ಬೆಂಗಳೂರು: ಯಾವ ಸರ್ಕಾರಗಳು ಸಹಾ ತಾಯಿ ಭುವನೇಶ್ವರಿಯ ಮಂದಿರವನ್ನು ನಿರ್ಮಾಣ ಮಾಡಲು ಮುಂದೆ ಬಾರದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಖ್ಯಾತ ಬರಹಗಾರ ಹಾಗೂ ಉತ್ತಮ ವಾಗ್ಮಿ ಡಾ. ನಾ ಸೋಮೇಶ್ವರ್ ತಿಳಿಸಿದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೃಷಿ ತಂತ್ರಜ್ಞಾನದ ಇಲಾಖೆಯ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ 68ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬೇರೆ ರಾಜ್ಯ, ದೇಶದಲ್ಲಿ ಬುವನೇಶ್ವರಿ ದೇವಾಲಯಗಳು ಇದ್ದು, ಕನ್ನಡಕ್ಕೆ ನಾಡಿಗೆ ಕರ್ನಾಟಕಕ್ಕೆ ಸಂಬಂಧವಿರುವ ಶಕ್ತಿ ದೇವರನ್ನು, ದೇವಾಲಯವನ್ನು ನಿರ್ಮಾಣ ಮಾಡುವ ಗೋಜಿಗೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರು ಯಾರು ಮುಂದಾಗಿಲ್ಲ, ಕೇವಲ ಕಾಟಾಚಾರಕ್ಕೆ ನವೆಂಬರ್ ನಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಿ ಭುವನೇಶ್ವರಿಗೆ ಜೈ ಎಂದು ಕೂಗಿ ಕೈತೊಳೆದುಕೊಳ್ಳುವುದು ವಿಪರ್ಯಾಸದ ಸಂಗತಿ ಎಂದು ಜನಪ್ರತಿನಿಧಿಗಳಿಗೆ ಚಾಟಿ ಬೀಸಿದರು.
ಭುವನೇಶ್ವರಿ ಮಂದಿರ ನಿರ್ಮಾಣಕ್ಕೆ ಸರ್ಕಾರಗಳ ನಿರಾಸಕ್ತಿ: ಸೋಮೇಶ್ವರ್
ಕರ್ನಾಟಕದಲ್ಲಿ ಎರಡು ಮೂರು ಕಡೆ ಮಾತ್ರ ಭುವನೇಶ್ವರಿ ಮಂದಿರ ಇರುವುದು ಸಿಗುತ್ತದೆ, ಅದೇರೀತಿ ತಮಿಳುನಾಡು, ಆಂಧ್ರ,ಕೇರಳ,ಅಸ್ಸಾಂ ನಲ್ಲಿ 4ಕ್ಕಿಂತ ಹೆಚ್ಚು ದೇವಾಲಯಗಳು ಸಿಗುತ್ತಿವೆ, ಕರ್ನಾಟಕ ಹೆಸರು ಬರುವ, ಇತಿಹಾಸ ಇರುವ ನಾಡಿಗೆ ಭುವನೇಶ್ವರಿ ಮಂದಿರ ನಿರ್ಮಾಣ ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ ನಮ್ಮವರು, ಯಾಕೆ ಇಷ್ಟು ನಿರಾಸಕ್ತಿ ಎಂಬುದು ತಿಳಿಯುತ್ತಿಲ್ಲ, ರಾಜ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಇದೆ ಅವರಾದರೂ ತಲೆಕೆಡಿಸಿಕೊಳ್ಳಬಹುದಿತ್ತು ಅವ್ರು ಸಹಾ ನಮಗೂ ಅದಕ್ಕೂ ಸಂಬಂಧವಿಲ್ಲದಂತೆ ಇರುವುದು ನಾಡಿನ, ಕರ್ನಾಟಕದ ಬಗ್ಗೆ ಇರುವ ಆಸಕ್ತಿ ಯಾವ ಮಟ್ಟಕ್ಕೆ ಇದೇ ಎಂಬುದನ್ನು ಇದರಿಂದ ತಿಳಿಯುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಥಟ್ ಅಂತ ಪ್ರಶ್ನೆಗೆ ತಕ್ಕಂತೆ ಉತ್ತರಿಸಿದವರಿಗೆ, ಬಹುಮಾನವಾಗಿ ಪುಸ್ತಕ
ಇದೇ ವೇಳೆ ಸೋಮೇಶ್ವರ ಅವರು ದೂರದರ್ಶನದಲ್ಲಿ ನಡೆಸಿಕೊಡುವ ಥಟ್ ಅಂತಾ ಹೇಳಿ ಕಾರ್ಯಕ್ರಮದ ರೀತಿ ಇಲ್ಲಿಯೂ ಸಂಸ್ಥೆಯ ಸಿಬ್ಬಂದಿಗಳಿಗೆ ಕೆಲವೊಂದು ನಾಡಿನ ವಿಚಾರ, ಭಾಷೆ, ಇತಿಹಾಸ,ಕರ್ನಾಟಕ ಉದಯದ ಬಗ್ಗೆ ಕೆಲವೊಂದು ಪ್ರಶ್ನೆಗಳನ್ನು ಕೇಳುವ ಮೂಲಕ ಉತ್ತರಿಸಿದವರಿಗೆ ಸ್ವತಃ ಅವರೇ ಪುಸ್ತಕಗಳನ್ನು ಕೊಡುವ ಕೆಲಸವನ್ನು ಮಾಡಿದರು, ಈ ಮೂಲಕ ಯಾರಿಗೂ ತಿಳಿಯದಿರುವ ವಿಚಾರಗಳ ಬಗ್ಗೆ ಎಂದೆಂದಿಗೂ ಎಲ್ಲರೂ ತಿಳಿದುಕೊಳ್ಳಲೇ ಬೇಕಾದ ವಿಚಾರಗಳನ್ನು ಅರ್ಥವಾಗುವಂತೆ ತಿಳಿಸಿದರು.
50 ವರ್ಷಗಳಿಂದ ಕನ್ನಡ/ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಆಚರಿಸಿಕೊಂಡು ಬರುತ್ತಿದ್ದೇವೆ ಆದರೆ ಕನ್ನಡ ರಾಜ್ಯೋತ್ಸವನ ಅಥವಾ ಕರ್ನಾಟಕ ರಾಜ್ಯೋತ್ಸವನ ಆಚರಣೆ ಮಾಡುವುದು ಯಾವುದು ಎಂಬುದರ ಬಗ್ಗೆ ಕೇಳಿದರೆ ಸೂಕ್ತ ಉತ್ತರ ಯಾರಿಂದಲೂ ಬರಲಿಲ್ಲ, ನನಗೆ ತುಂಬಾ ಬೇಸರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಹಿತಿಗಳು ಹಾಗೂ ಸಂಸ್ಥೆಯ ನಿರ್ದೇಶಕರಾದ ಡಾ. ಬಂದಲಗದ್ದೆ ಲಕ್ಷ್ಮೀನಾರಾಯಣ ಸುರೇಶ್ ಮಾತನಾಡಿ, ಎಲ್ಲರ ಮನೆಯಲ್ಲಿ ಕನ್ನಡ ಮಯವಾಗಬೇಕು, ಕರ್ನಾಟಕ ಹಾಗೂ ಕನ್ನಡ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ, ಕರ್ನಾಟಕ ರಾಜ್ಯೋತ್ಸವ ಕೇವಲ ಒಂದು ತಿಂಗಳಿಗೆ ಸೀಮಿತವಾಗಬಾರದು, ದಿನನಿತ್ಯದ ಬದುಕಾಗಬೇಕು, ಎಲ್ಲರ ಮನದಲ್ಲೂ ನಾಡಿನ ಬಗ್ಗೆ ಅಭಿಮಾನ ಹೊಂದಿರಬೇಕು ಎಂದು ತಿಳಿಸಿದರು.
ಇನ್ನು ಇದೇ ವೇಳೆ ಸಂಘದ ಸಿಬ್ಬಂದಿಗಳ ಮಕ್ಕಳಿಗೆ ಎಸೆಸೆಲ್ಸಿ ಮತ್ತು puc ಯಲ್ಲಿ ಹೆಚ್ಚು ಅಂಕಗಳಿಸಿದ ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಲ್ಲದೆ ಸಂಘದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಹಾಗೂ ಪುರುಷ ಉದ್ಯೋಗಿಗಳಿಗೆ ಕೆಲವು ಸ್ಪರ್ಧೆಗಳನ್ನು ನಡೆಸಲಾಗಿತ್ತು. ಅದರಲ್ಲಿ ಗೆದ್ದವರಿಗೆ ಬಹುಮಾನವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಮುಖ್ಯ ವ್ಯವಸ್ಥಾಪಕ ಬಸವರಾಜು,ಹೆಲಿಜಾ ಅಂಡ್ರೀಸ್ , ಉಪ ವ್ಯವಸ್ಥಾಪಕರಾದ ಟಿ ಎಸ್ ಮಹೇಶ್ ಸೇರಿದಂತೆ ಹಣಕಾಸು ಸಂಸ್ಥೆಯ ಅಧಿಕಾರಿಗಳ ಸಂಘ,ನೌಕರರ ಸಂಘ,ಎಸ್ಸಿ, ಎಸ್ಟಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.