲಕ್ಷಕ್ಕಿಂತ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಅವರ ಕುಟುಂಬ ಆರೋಗ್ಯ ಮತ್ತು ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿದೆ. ತಮ್ಮ ಸಹೋದರನನ್ನು ಗೆಲ್ಲಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ನಾಳೆ ಪಕ್ಷದ ಕಚೇರಿಯಲ್ಲಿ ಹಲವು ಮಂದಿ ಪ್ರಮುಖರು ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದರು.
ವಿಧಾನಪರಿಷತ್ ಸದಸ್ಯರಾದ ಎಂ.ಆರ್. ಸೀತಾರಾಂ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನರ ಸಂಕಟವನ್ನು ತಗ್ಗಿಸಿದ್ದು, ಜನಪರ ಕಾರ್ಯಕ್ರಮಗಳಿಂದ ಅನುಕೂಲವಾಗುತ್ತಿದೆ. ಜನರ ಜೀವನ ಮಟ್ಟ ಸುಧಾರಿಸುತ್ತಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರಿಗೆ ಹೆಚ್ಚಿನ ಜನ ಬೆಂಬಲ ದೊರೆಯುತ್ತಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾಗಿ ಪ್ರಬಲವಾದ ಅಲೆ ಇದೆ ಎಂದರು.
ಶಿವಶಂಕರ್ ರೆಡ್ಡಿ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಇದು ಸಹಜವಾದ ಬೆಳವಣಿಗೆ. ಆದರೆ ರಾಹುಲ್ ಗಾಂಧಿ ಅವರು ಈ ಬಾರಿ ಯುವ ಸಮೂಹಕ್ಕೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಿದ್ದು, ಅದರಂತೆ ಟಿಕೆಟ್ ದೊರೆತಿದೆ. ಇದು ಕಾಂಗ್ರೆಸ್ ಪಕ್ಷದ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಎಂದು ಹೇಳಿದರು.
ಇನ್ನೂ ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕ ಶಿವಾನಂದ್, ಎಸ್.ಎಂ. ಮುನಿಯಪ್ಪ, ಕಾಂಗ್ರೆಸ್ ಮುಖಂಡ ನಂದಿ ಆಂಜಿನಪ್ಪ, ಯಲುವಳ್ಳಿ ರಮೇಶ್, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಕೇಶವರೆಡ್ಡಿ, ಪಕ್ಷದ ಮುಖಂಡ ಕೇಶವ ರಾಜಣ್ಣ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಪ್ರಾಮಾಣಿಕವಾಗಿ ರಕ್ಷಾ ರಾಮಯ್ಯ ಅವರನ್ನು ಗೆಲ್ಲಿಸಲು ಒತ್ತು ನೀಡುತ್ತೇವೆ ಎಂದು ಹೇಳಿದರು.
ಏಪ್ರಿಲ್ 3 ರಂದು ತಾವು ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತಿದ್ದೇನೆ. ಏಪ್ರಿಲ್ 3 ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದು ಬೆಳಗ್ಗೆ 9 ರಿಂದ 11 ರವರೆಗೂ ಬೃಹತ್ ರ್ಯಾಲಿ ಶುರು ಮಾಡಿ ಪಕ್ಷದ ಉನ್ನತ ನಾಯಕರ ನಿರ್ದೇಶನದಂತೆ ರಾಹುಕಾಲ ಮುಗಿದ ಬಳಿಕ ನಾಮಪತ್ರ ಸಲ್ಲಿಸಲಾಗುವುದು. ನಾಮಪತ್ರ ಸಲ್ಲಿಕೆ ವೇಳೆ ರಾಜ್ಯದ ಪ್ರಮುಖ ನಾಯಕರು ಕ್ಷೇತ್ರಕ್ಕೆ ಬಂದು ನನಗೆ ಸಾಥ್ ನೀಡಲಿದ್ದಾರೆ ಎಂದು ಅಭ್ಯರ್ಥಿ ರಕ್ಷಾರಾಮಯ್ಯ ತಿಳಿಸಿದರು.