ಬೆಂಗಳೂರು: ನಾಡಿನ ಸಂತಶ್ರೇಷ್ಟರ ಸಾನ್ನಿಧ್ಯದಲ್ಲಿ ಮಾಜಿ ಪ್ರಧಾನಮಂತ್ರಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೇಗೌಡ ಅವರಿಗೆ ಶ್ರೀ ಗಂಗ ಸಾಮ್ರಾಟ ಶ್ರಿಪುರುಷ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು.
ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದ ನಾಥ ಮಹಾಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ, ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಶ್ರೀ ನಂಜಾವಧೂತ ಮಹಾಸ್ವಾಮೀಜಿ, ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ, ಆದಿಚುಂಚನಗಿರಿ ವಿಜಯನಗರ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ಶ್ರೀ ನಿಶ್ಚಲಾನಂದ ಸ್ವಾಮೀಜಿ ಅವರುಗಳೆಲ್ಲರೂ ದೇವೇಗೌಡರಿಗೆ ಗಂಗ ಸಾಮ್ರಾಟ ಶ್ರಿಪುರುಷ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿದರು.
ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು, ದೇವೆಗೌಡರ ಕುಟುಂಬ ಸದಸ್ಯರು, ಸಾರ್ವಜನಿಕರು ಈ ಅರ್ಥಪೂರ್ಣ ಸಮಾರಂಭಕ್ಕೆ ಸಾಕ್ಷಿಯಾದರು.
ಹೆಚ್.ಡಿ.ದೇವೇಗೌಡ ಅವರಿಗೆ ಶ್ರೀ ಗಂಗ ಸಾಮ್ರಾಟ ಶ್ರಿಪುರುಷ ಪ್ರಶಸ್ತಿಯನ್ನು ಪ್ರದಾನ
ಪ್ರಶಸ್ತಿ ಸ್ವೀಕರಿಸಿ ತೀವ್ರ ಭಾವೋದ್ವೇಗಕ್ಕೆ ಒಳಗಾದ ದೇವೇಗೌಡರು, ತಮಗೆ ನೀಡಲಾದ ಈ ಪ್ರಶಸ್ತಿಗೆ ಸಮಸ್ತ ಕನ್ನಡಿಗರ ಪ್ರೀತಿ, ವಿಶ್ವಾಸ ಕಾರಣ ಹಾಗೂ ನನ್ನ ಬದುಕಿನುದ್ದಕ್ಕೂ ನನ್ನ ಪಾಲಿನ ಶಕ್ತಿಯಾಗಿ ಉಳಿದಿರುವ ನನ್ನ ಶ್ರೀಮತಿ ಚನ್ನಮ್ಮ ಅವರಿಗೆ ನನ್ನ ಯಶಸ್ಸಿನ ಶ್ರೇಯಸ್ಸು ಸಲ್ಲಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತೀವ್ರ ಗದ್ಗದಿತರಾದ ಮಾಜಿ ಪ್ರಧಾನಿಗಳು, ತಮ್ಮ ಪತ್ನಿ ಹಾಗೂ ತಂದೆತಾಯಿ ಅವರನ್ನು ಸ್ಮರಿಸುವಾಗ ತಮ್ಮ ಕಣ್ಣಾಲಿಗಳನ್ನು ತುಂಬಿಕೊಂಡರು. ಕೆಲಕಾಲ ಯಾವ ಮಾತನ್ನೂ ಆಡದೆ ಮೌನಕ್ಕೆ ಶರಣಾದರು.ಶ್ರೀಮತಿ ಚನ್ನಮ್ಮ ಅವರು ಎಲ್ಲಾ ಹಂತದಲ್ಲಿ ನನ್ನ ಜೊತೆ ನಿಂತಿದ್ದಾರೆ. ಅನೇಕ ಕಷ್ಟಗಳ ಜೊತೆಗೆ ನನ್ನ ಗೌರವ ಉಳಿಸಿದ್ದಾರೆ. ಅವರ ಕೊಡುಗೆ ನೆನೆಸಿಕೊಳ್ಳುತ್ತೇನೆ ಎಂದು ಪತ್ನಿಯನ್ನು ನೆನೆದು ಕಣ್ಣೀರು ಹಾಕಿದ ದೇವೇಗೌಡರು, ಎಲ್ಲ ಮುಂದೆ ನಮ್ಮನ್ನು ನಿಲ್ಲುವಂತೆ ಶಕ್ತಿ ತಂದುಕೊಟ್ಟವರು ಶ್ರೀ ಬಾಲಗಂಗಾಧರ ಸ್ವಾಮೀಜಿ ಅವರು ಎಂದು ಗದ್ಗದಿತರಾದರು.
ನಾನು ಮುಖ್ಯಮಂತ್ರಿ ಆಗಿದ್ದಾಗ ಎಲ್ಲಾ ಕನ್ನಡಿಗರು ಸೇರಿ ಹದಿನಾರು ಲೋಕಸಭೆ ಕ್ಷೇತ್ರಗಳನ್ನು ಗೆಲ್ಲಿಸಿಕೊಟ್ಟಿದ್ದರು. ಅದರ ಪರಿಣಾಮವಾಗಿ ನಾನು ಪ್ರಧಾನಿಯಾಗಲು ಸಾಧ್ಯವಾಯಿತು ಎಂದ ದೇವೇಗೌಡರು; ಇದು ನನ್ನ ಜೀವನದ ಸಂದ್ಯಾಕಾಲ. ನಾನು ಇನ್ನೇನು ಮಾಡಲು ಸಾಧ್ಯ. ಆದರೂ ರಾಷ್ಟ್ರದ, ನಾಡಿನ ಜನರಿಗೆ ಏನಾದರೂ ಕಿಂಚಿತ್ತಾದರೂ ಅಳಿಲು ಸೇವೆ ಮಾಡಬೇಕು ಎನ್ನುವುದು ನನ್ನ ಮಹದಾಸೆ. ಅದಕ್ಕಾಗಿ ಗೋದಾವರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ನ್ಯಾಯ ಮಾಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆ ಹಾಗೂ ಮಾವಿಗೆ ಬೆಂಬಲ ಬೆಲೆ ಕೊಡಬೇಕು ಎಂದು ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ಪತ್ರ ಬರೆದಿದ್ದೇನೆ ಎಂದು ಅವರು ಹೇಳಿದರು.
ನಾಡಿನ ಸಂತಶ್ರೇಷ್ಟರ ಸಾನ್ನಿಧ್ಯದಲ್ಲಿ ಮಾಜಿ ಪ್ರಧಾನಮಂತ್ರಿಗಳಿಗೆ ಗೌರವ
ನನಗೆ 93ನೇ ವಯಸ್ಸಿನಲ್ಲಿ, ಜೀವನದ ಕೊನೆ ದಿನಗಳಲ್ಲಿ ಈ ಹಂತದಲ್ಲಿ ನಿಮ್ಮ ಆಶೀರ್ವಾದ ನನಗೆ ಬಹಳ ಸಮಾಧಾನ ತಂದಿದೆ. 65 ವರ್ಷಗಳ ರಾಜಕಾರಣದಲ್ಲಿ ನನ್ನನ್ನು ಎಲ್ಲಾ ಸಮಾಜದವರು ಬೆಳೆಸಿದ್ದಾರೆ. ಯಾವುದೇ ಒಂದು ಸಮಾಜ ಅಲ್ಲ, ಎಲ್ಲರೂ ನನ್ನನ್ನು ಎತ್ತಿ ಆಡಿಸಿಕೊಂಡಿ ಬಂದಿದ್ದಾರೆ. ಪ್ರಧಾನಿಯಾಗಿ ರೈತನ ಮಗ ಕೆಲಸ ಮಾಡಿದ್ದಾನೆ. ನಾಲ್ಕು ಎಕರೆ ಜಮೀನು ಇಟ್ಟುಕೊಂಡಿದ್ದ ರೈತನ ಮಗ ಆ ಸ್ಥಾನಕ್ಕೆ ಹೋಗಬೇಕಾದರೆ ಈ ರಾಜ್ಯದ ಎಲ್ಲ ಸಮಾಜಗಳು ಸಹಾಯ ಮಾಡಿದ್ದಾರೆ. ಇದನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಮಾಜಿ ಪ್ರಧಾನಿಗಳು ಭಾವುಕರಾಗಿ ನುಡಿದರು.
ರಾಮಕೃಷ್ಣ ಹೆಗಡೆ ಅವರಿಗೆ ಒಮ್ಮೆ ಕಾಲಿಗೆ ನಮಸ್ಕಾರ ಮಾಡಿ, ಪಕ್ಷ ಉಳಿಸೋಣ. ನಡೆಯಿರಿ ಎಂದು ಹೇಳಿದ್ದೆ. ಆದರೆ ಅವರು, “ನೀನು ಶತ್ರುಗಳನ್ನು ಸೃಷ್ಟಿ ಮಾಡಿಕೊಳ್ತೀಯಾ ಎಂದರು. ನೀನು ಸತ್ಯ ಹೇಳ್ತೀಯಾ, ಅದರ ಜೊತೆಗ ನಗ್ನಸತ್ಯಗಳನ್ನ ಹೇಳ್ತೀಯಾ. ಅದಕ್ಕೆ ನಿನಗೆ ಹೆಚ್ಚು ಶತ್ರುಗಳು ಹುಟ್ಟಿಕೊಳ್ಳತ್ತಾರೆ” ಎಂದು ಹೇಳಿದ್ದರು. ಅವರ ಮಾತು ನನಗೆ ಚೆನ್ನಾಗಿ ನೆನಪಿದೆ. ಆದರೆ ಸತ್ಯಕ್ಕೆ ನಾನು ಯಾವತ್ತೂ ಬೆನ್ನು ತೋರಿಸಿದವನಲ್ಲ ಎಂದು ದೇವೇಗೌಡರು ಹಳೆಯ ರಾಜಕಾರಣವನ್ನು ನೆನಪು ಮಾಡಿಕೊಂಡರು.
*ರಾಜ್ಯದ ನೀರಾವರಿ ಸಂಕಷ್ಟ ಪರಿಹಾರ ನರೇಂದ್ರ ಮೋದಿ ಒಬ್ಬರಿಂದ ಮಾತ್ರ ಸಾಧ್ಯ:*
ಕರ್ನಾಟಕ ರಾಜ್ಯ ಎದುರಿಸುತ್ತಿರುವ ಜ್ವಲಂತ ನೀರಾವರಿ ಸಮಸ್ಯೆಗಳನ್ನು ಬಗೆಹರಿಸುವ ಶಕ್ತಿ ಇರುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತ್ರ ಎಂದು ಇದೇ ವೇಳೆ ಮಾಜಿ ಪ್ರಧಾನಿ ದೇವೇಗೌಡರು ಹೇಳಿದರು.
93ರ ಈ ಇಳಿ ವಯಸ್ಸಿನಲ್ಲಿ ನಾನು ಏನು ಮಾಡಬಲ್ಲೇ? ಆದರೆ ನಾನು ಒಂದು ಮಾತು ಹೇಳುತ್ತೇನೆ. ನಿನ್ನೆಎಷ್ಟೇ ಪ್ರಧಾನಿ ಅವರಿಗೆ ಪತ್ರ ಬರೆದಿದ್ದೇನೆ. ನರ್ಮದಾ ನದಿ ನೀರು ವಿಚಾರಕ್ಕೆ ಟ್ರಿಬ್ಯೂನಲ್ ಗೆ ಪತ್ರ ಬರೆದಿದ್ದಾರೆ. ನಾನು ಯಾರ ಬಗ್ಗೆಯೂ ಟೀಕೆ ಮಾಡಲ್ಲ. ಟ್ರಿಬ್ಯೂನಲ್ ಗೆ ಪತ್ರ ಬರೆದು ಕರ್ನಾಟಕದಲ್ಲಿ ನೀರಿನ ಸಮಸ್ಯೆ ಇಲ್ಲ ಅಂತ ಹೇಳಿದ್ದಾರೆ. ಅದಕ್ಕೆ ನಾನು ಪತ್ರ ಬರೆದಿದ್ದೇನೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ನನ್ನ ಜೊತೆಗೆ ಮಾತಾಡಿದರು. ಗೋದಾವರಿ ನದಿ ನೀರಿನಲ್ಲಿ ನಮಗೂ ಪಾಲು ಸಿಗಬೇಕು ಎಂದು ಅವರು ಒತ್ತಿ ಹೇಳಿದರು.
ನನ್ನ ನಾಡಿನ ಸಮಸ್ಯೆಗಳು ಪರಿಹಾರ ಕಾಣಬೇಕು. ನನ್ನ ಜನರು ತಲೆತಲಾಂತರದಿಂದ ಅನುಭವಿಸೋದನ್ನು ಈ ಆತ್ಮ ನೋಡುತ್ತದೆ. ನಾನು ನರಕದಲ್ಲಿರುತ್ತೇನೋ, ಸ್ವರ್ಗದಲ್ಲಿರುತ್ತೇನೋ ಗೊತ್ತಿಲ್ಲ. ಆದರೆ, ನನ್ನ ಆತ್ಮ ನೋಡುತ್ತಿರುತ್ತದೆ. ಹೀಗಾಗಿ ಪ್ರಧಾನಿಗಳಿಗೆ ಪತ್ರ ಬರೆದಿದ್ದೇನೆ. ಗೋದಾವರಿ ನೀರಿಗೆ, ಮಹದಾಯಿ ನೀರು ಯೋಜನೆ ಆಗಬೇಕು. ಚಳ್ಳಕೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರದಂತಹ ಬಯಲು ಪ್ರದೇಶಗಳಿಗೆ ನೀರು ಸಿಗಬೇಕು. ರಾಜ್ಯಸಭೆಯಲ್ಲಿ ನನ್ನ ಹೋರಾಟ ಇನ್ನೊಂದು ಕಾಲ ವರ್ಷ ಇರಬಹುದು. ಆದ್ದರಿಂದ ಎಲ್ಲರೂ ಇವತ್ತು ನನನ್ನು ಎತ್ತಿಕೊಂಡು ಬಂದು ಕೂರಿಸಿದ್ದಾರೆ ಎಂದು ಅವರು ಹೇಳಿದರು.
ನನ್ನ ಕಾಲಿಗೆ ನೋವು ಇರಬಹುದು, ಆದರೆ ತಲೆಗೆ ನೋವಿಲ್ಲ. ನಮ್ಮ ತಾಯಿ ಯಾವ ಎದೆ ಹಾಲು ಕುಡಿಸಿ ಸಾಕಿದ್ಲು ಗೊತ್ತಿಲ್ಲ. ನನ್ನ ತಾಯಿ ಈಶ್ವರನ ಭಕ್ತೆ, ಅವರ ಮಗ ನಾನು. ಮಾತೃ ದೇವೋಭವ, ಪಿತೃ ದೇವೋಭವ ಎನ್ನುತ್ತೇವೆ ಅಲ್ಲವೇ? ನನ್ನ ತಂದೆಯ ಮೊದಲ ಪತ್ನಿಗೆ ನಾಲ್ಕು ಮಕ್ಕಳು. ಅವರೆಲ್ಲರೂ ತೀರಿ ಹೋದರು. ಆಮೇಲೆ ನನ್ನ ದೊಡ್ಡಮ್ಮ ಕೂಡ ತೀರಿ ಹೋದರು. ನಾನು ಎರಡನೇ ಹೆಂಡತಿಯ ಮೊದಲನೇ ಮಗ. ನನಗೆ ಕಾಲು ನೋವು ಇರಬಹುದು. ಆದ್ರೆ ಪಾರ್ಲಿಮೆಂಟ್ ನಲ್ಲಿ ಹೋರಾಟ ಮಾಡುವ ಶಕ್ತಿ ಇದೆ. ಪ್ರಧಾನಮಂತ್ರಿಗಳನ್ನು ಒಪ್ಪಿಸುವ ಶಕ್ತಿಯಿದೆ ಎಂದು ದೇವೇಗೌಡರು ನುಡಿದರು.
ಈ ಸಂದರ್ಭದಲ್ಲಿ ಎಲ್ಲಾ ಸ್ವಾಮೀಜಿಗಳು ಆಶೀರ್ವಚನ ನೀಡಿ ದೇವೇಗೌಡರನ್ನು ಆಶೀರ್ವದಿಸಿದರು.ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಸುಪ್ರೀಂ ಕೋರ್ಟ್ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ, ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ, ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ದೇವೆಗೌಡರ ಕುಟುಂಬ ಸದಸ್ಯರು, ಅಸಂಖ್ಯಾತ ಅಭಿಮಾನಿಗಳು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.
*ಅಪರೂಪದ ಛಾಯಾಚಿತ್ರ ಪ್ರದರ್ಶನ*
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಈ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ದೇವೇಗೌಡರ ಅಪರೂಪದ ಛಾಯಾಚಿತ್ರಗಳ ಪ್ರದರ್ಶನವನ್ನು ಉದ್ಘಾಟಿಸಿದರು.
ದೇವೇಗೌಡರ ಜೀವಿತಾವಧಿಯ ಬಹುತೇಕ ಎಲ್ಲಾ ಚಿತ್ರಗಳ ಅಮೂಲ್ಯ ಸಂಗ್ರಹ ಅದಾಗಿತ್ತು. ಸಚಿವ ಕುಮಾರಸ್ವಾಮಿ ಅವರು ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ದೇವೇಗೌಡರು ತಮ್ಮ ಭಾಷಣದಲ್ಲಿ, ನಮ್ಮ ನಡುವಿನ ರೈತನ ಮಗ ಇಷ್ಟು ಎತ್ತರಕ್ಕೆ ಹೋಗಿದ್ದಾನೆ ಎನ್ನುವುದನ್ನು ಆ ಚಿತ್ರಗಳು ಹೇಳುತ್ತವೆ. ಈ ಸಂಸ್ಥೆಯ ಅನುಮತಿ ಪಡೆದು ಇನ್ನೊಂದೆರಡು ದಿನಗಳ ಕಾಲ ಪ್ರದರ್ಶನ ಮುಂದುವರಿಸಲು ಸಾಧ್ಯವೇ ಎಂದು ಮನವಿ ಮಾಡಿದರು.