ಬೆಂಗಳೂರು: ಪೂರ್ವ ವಲಯ ವ್ಯಾಪ್ತಿಯ ಸಿ.ವಿ. ರಾಮನ್ ರಸ್ತೆಯಿಂದ ಮೆಖ್ರಿ ವೃತ್ತದ ದಿಕ್ಕಿನಲ್ಲಿ ಬಲಭಾಗದಲ್ಲಿರುವ ಮುರಿದು ಬಿದ್ದ ವಿದ್ಯುತ್ ಕಂಬಗಳು ಹಾಗೂ ಹಾನಿಗೊಂಡ ಸೂಚನಾ ಫಲಕಗಳನ್ನು ತಕ್ಷಣವೇ ತೆರವುಗೊಳಿಸಲು ಪೂರ್ವ ವಲಯ ಆಯುಕ್ತರಾದ ಶ್ರೀಮತಿ ಸ್ನೇಹಲ್ ಆರ್ ರವರು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ನಡೆದ ಸ್ಥಳ ಪರಿಶೀಲನೆ ವೇಳೆ, ವಲಯ ಆಯುಕ್ತರು ಮೆಖ್ರಿ ವೃತ್ತ, ಹೆಚ್.ಕ್ಯೂ.ಟಿ.ಸಿ. ಹಾಗೂ ಪ್ಯಾಲೆಸ್ ರೋಡ್ ಪ್ರದೇಶಗಳಲ್ಲಿ ಕಂಡುಬಂದ ಸ್ವಚ್ಛತೆ ಮತ್ತು ನಿರ್ವಹಣಾ ಸಮಸ್ಯೆಗಳ ಕುರಿತು ಹಲವು ತುರ್ತು ಕ್ರಮಗಳನ್ನು ಕೈಗೊಳ್ಳಲು ನಿರ್ದೇಶನ ನೀಡಿದರು.
*ಡ್ರೈನ್ ಸ್ಲ್ಯಾಬ್ ಸುತ್ತಲಿನ ಜಲ್ಲಿ ತೆರವಿಗೆ ಸೂಚನೆ:*
ಹೆಚ್.ಕ್ಯೂ.ಟಿ.ಸಿ. ಗೇಟಿನ ಸಮೀಪದ ಪ್ರದೇಶದಲ್ಲಿ ಹೊಸದಾಗಿ ಅಳವಡಿಸಲಾದ ಡ್ರೈನ್ ಸ್ಲ್ಯಾಬ್ ಸುತ್ತಲಿನ ಸಣ್ಣ ಕಲ್ಲುಗಳು ಹಾಗೂ ಜಲ್ಲಿಯನ್ನು ತಕ್ಷಣವೇ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮುಂದುವರೆದಂತೆ, ಸಾರ್ವಜನಿಕರ ಸುರಕ್ಷತೆಗಾಗಿ ಹೆಚ್.ಕ್ಯೂ.ಟಿ.ಸಿ ಮುಂಭಾಗದಲ್ಲಿನ ಫುಟ್ಪಾತ್ ಮರುಸ್ಥಾಪಿಸುವಂತೆ ವಲಯ ಆಯುಕ್ತರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
*ಸಿಮೆಂಟ್ ಬೌಲ್ಡರ್ ತೆರವಿಗೆ ಸೂಚನೆ:*
ಮೆಖ್ರಿ ವೃತ್ತದ ಫುಟ್ಪಾತ್ ಬಳಿಯ ಸಿಮೆಂಟ್ ಬೌಲ್ಡರ್ಗಳನ್ನು ತೆಗೆದು ಹಾಕಿ, ಪಾದಚಾರಿ ಮಾರ್ಗ ಮತ್ತು ಕರ್ಬ್ಗಳನ್ನು ಸ್ವಚ್ಛಗೊಳಿಸುವಂತೆ ಅವರು ನಿರ್ದೇಶಿಸಿದರು.
*ಪ್ಯಾಲೆಸ್ ಗುಟ್ಟಹಳ್ಳಿ ಫ್ಲೈಓವರ್ ಸ್ವೀಪಿಂಗ್ ಕಾರ್ಯ:*
ಪ್ಯಾಲೆಸ್ ಗುಟ್ಟಹಳ್ಳಿ ಫ್ಲೈಓವರ್ ಮೇಲೆ ಹಾಗೂ ಕೆಳಭಾಗದಲ್ಲೂ ಸ್ವಚ್ಛತಾ ಕಾರ್ಯಗಳನ್ನು ನಿರಂತರವಾಗಿ ನಡೆಸುವಂತೆ ಹಾಗೂ ಅವುಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಂದುವರೆದಂತೆ, ಪೋರ್ಶೆ ಶೋರೂಮ್ ಎದುರು ಭಾಗದಲ್ಲಿರುವ ಅನುಪಯುಕ್ತ ತಂತಿಗಳು, ತ್ಯಾಜ್ಯ, ಕಸ ಮತ್ತು ಮುರಿದ ಸಾಮಗ್ರಿಗಳನ್ನು ತೆಗೆದು ಹಾಕಿ ಸಾರ್ವಜನಿಕರಿಗೆ ಅಡೆತಡೆಯಿಲ್ಲದ ಪಾದಾಚಾರಿ ಮಾರ್ಗ ಖಚಿತಪಡಿಸಲು ಸೂಚಿಸಿದರು.
*ರಸ್ತೆಗಳು ಮತ್ತು ಪಾದಚಾರಿ ಮಾರ್ಗದ ಮೇಲಿನ ಜಲ್ಲಿ ಕಲ್ಲಿನ ತೆರವಿಗೆ ಸೂಚನೆ:*
ರಸ್ತೆಯ ಮೇಲಿನ ಹಾಗೂ ಪಾದಚಾರಿ ಮಾರ್ಗದಲ್ಲಿನ ಜಲ್ಲಿ, ಸಣ್ಣ ಕಲ್ಲುಗಳು, ಮಣ್ಣು ಮತ್ತು ತ್ಯಾಜ್ಯವನ್ನು ತೆರವುಗೊಳಿಸಲು ಪೌರಕಾರ್ಮಿಕರಿಗೆ ಸೂಚನೆ ನೀಡಿದರು.
*ಪಾದಚಾರಿ ಮಾರ್ಗಕ್ಕೆ ಕೊಳಚೆ ನೀರು ಬಿಟ್ಟ ಅಪಾರ್ಟ್ಮೆಂಟ್ ಗೆ ನೋಟಿಸ್:*
ಸುಮೀತ್ ಅಪಾರ್ಟ್ಮೆಂಟ್ನಿಂದ ಪಾದಚಾರಿ ಮಾರ್ಗದ ಮೇಲೆ ಕೊಳಚೆ ನೀರು ಹರಿಯುತ್ತಿರುವುದನ್ನು ಗಮನಿಸಿದ ವಲಯ ಆಯುಕ್ತರು, ಅಪಾರ್ಟ್ಮೆಂಟ್ ವ್ಯವಸ್ಥಾಪಕರಿಗೆ ನೋಟಿಸ್ ನೀಡಲು ಸೂಚಿಸಿ, ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಕಾರ್ಯಪಾಲಕ ಅಭಿಯಂತರರು, ಮಾರ್ಷಲ್ಸ್, ಬಿಬಿಎಂಪಿ ಹಾಗೂ ಬಿ.ಎಸ್.ಡಬ್ಲ್ಯೂ.ಎಮ್.ಎಲ್ ನ ಅಧಿಕಾರಿಗಳು ಸೇರಿದಂತೆ ಇತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.