ಬೆಂಗಳೂರು: ಹೂಡಿಕೆದಾರರ ನಿರೀಕ್ಷೆಗೆ ತಕ್ಕಂತೆ ಕ್ಷಿಪ್ರವಾಗಿ ಸ್ಪಂದಿಸುವ ಮೂಲಕ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹಾಗೂ ಕೆಐಎಡಿಬಿ ಅಧಿಕಾರಿಗಳು ಕರ್ನಾಟಕವನ್ನು ಕೈಗಾರಿಕಾ ಪ್ರಪಂಚದಲ್ಲಿ ಮತ್ತಷ್ಟು ಸುಭದ್ರವಾಗಿ ಮತ್ತು ಪುರೋಗಾಮಿಯಾಗಿ ಬೆಳೆಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಸಲಹೆ ನೀಡಿದ್ದಾರೆ.
ಎರಡೂ ಇಲಾಖೆಗಳ ಕಿರಿಯ ಶ್ರೇಣಿ ಮತ್ತು ಉನ್ನತಾಧಿಕಾರಿಗಳಿಗೆ ವಿಕಾಸಸೌಧದಲ್ಲಿ ಏರ್ಪಡಿಸಿದ್ದ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಾವೀಗ ಏಕಕಾಲದಲ್ಲಿ ಜಾಗತೀಕರಣ ಮತ್ತು ನೆರೆಹೊರೆಯ ರಾಜ್ಯಗಳ ಸ್ಪರ್ಧೆ ಎರಡನ್ನೂ ಎದುರಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ನಾವು ಹೂಡಿಕೆದಾರರು ನಮ್ಮ ರಾಜ್ಯವನ್ನು ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು. ಈ ಹೊಣೆಗಾರಿಕೆಯನ್ನು ನಿರ್ವಹಿಸುವ ಮೂಲಕ ರಾಜ್ಯದ ಉದ್ಯಮ ವಲಯದಲ್ಲಿ ಸುಗಮ ವಹಿವಾಟು ಸಂಸ್ಕೃತಿಯನ್ನು ರೂಪಿಸಬೇಕಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.
ರಾಜ್ಯದ ಅರ್ಥಿಕ ಪರಿಸ್ಥಿತಿ ಸುಭದ್ರವಾಗಿದೆ. ಹೀಗಾಗಿ ಹೂಡಿಕೆದಾರರಿಗೆ ಬೇರೆಬೇರೆ ಇಲಾಖೆಗಳಿಂದ ತ್ವರಿತವಾಗಿ ಅನುಮೋದನೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಹೂಡಿಕೆದಾರರು ವಿಳಂಬ ಗತಿಯನ್ನು ಸಹಿಸುವುದಿಲ್ಲ. ಸರಕಾರದ ನೀತಿಗಳು ಕೈಗಾರಿಕಾಸ್ನೇಹಿಯಾಗಿಯೇ ಇವೆ. ಅಧಿಕಾರಿಗಳು ಇವುಗಳ ಪ್ರಯೋಜನವನ್ನು ಉದ್ದಿಮೆದಾರರಿಗೆ ತಲುಪಿಸಬೇಕು. ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ಈ ಮೂಲಕ ಕಾಣಿಕೆ ಕೊಡಬೇಕು ಎಂದು ಪಾಟೀಲ ನುಡಿದಿದ್ದಾರೆ.
ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಮಹೇಶ್ ಉಪಸ್ಥಿತರಿದ್ದರು.