ಬೆಂಗಳೂರು:”ಆಂಬುಲೆನ್ಸ್ ಗಳ ಸುಗಮ ಸಂಚಾರಕ್ಕೆ ಟ್ರಾಫಿಕ್ ಸಿಗ್ನಲ್ ಗಳ ಜೊತೆ ವೈರ್ ಲೆಸ್ ಸಂಪರ್ಕ, ಋತುಸ್ರಾವ ಮಹಿಳೆಯರ ಅನುಕೂಲಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಪಿಂಕ್ ಬೂತ್ ಸ್ಥಾಪನೆ, ಸಮಾರಂಭಗಳಲ್ಲಿ ಬಳಸಿದ ಹೂವು ಮತ್ತು ಆಹಾರ ತ್ಯಾಜ್ಯಗಳ ಸಮರ್ಪಕ ವಿಲೇವಾರಿ ಸೇರಿ ಐಡಿಯಾಥಾನ್ ಸ್ಪರ್ಧೆಯ ಅತ್ಯುತ್ತಮ ಸಲಹೆಗಳನ್ನು ಜಾರಿ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಕಳೆದೊಂದು ತಿಂಗಳಿಂದ ನಡೆದ ಯುವ ನಾಯಕತ್ವ ಸಮ್ಮೇಳನ ಹಾಗೂ ಐಡಿಯಾಥಾನ್ ಸ್ಪರ್ಧೆಯ ಅಂತಿಮ ಸುತ್ತು ನಗರದಲ್ಲಿ ನಡೆಯಿತು. ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಶಿವಕುಮಾರ್, ಬ್ರಾಂಡ್ ಬೆಂಗಳೂರು ಯೋಜನೆ ಮೂಲಕ ಬೆಂಗಳೂರಿನ ಸಮಸ್ಯೆಗಳಿಗೆ ಶಾಲಾ ಮಕ್ಕಳು ಈ ಐಡಿಯಾಥಾನ್ ಸ್ಪರ್ಧೆ ಮೂಲಕ ಉತ್ತಮ ಸಲಹೆಗಳನ್ನು ನೀಡಿದ್ದಾರೆ. ದೇಶದ ಬೆಳವಣಿಗೆಗೆ ನಿಮ್ಮ ಆಲೋಚನೆ, ನಾಯಕತ್ವ ಗುಣ ಅತ್ಯಗತ್ಯ. ಕೇವಲ ರಾಜಕಾರಣಿಗಳು ಮಾತ್ರ ನಾಯಕರಲ್ಲ. ನಿಮ್ಮಲ್ಲೂ ನಾಯಕತ್ವ ಗುಣ ಇವೆ. ನೀವು ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಂಡರೂ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು.
ಇದು ಕೇವಲ ಆರಂಭ. ಶಾಲಾ ಮಟ್ಟದಲ್ಲಿ ಇಂತಹ ಸ್ಪರ್ಧೆ ಏರ್ಪಡಿಸಲು ಬಿಬಿಎಂಪಿ ಆಯುಕ್ತರಿಗೆ ಸಲಹೆ ನೀಡುತ್ತೇನೆ. ಹೆಚ್ಚು, ಹೆಚ್ಚು ಆಲೋಚನೆಗಳು ಬಂದಂತೆ ನಮ್ಮ ನಗರ ಹೆಚ್ಚು, ಹೆಚ್ಚು ಸುಧಾರಣೆ, ಅಭಿವೃದ್ಧಿ ಆಗುತ್ತದೆ.
ನಾನಿಲ್ಲಿ ಭಾಷಣ ಮಾಡುವುದಕ್ಕಿಂತ ಮಕ್ಕಳ ಆಲೋಚನೆ ಆಲಿಸಿ, ಅದನ್ನು ಜಾರಿಗೆ ತರಲು ಬಂದಿದ್ದೇನೆ. ಬೆಂಗಳೂರು ಯೋಜಿತ ನಗರವಲ್ಲ. ಈ ನಗರಕ್ಕೆ ದೂರದೃಷ್ಟಿ ಆಲೋಚನೆಗಳು, ನೀತಿಗಳು ಬಹಳ ಮುಖ್ಯ. ಸಂಚಾರ ದಟ್ಟಣೆ, ಕಸ ವಿಲೇವಾರಿ ಪ್ರಮುಖ ಸಮಸ್ಯೆಗಳಾಗಿವೆ. ಇವಕ್ಕೆ ಮಕ್ಕಳು ತಮ್ಮ ಆಲೋಚನೆಗಳ ಮೂಲಕ ಪರಿಹಾರ ನೀಡಲು ಮುಂದಾಗಿದ್ದಾರೆ.
ಬೆಂಗಳೂರಿನ ನಿಜವಾದ ಸಂಪತ್ತು, ಶಕ್ತಿ ಎಂದರೆ ಇಲ್ಲಿನ ಹವಾಮಾನ, ಸಂಸ್ಕೃತಿ ಹಾಗೂ ಮಾನವ ಸಂಪನ್ಮೂಲ. ಬೆಂಗಳೂರಿನ ಹಸಿರು ರಕ್ಷಣೆಗೆ ಸರ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶಾಲಾ ಮಕ್ಕಳಿಂದ ಗಿಡ ನೆಟ್ಟು, ಬೆಳೆಸುವ ಜವಾಬ್ದಾರಿ ನೀಡಲಾಗುವುದು. ಇದಕ್ಕಾಗಿ ಆಪ್ ಸಿದ್ಧಪಡಿಸಿದ್ದು ಮಕ್ಕಳು ತಮ್ಮ ಗಿಡದ ಬೆಳವಣಿಗೆ ಮಾಹಿತಿಯನ್ನು ಅಪ್ಲೋಡ್ ಮಾಡಬಹುದಾಗಿದೆ. ನಗರದ ಉದ್ಯಾನವನಗಳ ನಿರ್ವಹಣೆ ಜವಾಬ್ದಾರಿಯನ್ನು ಸ್ಥಳೀಯ ನಾಗರೀಕರಿಗೆ ವಹಿಸಲು ನಿರ್ಧರಿಸಿದ್ದೇವೆ.
ನಾವು ಹಲವು ಕ್ಷೇತ್ರಗಳಲ್ಲಿ ವಿಫಲವಾಗಿದ್ದೇವೆ. ಕಸ ವಿಲೇವಾರಿ ಜತೆ ಅನೇಕ ಮಾಫಿಯಾಗಳಿವೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. 54 ಲಕ್ಷ ವಾಹನಗಳು ನಿತ್ಯ ರಸ್ತೆಗಿಳಿಯುತ್ತವೆ. ಇದಕ್ಕೆ ತಕ್ಕಂತೆ ರಸ್ತೆ ಅಗಲೀಕರಣ ಸದ್ಯದ ಸ್ಥಿತಿಯಲ್ಲಿ ಅಸಾಧ್ಯ. ಅನೇಕರ ಜತೆ ಚರ್ಚೆ ನಂತರ ಸುರಂಗ ಮಾರ್ಗವೊಂದೇ ಪರಿಹಾರ ಎಂಬ ತೀರ್ಮಾನಕ್ಕೆ ಬರಲಾಗಿದೆ. ದುಬಾರಿ ಆದರೂ ಮಾಡಬೇಕಿದೆ.
ಐಶ್ವರ್ಯ ಡಿಕೆಎಸ್ ಹೆಗ್ಡೆ:
ನಗರದ ಸಮಸ್ಯೆ, ಸವಾಲುಗಳ ಬಗ್ಗೆ ಮಾತ್ರ ಚರ್ಚೆ ಮಾತ್ರವಲ್ಲದೇ ಸಕಾರಾತ್ಮಕ ಬದಲಾವಣೆಗೆ ಯುವಕರ ಆಲೋಚನೆ, ಪರಿಕಲ್ಪನೆಗಳ ಅನ್ವೇಷಣೆ ಉದ್ದೇಶದೊಂದಿಗೆ ನಾವಿಂದು ಸೇರಿದ್ದೇವೆ.
ಬೆಂಗಳೂರು ನಮ್ಮ ಪಾಲಿಗೆ ಭಾವನಾತ್ಮಕ ಸಂಬಂಧದ ಬ್ರ್ಯಾಂಡ್ ಆಗಿದೆ. ನಮ್ಮ ನಗರ ಅನೇಕ ಸಮಸ್ಯೆಗಳನ್ನು ಹೊಂದಿದ್ದರೂ, ತನ್ನ ಜ್ಞಾನ ಹಾಗೂ ಉದ್ಯಮ ಕೌಶಲ್ಯಕ್ಕೆ ಹೆಸರುವಾಸಿಯಾಗಿದೆ. ನಮ್ಮ ನಗರ ಎಲ್ಲರನ್ನೂ ತನ್ನವರೆಂದು ಒಳಗೊಳ್ಳುವ ಅವಕಾಶ ಕಲ್ಪಿಸುತ್ತದೆ.
ಇಂದು ಶಾಲಾ ಮಕ್ಕಳು ನಮ್ಮ ನೆಚ್ಚಿನ ನಗರದ ಭವಿಷ್ಯದ ನಿರ್ಮಾಣದಲ್ಲಿ ಭಾಗವಹಿಸಿರುವುದು ಹೆಮ್ಮೆಯ ವಿಚಾರ. ಅವರು ವಿದ್ಯಾರ್ಥಿಗಳಾಗಿ ಬಂದಿಲ್ಲ. ಜವಾಬ್ದಾರಿಯುತ ನಾಗರಿಕರಾಗಿ ಭಾಗವಹಿಸಿದ್ದಾರೆ.
ಮಿತ್ರಾ ಅಕಾಡೆಮಿಯ ಮಕ್ಕಳು ಋತುಸ್ರಾವ ಸಮಯದಲ್ಲಿ ಮಹಿಳೆಯರ ಸಮಸ್ಯೆಗೆ ಪರಿಹಾರವಾಗಿ ಕೊಟ್ಟ ಸಲಹೆ ನನ್ನ ಮನಸ್ಸನ್ನು ಸೆಳೆದಿದೆ. ಋತುಸ್ರಾವ ಮಹಿಳೆಯರ ಬಳಕೆಗೆ ಸಾರ್ವಜನಿಕ ಸ್ಥಳಗಳಲ್ಲಿ ಪಿಂಕ್ ಬೂತ್ ವ್ಯವಸ್ಥೆ ಆಲೋಚನೆ ನಿಜಕ್ಕೂ ಶ್ಲಾಘನೀಯ. ನಾನು ನಾಲ್ಕೈದು ಸಂಸ್ಥೆಗಳ ಜವಾಬ್ದಾರಿ ಹೊತ್ತಿದ್ದು, ನನ್ನ ಶಿಕ್ಷಣ ಸಂಸ್ಥೆಗಳು ಹಾಗೂ ಮಾಲ್ ಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರುತ್ತೇನೆ.
ಮಕ್ಕಳ ಆಲೋಚನೆಗಳಿಂದ ನಾನು ಅನೇಕ ವಿಚಾರ ಕಲಿತೆ: ಸುಧಾಮೂರ್ತಿ:
ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಂಗಳಂ ಕೇಳುತುಂ, ಕೆಲವಂ ಮಾಳ್ಪವರಿಂದ ಕಂಡು, ಕೆಲವಂ ಸುಜ್ಞಾನದಿಂ ನೋಡುತುಂ, ಕೆಲವಂ ಸಜ್ಜನ ಸಂಗದಿಂದಲರಿಯಲ್ ಎಂಬ ವಚನದಂತೆ ಇಂದು ಯುವ ಪೀಳಿಗೆಯಿಂದ ನಾನು ಕೆಲವು ವಿಚಾರ ಕಲಿಯುವಂತಾಗಿದೆ.
ತಮ್ಮ ಆಲೋಚನೆ ವ್ಯಕ್ತಪಡಿಸಿದ ಮಕ್ಕಳ ಆತ್ಮವಿಶ್ವಾಸ ಕಂಡು ಸಂತೋಷವಾಗಿದೆ. ಇಲ್ಲಿನ ಮಕ್ಕಳ ಸಲಹೆಗಳನ್ನು ತೀರ್ಪುಗಾರರಾಗಿ ಆಯ್ಕೆ ಮಾಡುವುದು ನಿಜಕ್ಕೂ ಸವಾಲಿನ ಕೆಲಸ.
ಮಕ್ಕಳು ವಾರಕ್ಕೊಮ್ಮೆ ಸಾಮಾಜಿಕ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಇಂದು ಏಳು ಶಾಲೆಗಳ ಮಕ್ಕಳ ಪರಿಕಲ್ಪನೆ ಅತ್ಯುತ್ತಮವಾಗಿದೆ. ಪ್ರತಿ ಎಲೆಯೂ ಔಷಧಿ ಗುಣ ಹೊಂದಿರುವಂತೆ ಪ್ರತಿ ಅಕ್ಷರವೂ ಜ್ಞಾನ ಹೊಂದಿರುತ್ತದೆ. ಅದೇ ರೀತಿ ಪ್ರತಿ ಮಗುವಿನಲ್ಲೂ ಹೊಸ ಆಲೋಚನೆಗಳು ಇರುತ್ತವೆ. ಇಂತಹ ಆಲೋಚನೆಗಳಿಗೆ ವೇದಿಕೆ ಕಲ್ಪಿಸಿರುವ ಐಶ್ವರ್ಯ ಅವರಿಗೆ ಅಭಿನಂದನೆಗಳು.
ಹೆಚ್ಚು ಆಲೋಚನೆ ಬಂದಷ್ಟು ನಮ್ಮ ನಗರ ಉತ್ತಮವಾಗುತ್ತದೆ: ರಮೇಶ್ ಅರವಿಂದ್:
ಬ್ರಾಂಡ್ ಬೆಂಗಳೂರು ಎಂದರೇನು? ಬೆಂಗಳೂರು ಉದ್ಯಾನ ನಗರಿ. ಈ ಕೀರ್ತಿ ಬಂದಿದ್ದು ಕೇವಲ ಲಾಲ್ ಬಾಗ್ ಹಾಗೂ ಕಬ್ಬನ್ ಪಾರ್ಕ್ ನಿಂದ ಮಾತ್ರವಲ್ಲ. ಈ ಹಿಂದೆ ಎಲ್ಲರ ಮನೆ ಮುಂದೆ ಉದ್ಯಾನವನವಿತ್ತು. ನಂತರ ಕ್ರಮೇಣ ಅವು ಮರೆಯಾದವು.ಅದೇ ರೀತಿ ಬೆಂಗಳೂರು ಸಿಲಿಕಾನ್ ವ್ಯಾಲಿ, ಐಟಿ ರಾಜಧಾನಿ ಎಂಬ ಹೆಗ್ಗಳಿಕೆ ಗಳಿಸಿದೆ.
ನಾವು ನಮ್ಮ ಮನೆ ಸ್ವಚ್ಛವಾಗಿ ಇಟ್ಟುಕೊಂಡಂತೆ ರಸ್ತೆಯನ್ನು ಯಾಕೆ ಸ್ವಚ್ಛ ಇಟ್ಟುಕೊಂಡಿಲ್ಲ. ಪ್ರತಿಯೊಬ್ಬ ನಾಗರಿಕರಲ್ಲೂ ನಮ್ಮ ರಸ್ತೆ, ನಮ್ಮ ಬೀದಿ, ನಮ್ಮ ಏರಿಯಾ, ನಮ್ಮ ನಗರ ಎಂಬ ಭಾವನೆ ಬರಬೇಕು. ನಮ್ಮ ನಗರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತೇವೆ.
ನಮ್ಮ ನಗರದಲ್ಲಿ ಸಂಭ್ರಮಿಸಲು ಅನೇಕ ವಿಚಾರಗಳಿವೆ. ನಾವು ಎಲ್ಲಾ ಆಲೋಚನೆಗಳನ್ನು ಸ್ವಾಗತಿಸಬೇಕು. ಇಂತಹ ಆಲೋಚನೆಗಳೇ ಹೊಸ ಆವಿಷ್ಕಾರಕ್ಕೆ ದಾರಿ ಮಾಡಿಕೊಡುತ್ತವೆ. ಭರವಸೆಯೇ ಮುಂದೆ ಇತಿಹಾಸವಾಗಿ ಮಾರ್ಪಾಡಾಗುತ್ತದೆ. ಪ್ರತಿ ಶಾಲಾ ಮಕ್ಕಳು ತಮ್ಮದೇ ಆದ ಆವಿಷ್ಕಾರದ ಆಲೋಚನೆ ಹೊಂದಿರುತ್ತವೆ. ಹೆಚ್ಚು ಆಲೋಚನೆ ಬಂದಷ್ಟು ನಮ್ಮ ನಗರ ಉತ್ತಮವಾಗಿರುತ್ತದೆ.
ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿ ಹಾಗೂ ಬರಹಗಾರ್ತಿ ಶ್ರೀಮತಿ ಸುಧಾಮೂರ್ತಿ, ಖ್ಯಾತ ನಟ ರಮೇಶ್ ಅರವಿಂದ್, ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಇತರೆ ಹಿರಿಯ ಅಧಿಕಾರಿಗಳು ಹಾಗೂ ಖಾಸಗಿ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.