ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕೈಗೊಂಡಿರುವ ಕ್ರಮಗಳ ಕುರಿತು ಆಂಧ್ರಪ್ರದೇಶ ಸರ್ಕಾರದ ಸಾರಿಗೆ ಅಧಿಕಾರಿಗಳು ವಿವಿಧ ಘಟಕಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ನಗರದಲ್ಲಿನ ವಿವಿಧ ಸಾರಿಗೆ ಘಟಕಗಳಿಗೆ ಭೇಟಿನೀಡಿದಾಗ ಮುಂದುವರೆದು, ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-2ಕ್ಕೆ ಭೇಟಿ ನೀಡಿದ ತಂಡವು ಐರಾವತ ಕ್ಲಬ್ ಕಾಸ್ 2.0, ಐರಾವತ ಕ್ಲಬ್ ಕಾಸ್, ಅಂಬಾರಿ ಡ್ರೀಮ್ ಕ್ಲಾಸ್, ಪಲ್ಲಕ್ಕಿ, ಅಂಬಾರಿ ಉತ್ಸವ, ಫ್ಲೈ ಬಸ್, ನಗರ ಸಾರಿಗೆ, ರಾಜಹಂಸ ಹಾಗೂ ಅಶ್ವಮೇಧ ವಾಹನಗಳನ್ನು ವೀಕ್ಷಿಸಿದರು. ಘಟಕಗಳ ನಿರ್ವಹಣೆ, ವಾಹನಗಳಿಗೆ ನೀಡಿರುವ ಬ್ರಾಂಡಿಗ್ ಹಾಗೂ ವಾಹನಗಳ ಪುನಶ್ಚೇತನ ಕಾರ್ಯದ ಕುರಿತು ಮುಕ್ತಕಂಠದಿಂದ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಶಾಂತಿನಗರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ಉಚಿತ ಪ್ರಯಾಣದ ಕುರಿತು ಮಹಿಳಾ ಪ್ರಯಾಣಿಕರಿಂದ ಅನುಭವ ಪಡೆದುಕೊಂಡರು.
ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕರು ಬೆಂ.ಮ.ಸಾ. ಸಂಸ್ಥೆ, ಹಾಗೂ ಮಾನ್ಯ ನಿರ್ದೇಶಕರು (ಸಿ ಮತ್ತು ಜಾ) ಹಾಗೂ ಎ.ಪಿ.ಎಸ್.ಆರ್.ಟಿ.ಸಿ. ಹಾಗೂ ಕರಾರಸಾ ನಿಗಮದ ಅಧಿಕಾರಿಗಳು ಉಪಸ್ಥಿತಿರಿದ್ದರು. ಆಂಧ್ರಪ್ರದೇಶ ಸರ್ಕಾರದ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ, ಸಾರಿಗೆ, ಯುವಜನ & ಕ್ರೀಡಾ ಸಚಿವರು, ಅನಿತಾ ವಂಗಲಪುಡಿ, ಗೃಹ ಹಾಗೂ ವಿಪತ್ತು ನಿರ್ವಹಣೆ ಸಚಿವರು, ಗುಮ್ಮಿಡಿ ಸಂಧ್ಯಾರಾಣಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು, ಪ್ರಧಾನ ಕಾರ್ಯದರ್ಶಿಗಳು, ಸಾರಿಗೆ, ರಸ್ತೆ ಮತ್ತು ಕಟ್ಟಡ, ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ ಹಾಗೂ ಆಂಧ್ರ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳ ತಂಡವು ಕರಾರಸಾ ನಿಗಮದ, ಕೇಂದ್ರ ಕಛೇರಿಗೆ ಭೇಟಿ ನೀಡಿ, ನಿಗಮದಲ್ಲಿ ಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕೈಗೊಂಡಿರುವ ಕ್ರಮಗಳ ಕುರಿತು ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರು ಮತ್ತು ಮಾನ್ಯ ಉಪಾಧ್ಯಕ್ಷರು, ಕರಾರಸಾ. ನಿಗಮ., ಸರ್ಕಾರದ ಕಾರ್ಯದರ್ಶಿಗಳು, ಸಾರಿಗೆ ಇಲಾಖೆ, ವ್ಯವಸ್ಥಾಪಕ ನಿರ್ದೇಶಕರು, ಕರಾರಸಾ ನಿಗಮ ರವರಿಂದ ಶಕ್ತಿ ಯೋಜನೆಯ ಕುರಿತು ವಿವರವಾಗಿ ಚರ್ಚಿಸಿ ಮಾಹಿತಿ ಪಡೆದುಕೊಂಡರು.