ಬೆಂಗಳೂರು: ರಾಷ್ಟ್ರದಲ್ಲಿ ನಮ್ಮ ಕೃಷಿ ವಿಶ್ವವಿದ್ಯಾನಿಲಯವು ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ಸಂಶೋಧನೆ ಮತ್ತು ಅಭಿವೃಧ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದೆ. ಈ ಬಗ್ಗೆ ಹಲವಾರು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರಾಷ್ಟ್ರೀಯ ಸಮಾವೇಶ ಭವನದಲ್ಲಿ ಹಮ್ಮಿಕೊಂಡಿದ್ದ, ವಿಶ್ವ ಆಹಾರ ದಿನಾಚರಣೆ-2024ರ ಉದ್ಘಾಟನೆ ಹಾಗೂ ಮರು ವಿನ್ಯಾಸಗೊಂಡಿರುವ ನವೀಕೃತ ವೆಬ್ಸೈಟ್ ಅನಾವರಣ ನೆರವೇರಿಸಿ ಮಾತನಾಡಿದ ಸಚಿವರು, ಕೃಷಿ ವಿಶ್ವವಿದ್ಯಾನಿಯವು ರಾಜ್ಯದಲ್ಲಿ ಆಹಾರ ಉತ್ಪಾದನೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಮಕ್ಕಳಿಗೆ – ವಿದ್ಯಾರ್ಥಿಗಳಿಗೆ ಸರ್ಕಾರ ಏನು ಮಾಡಬೇಕು ಎನ್ನುವ ಬಗ್ಗೆ ಸಲಹೆ ಕೊಟ್ಟರೆ ಸರ್ಕಾರದ ಮಟ್ಟದಲ್ಲಿ ಕೂಲಂಕುಷವಾಗಿ ಚರ್ಚಿಸಲಾಗುವುದು ಎಂದರು.
ಭಾರತ ದೇಶದ ಆರ್ಥಿಕತೆ ಕೃಷಿಯನ್ನು ಅವಲಂಬಿಸಿದೆ. ಜಗತ್ತಿನಲ್ಲಿ ಬೇರೆ ರಾಷ್ಟ್ರಕ್ಕೆ ಹೋಲಿಸಿದರೆ ದೊಡ್ಡ ಪ್ರಮಾಣದ ಕೃಷಿ ಅವಲಂಬಿಸಿರುವ ದೇಶ ಭರತ ಖಂಡ. ಶೇ. 70 ರಿಂದ 75 ರಷ್ಟು ಜನ ಕೃಷಿಯನ್ನು ಅವಲಂಬಿಸಿ ಕೃಷಿ ಆಧಾರಿತ ಜೀವನ ನಡೆಸುತ್ತಿದ್ದಾರೆ. ಜಗತ್ತಿನ ಹಲವು ದೇಶಗಳಲ್ಲಿ ದವಸ ಧಾನ್ಯಗಳ ಅಭಿವೃದ್ಧಿ ಆಗುತ್ತಿಲ್ಲ. ಕೆಲವು ರಾಷ್ಟ್ರಗಳಲ್ಲಿ ಈಗಲೂ ಊಟಕ್ಕೆ ಕಷ್ಟಪಡುತ್ತಿದ್ದಾರೆ ಎಂದು ಹೇಳಿದರು.
ಕೋಟ್ಯಾಂತರ ಜನ ಪ್ರೋಟೀನ್ ಭರಿತ ಆಹಾರದಿಂದ ವಂಚಿತರಾಗಿದ್ದಾರೆ. ಇದರಿಂದ ಅವರ ಆರೋಗ್ಯ ಸರಿಯಿಲ್ಲದೆ, ಚಿಕಿತ್ಸೆಗಾಗಿಯೆ ಖರ್ಚು ಮಾಡುವಂತಾಗಿದೆ. ಉತ್ಪಾದಿಸಿದ ಪದಾರ್ಥಗಳು ವಿಷಪೂರಿತವಾಗಿದ್ದು, ಇತ್ತೀಚೆಗೆ ಜನರಿಗೆ ಬಿ.ಪಿ, ಸಕ್ಕರೆ ಕಾಯಿಲೆ, ನಿಶ್ಚಕ್ತಿ ಹೆಚ್ಚಾಗಿದ್ದು, ಇದನ್ನು ಕಡಿಮೆ ಮಾಡಲು ಕೃಷಿ ಸಂಶೋದನೆಗಳು ಉತ್ಪಾದನಾ ರೀತಿ ನೀತಿಯಲ್ಲಿ ಪೂರಕ ಚಿಂತನೆ ಮಾಡಬೇಕು. ರಾಸಾಯನಿಕ ಬಳಸದೆ ಉತ್ಪನ್ನ ಮಾಡುವಲ್ಲಿ ಹೆಚ್ಚಿನ ಗಮನ ನೀಡಬೇಕು ಎಂದರು.
ಭಾರತದಲ್ಲಿ ಜನರ ಆರೋಗ್ಯ ಹದಗೆಡುತ್ತಿದೆ. 50 ವರ್ಷದ ಹಿಂದಿನ ಆಹಾರಕ್ಕೆ ಹೋಗಬೇಕು. ಹೆಚ್ಚಾಗಿ ಸಿರಿ ಧಾನ್ಯ ಬೆಳೆಯುವಂತೆ ರೈತರನ್ನು ಪ್ರೋತ್ಸಾಹಿಸಬೇಕು. ನಾನು ಸಹ ರೈತ ಮನೆತನದಿಂದ ಬಂದಿದ್ದು, ಒಂದು ಅಗಳು ಅನ್ನವನ್ನು ವ್ಯರ್ಥ ಮಾಡುವುದಿಲ್ಲ. ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಈಗಿನಿಂದಲೇ ಆಹಾರವನ್ನು ವ್ಯರ್ಥ ಮಾಡಬಾರದು ಎಂಬ ಬಗ್ಗೆ ಅರಿವು ಮೂಡಿಸಬೇಕು ಎಂದ ಸಚಿವರು ವಿದ್ಯಾರ್ಥಿಗಳಿಗೆ ಇಂದಿನಿಂದಲೆ ನಾವು ಆಹಾರವನ್ನು ವ್ಯರ್ಥ ಮಾಡುವುದಿಲ್ಲ ಎಂದು ಪ್ರತಿಜ್ಞಾ ವಿಧಿ ಬೋಧಿಸಿದರು.
ಇದಕ್ಕೂ ಮುನ್ನ ಸಚಿವರು ಆಹಾರ ಉತ್ಪನ್ನ ಮಳಿಗೆಗಳನ್ನು ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಆಹಾರ ಉತ್ಪಾದನೆ ಬಗ್ಗೆ ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಎಸ್.ವಿ. ಸುರೇಶ ಅವರು, ಸಚಿವರು ಇಂದು ಒಂದು ಅಗುಳು ಅನ್ನವನ್ನು ವ್ಯರ್ಥ ಮಾಡಬಾರದು ಎಂಬ ಬಗ್ಗೆ ಅರಿವು ಮೂಡಿಸಿದ್ದು, ಇಂದಿನಿಂದಲೇ ಕೃಷಿ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಮತ್ತು ವಸತಿ ನಿಲಯಗಳಿಗೆ ಅರಿವು ಮೂಡಿಸಲಾಗುವುದು. ಪೌಷ್ಠಿಕಾಂಶ ಕೊರತೆಯಿಂದ ಸಮಾಜ ನಲುಗುತ್ತಿದ್ದು, ಇದನ್ನು ಹೋಗಲಾಡಿಸಲು ಕೃಷಿ ವಿಶ್ವವಿದ್ಯಾನಿಲಯವು ಅನೇಕ ಸಂಶೋಧನೆ ಹಮ್ಮಿಕೊಂಡಿದೆ. ವೈಜ್ಞಾನಿಕತೆಯಿಂದ ಪೌಷ್ಠಿಕಾಂಶಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಕೊಡುವ ಪ್ರಯತ್ನ ಮಾಡಿ, ಸಾಮಾಜಿಕ ಜವಾಬ್ದಾರಿ ನಿರ್ವಹಿಸುವ ಕೆಲಸ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.