ಬೆಂಗಳೂರು: ಬೆಂಗಳೂರಿನಲ್ಲಿರುವ ರಸ್ತೆಗಳನ್ನು ಬಿಬಿಎಂಪಿಯ ಜೊತೆಗೆ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಪ್ರಮುಖವಾಗಿ ನಗರದ ಎಲ್ಲಾ ನಾಗರೀಕರು ಎಲ್ಲರೂ ಒಟ್ಟಾಗಿ ಕೈಜೋಡಿಸಿದರೆ ನಗರದ ರಸ್ತೆಗಳನ್ನು ಅಭಿವೃದ್ಧಿಗೊಳಿಸಲು ಹಾಗು ಸುಸ್ಥಿತಿಯಲ್ಲಿಡಲು ಸಾಧ್ಯವಿದೆಯೆಂದು ಮುಖ್ಯ ಕಾರ್ಯದರ್ಶಿಯಾದ ಶಾಲಿನಿ ರಜನೀಶ್ ರವರು ಅಭಿಪ್ರಾಯಪಟ್ಟರು.
“ನಮ್ಮ ರಸ್ತೆ 2025”ರ 2ನೇ ದಿನ “ಪಾಲಿಕೆಯ ಇಂಜಿನಿಯರ್ ಗಳ ಸಾಮರ್ಥ್ಯ ವೃದ್ಧ್ದಿ” ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಮ್ಮ ರಸ್ತೆ’ ಕಾರ್ಯಗಾರ ಏರ್ಪಡಿಸಿರುವುದು ಬಹಳ ಪ್ರಮುಖವಾದ ವಿಷಯವಾಗಿದ್ದು, ಅಭಿನಂದನೆಯನ್ನು ತಿಳಿಸುತ್ತಾ ಸರ್ಕಾರದ ಜೊತೆಗೆ ನಾಗರೀಕರು ಕೈಜೋಡಿಸಿದರೆ ರಸ್ತೆಗಳನ್ನು ಸುಸ್ಥಿತಿಯಲ್ಲಿಡಲು ಸಾಧ್ಯವೆಂದು ತಿಳಿಸಿದರು.
ಬೆಂಗಳೂರಿನ ಹವಾಮಾನದ ಕುರಿತು ನಾಗರೀಕರು ಎಷ್ಟು ಸಂತಸ ವ್ಯಕ್ತಪಡಿಸುತ್ತಾರೋ, ಅಷ್ಟೇ ಪ್ರಮಾಣದಲ್ಲಿ ನಗರದ ರಸ್ತೆಗಳ ಕುರಿತು ಬೇಸರ ಕೂಡಾ ವ್ಯಕ್ತಪಡಿಸುತ್ತಾರೆ. ನಗರದ ರಸ್ತೆಗಳ ಕುರಿತು ಸವಿವರವಾದ ಚಿತ್ರಣವನ್ನು ಇಲ್ಲಿ ಪ್ರಸ್ತಾಪಿಸಿದ್ದು, ಅದರಿಂದ ಸಮಸ್ಯೆಯ ಗಾತ್ರ ಹಾಗೂ ಅದಕ್ಕೆ ಪರಿಹಾರಗಳೇನು ಎಂಬುದನ್ನು ನಿಖರವಾಗಿ ನೋಡಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.
ಬೆಂಗಳೂರು ದಿನೇ ದಿನೇ ಬೆಳೆಯುತ್ತಿದ್ದು, ಎಲ್ಲ ಜನರೂ ನಗರದೆಡೆಗೆ ಬರಲು ಹೆಚ್ಚು ಆಸಕ್ತಿ ಹೊಂದಿದ್ದಾರೆ. ನಾವು ಜನಸಂಖ್ಯೆಗೆ ಅನುಗುಣವಾಗಿ ಯೋಜನೆ ರೂಪಿಸಿದರೆ ಅದಕ್ಕಿಂತ ಹೆಚ್ಚಾಗಿ ಜನಸಂಖ್ಯೆ ಹಾಗೂ ಸಂಚಾರ ದಟ್ಟಣೆ ನಿಯಂತ್ರಣ ಮೀರಿ ಹೆಚ್ಚುತ್ತಲೇ ಇದೆ. ಅದನ್ನು ನಾವು ಹೇಗೆ ನಿಯಂತ್ರಣ ಮಾಡಬೇಕೆಂಬುದರ ಬಗ್ಗೆ ಕೂಲಂಕುಷವಾಗಿ ಅಧ್ಯಯನ ನಡೆಸಬೇಕಿದೆ ಎಂದು ತಿಳಿಸಿದರು.
“ನಮ್ಮದೇ ಸಮಸ್ಯೆ – ನಮ್ಮದೇ ಪರಿಹಾರ”:
ನಗರದಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ನಾಗರೀಕರಾದವರು ಏನು ಮಾಡಬಹುದು. ಎಲ್ಲಾ ನಾಗರೀಕರು ಇದು “ನಮ್ಮ ಬೆಂಗಳೂರು – ನಮ್ಮ ರಸ್ತೆ, ನಮ್ಮದೇ ಸಮಸ್ಯೆ – ನಮ್ಮದೇ ಪರಿಹಾರ” ಆ ನಿಟ್ಟಿನಲ್ಲಿ ಯೋಚಿಸಿ ಎಲ್ಲರೂ ಒಟ್ಟಾಗಿ ಶ್ರಮಿಸಿದರೆ ಮಾತ್ರ ಇರುವ ಸಮಸ್ಯೆಗೆ ಪರಿಹಾರ ಕಂಡುಕೊಂಡು ಉತ್ತಮ ಫಲಿತಾಂಶ ಯಶಶ್ವಿಯಾಗಲು ಸಾಧ್ಯ.
ಲಾಸ್ಟ್ ಮೈಲ್ ಕನೆಕ್ಟಿವಿಟಿಗೆ ವ್ಯವಸ್ಥೆ ಮಾಡಬೇಕಿದೆ:
ಬೆಂಗಳೂರಿನ ನಾಗರೀಕನಾದವನು ಸಾರ್ವಜನಿಕ ಸಾರಿಗೆಯನ್ನು ಬಳಸಬೇಕಿದ್ದರೂ, ಲಾಸ್ಟ್ ಮೈಲ್ ಕನೆಕ್ಟಿವಿಟಿ ಸಮಸ್ಯೆ ಇದೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಸಾರಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಎಲೆಕ್ಟಿçಕ್ ವಾಹನಗಳು, ಶೇರ್ ಟ್ರಾನ್ಸ್ಫೋರ್ಟ್ ಸೇರಿದಂತೆ ಇನ್ನಿತರೆ ವಾಹನಗಳನ್ನು ಸಂಪರ್ಕಕೊಂಡಿಯ ವ್ಯವಸ್ಥೆ ಮಾಡಿದರೆ ಇರುವ ಸಮಸ್ಯೆ ಬಗೆಹರಿಸಬಹುದಾಗಿದೆ.
ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆಸಿದರೂ ಒಂದೇ ಮಾದರಿಯ ವಿನ್ಯಾಸವಿರುವಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಬಿಡುಗಡೆಗೊಳಿಸಿರುವ ನಮ್ಮ ರಸ್ತೆ ಕೈಪಿಡಿಯಲ್ಲಿರುವ ಪ್ರಮಾಣಿತ ಕಾರ್ಯವಿಧಾನವನ್ನು ಸರಿಯಾಗಿ ಅನುಸರಿಸಬೇಕೆಂದು ತಿಳಿಸಿದರು.
ನಮ್ಮ ರಸ್ತೆ ಕೈಪಿಡಿಯಲ್ಲಿರುವ ಎಲ್ಲಾ ಅಂಶಗಳನ್ನು ಇಂಜಿನಿಯರ್ಗಳು ಸರಿಯಾಗಿ ಅಳವಡಿಸಿಕೊಳ್ಳಬೇಕು. ಪಾಲಿಕೆ ಕೈಗೆತ್ತಿಕೊಳ್ಳುವ ಕಾಮಗಾರಿಗಳು, ಜಲಮಂಡಳಿಯ ನೀರಿನ ಲೈನ್, ಒಳಚರಂಡಿ ವ್ಯವಸ್ಥೆ, ಬೆಸ್ಕಾಂ/ಕೆ.ಪಿ.ಟಿ.ಸಿ.ಎಲ್ ಕೇಬಲ್ಗಳು, ಓಎಫ್ಸಿ ಕೇಬಲ್ಗಳಿಗೆ ಅಳವಡಿಸುವ ಡಕ್ಟ್ಗಳು ಯಾವ ರೀತಿ ಇರಬೇಕು, ಯಾವ ಕಡೆ ನಿರ್ಮಿಸಬೇಕು ಎಂಬುದನ್ನು ತಪ್ಪದೆ ಪಾಲಿಸಬೇಕು. ಮಾಡುವ ಕೆಲಸ ಸಾಕಷ್ಟು ವರ್ಷಗಳ ಕಾಲ ಬಾಳಿಕೆಯಿರುವಂತೆ ಮಾಡುವುದು ನಮ್ಮ ಕರ್ತವ್ಯವಾಗಿರುತ್ತದೆ ಎಂದು ಹೇಳಿದರು.
ಈ ವೇಳೆ ಪ್ರಧಾನ ಅಭಿಯಂತರರಾದ ಪ್ರಹ್ಲಾದ್, ಮುಖ್ಯ ಅಭಿಯಂತರರಾದ ಶಶಿಕುಮಾರ್, ಲೋಕೇಶ್, ರಾಜೇಶ್ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.