ಚನ್ನರಾಯಪಟ್ಟಣ: ಸಮಾಜ ಮತ್ತು ಪಕ್ಷ ಸಂಘಟನೆ ನಿಮ್ಮ ಮೇಲಿದೆ. ಸಾಮಾಜಿಕ ನ್ಯಾಯ, ಜಾತ್ಯತೀತ ಮೌಲ್ಯಗಳ ಅಡಿಯಲ್ಲಿ ಸಮಾಜವನ್ನು ಮತ್ತು ಪಕ್ಷವನ್ನು ಸಂಘಟಿಸಿ ಎಂದು ಯುವ ಕಾಂಗ್ರೆಸ್ ಚುನಾವಣೆಯಲ್ಲಿ ವಿಜೇತರಾದ ಯುವ ಮುಖಂಡರಿಗೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ನುಡಿದರು.
ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಚುನಾಯಿತರಾದ ಯುವ ಮುಖಂಡರನ್ನು ಸನ್ಮಾನಿಸಿ ಮಾತನಾಡಿದರು.
ಹಿರಿಯ ಮುಖಂಡರು, ಯುವ ಮುಖಂಡರೇ ಕಾಂಗ್ರೆಸ್ ಪಕ್ಷದ ಆಸ್ತಿ. ಗೋಪಾಲಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅತ್ಯಂತ ಪ್ರೀತಿ ಪಾತ್ರರು. ನನ್ನ ಮತ್ತು ಗೋಪಾಲಸ್ವಾಮಿಯವರ ಸಂಬಂಧ ರಾಜಕೀಯವನ್ನು ಮೀರಿದ್ದು. ಗೋಪಾಲಸ್ವಾಮಿ ಅವರಿಗೆ ರಾಜಕೀಯವಾಗಿ ಉತ್ತಮ ಭವಿಷ್ಯವಿದೆ ಎಂದರು.
ಶ್ರೇಯಸ್ ಪಟೇಲ್ ಅವರನ್ನು ಸಂಸದರಾಗಿ ಚುನಾಯಿಸುವ ಮೂಲಕ ಹಾಸನ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಕ್ತಿ ಹೆಚ್ಚಿಸಿದಕ್ಕಾಗಿ ಜಿಲ್ಲೆಯ ಜನತೆಗೆ ಅಭಿನಂದನೆ ಸಲ್ಲಿಸಿದರು.
ನಾನು ಕೋಲಾರದವನಾದರೂ ನನಗೆ ಹಾಸನ ಅಂದರೆ ವಿಶೇಷ ಪ್ರೀತಿ. ಅತಿ ಹೆಚ್ಚು ಸ್ನೇಹಿತರು, ಆತ್ಮೀಯರು ಇರುವ ಜಿಲ್ಲೆ ಹಾಸನ ಎಂದು ಮೆಚ್ಚುಗೆ ಸೂಚಿಸಿದರು.
ಬರುವ ಜಿಲ್ಲಾ ಪಂಚಾಯ್ತಿ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಯುವ ಮುಖಂಡರಿಗೆ ಕರೆ ನೀಡಿದರು.