ಆಲೂರು : ಭಾರತ್ ಸ್ಕೌಟ್ಸ್ ಚಳವಳಿ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಸೇವಾಮನೋಭಾವದೊಂದಿಗೆ ಮಾನವೀಯ ಮೌಲ್ಯಗಳನ್ನು ವೃದ್ಧಿಸುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಸಹಾಯಕ ಆಯುಕ್ತ ಎಂ.ಬಾಲಕೃಷ್ಣ ಅಭಿಪ್ರಾಯಪಟ್ಟರು.
ಆಲೂರು ತಾಲ್ಲೂಕು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಭೈರಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಾರ್ಡ್ ಬೇಡನ್ ಪೊವೆಲ್ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಂಸ್ಥಾಪನಾ ದಿನಾಚರಣೆಯ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ ಜಾಗತಿಕ ಅಶಾಂತಿಯ ಹಿನ್ನೆಲೆಯಲ್ಲಿ ಇಂದು ವಿಶ್ವ ಭ್ರಾತೃತ್ವದ ಅಗತ್ಯತೆಯ ತುರ್ತಿದೆ. ಇಂತಹ ವಿಶ್ವ ದೃಷ್ಠಿಕೋನವನ್ನು ಮಕ್ಕಳಲ್ಲಿ ಬಿತ್ತುವುದರ ಮೂಲಕ ಸ್ಕೌಟ್ಸ್, ಗೈಡ್ಸ್ ವಿಶ್ವಮಾನವರನ್ನಾಗಿ ಮಾಡುತ್ತದೆ. ಈ ಚಳವಳಿ ಮಕ್ಕಳಲ್ಲಿ ಸಹಬಾಳ್ವೆ, ಸಂಪ್ರೀತಿ ಬೆಳೆಸುವುದರ ಜೊತೆಗೆ ಸಾಮುದಾಯಿಕ ಜವಾಬ್ದಾರಿಯನ್ನು ನಿರ್ವಸುವ ಬಲ ತುಂಬುತ್ತದೆ ಎಂದರು.
ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಕೊಟ್ರೇಶ್ ಎಸ್.ಉಪ್ಪಾರ್ ಮಾತನಾಡಿ ನಿವೃತ್ತ ಸೇನಾಧಿಕಾರಿಯಾದ ಲಾರ್ಡ್ ಬೇಡನ್ ಪೊವೆಲ್ ಅವರು ೧೯೦೭ ರಲ್ಲಿ ಹುಟ್ಟುಹಾಕಿದ ಈ ಸಂಸ್ಥೆ ಇಂದು ಜಗತ್ತಿನ ೨೦೦ ಕ್ಕೂ ಅಧಿಕ ರಾಷ್ಟçಗಳಲ್ಲಿ ತನ್ನ ಕಾರ್ಯವೈಖರಿಯನ್ನು ವಿಸ್ತರಿಸಿಕೊಂಡು ನಿರಂತರವಾಗಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಬಿಪಿಯವರ ಜನ್ಮದಿನವನ್ನು ಸತ್ ಚಿಂತನೆಯನ್ನು ರೂಢಿಸಿಕೊಳ್ಳುವುದರ ಹಿನ್ನೆಲೆಯಲ್ಲಿ ವಿಶ್ವ ಚಿಂತನಾ ದಿನವನ್ನಾಗಿ ಆಚರಿಸುತ್ತಿದ್ದೇವೆ. ಮಕ್ಕಳಲ್ಲಿ ಸಚ್ಚಾರಿತ್ರ, ಸದ್ಭಾವನೆ, ಸನ್ನಡತೆ, ಸನ್ನುಡಿಗಳನ್ನು ಮಕ್ಕಳಲ್ಲಿ ವೃದ್ಧಿಸುತ್ತದೆ. ಮಕ್ಕಳಲ್ಲಿ ಒಳ್ಳೆಯ ಭಾವನೆಗಳನ್ನು ಮೂಡಿಸುವದೇ ಇಂದಿನ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು.
ಗೈಡ್ ಕ್ಯಾಪ್ಟನ್ ಶಿಲ್ಪಕೃತಿ ಮಾತನಾಡಿ ಲಾರ್ಡ್ ಬೇಡನ್ ಪೊವೆಲ್ ಅವರು ಭವಿಷ್ಯದ ಸತ್ಪçಜೆಗಳಾಗಬಹುದಾದ ಮಕ್ಕಳನ್ನು ಉತ್ತಮ ಚಿಂತನಶೀಲರನ್ನಾಗಿ ಮಾಡಿಸುವುದರ ಜೊತೆಗೆ ಆದರ್ಶ ಜೀವನಕ್ಕೆ ಅಗತ್ಯವಿರುವ ಶಿಸ್ತು, ಸಂಯಮ, ಸೇವಾ ಮನೋಭಾವ ಮುಂತಾದ ಉದಾತ್ತ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಇಂಗ್ಲೆಂಡಿನ ಬ್ರೌನ್ಸಿ ದ್ವೀಪದಲ್ಲಿ ೧೯೦೭ ರಲ್ಲಿ ಪ್ರಾಯೋಗಿಕ ಶಿಬಿರ ಮಾಡುವುದರ ಮೂಲಕ ಚಾಲನೆ ನೀಡಿದರು. ನಂತರ ಬೇರೆ ಬೇರೆ ದೇಶಗಳಲ್ಲಿ ಇಂತಹ ಅನೇಕ ಶಿಬಿರಗಳನ್ನು ಏರ್ಪಡಿಸುತ್ತಾ ಸ್ಕೌಟ್ಸ್ ಮತ್ತು ಗೈಡ್ಸ್ ಧ್ಯೇಯ, ಉದ್ದೇಶಗಳನ್ನು ಸಾರುತ್ತಾ ಜಗತ್ತಿನಾದ್ಯಂತ ವಿಸ್ತರಿಸಿದರು. ಪ್ರಾರಂಭದ ಈ ಶಿಬಿರಗಳೇ ಇಂದು ಜಗತ್ತಿನಾದ್ಯಂತ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಜಾಂಬೂರಿಗಳಾಗಿ ಹೊಸರೂಪಗಳನ್ನು ಪಡೆದುಕೊಂಡಿವೆ ಎಂದರು.
ಬೆಳಗ್ಗೆ ಭೈರಾಪುರ ಗ್ರಾಮ ಪಂಚಾಯಿತಿ ವತಿಯಿಂದ ಮಕ್ಕಳ ಜಾಥಾ ಚಾಲನೆಗೊಂಡು ಭೈರಾಪುರ ಗ್ರಾಮದಲ್ಲಿ ಸಂಚರಿಸಿ ನಂತರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಮಾವೇಶಗೊಳ್ಳಲಾಯಿತು. ಜಾಥಾದಲ್ಲಿ ಭೈರಾಪುರ ಬೆಥಸ್ಥ ಆಂಗ್ಲಮಾಧ್ಯಮ ಶಾಲೆ, ಭೈರಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೊರಾರ್ಜಿ ವಸತಿ ಶಾಲೆ ಮರಸುಹೊಸಹಳ್ಳಿ ಶಾಲೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣತೂರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಾಳೂರು ಮಕ್ಕಳು ಭಾಗವಹಿಸಿದ್ದರು.
ವೇದಿಕೆಯಲ್ಲಿ ಸ್ಥಳೀಯ ಸಂಸ್ಥೆಯ ಖಜಾಂಚಿ ಬಿ.ಎಸ್.ಹಿಮ, ಮುಖ್ಯ ಶಿಕ್ಷಕಿ ಎಂ.ಎಲ್.ಎಲಿಜಬೆಥ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪುಷ್ಪ, ಗೈಡ್ಸ್ ಕ್ಯಾಪ್ಟನ್ಸ್ ಮಹೇರಾ ಬಾನು, ಕಾವ್ಯ ಮುಂತಾದವರು ಮಾತನಾಡಿದರು. ಈ ಸಂದರ್ಭದಲ್ಲಿ ಬೆತಸ್ಥ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ರೀನಾ ಮೆಥ್ಯೂವ್, ಭೈರಾಪುರ ಗ್ರಾಮ ಪಂಚಾಯತಿ ಸದಸ್ಯ ಗಣೇಶ್ ಉಪಸ್ಥಿತರಿದ್ದರು. ಶಿಕ್ಷಕಿ ಜ್ಯೋತಿಅಮೃತೇಶ್ ನಿರೂಪಿಸಿದರು, ಎಂ.ಎಲ್.ಎಲಿಜಬೆಥ್ ಸ್ವಾಗತಿಸಿದರು, ವಿದ್ಯಾರ್ಥಿಗಳು ಸಾಮೂಹಿಕ ಪ್ರಾರ್ಥನೆ ಮಾಡಿದರು. ಗೈಡ್ ಕ್ಯಾಪ್ಟನ್ ಕಾವ್ಯ ವಂದಿಸಿದರು.