ಬೆಂಗಳೂರು: ಪಶ್ಚಿಮ ವಲಯದ *ವಲಯ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್* ರವರು ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಮಳೆಗಾಲಕ್ಕೆ ತೆಗೆದುಕೊಳ್ಳಬೇಕಿರುವ ಮುಂಜಾಗ್ರತಾ ಕ್ರಮಗಳ ಕುರಿತು ಇಂದು ಪಶ್ಚಿಮ ವಲಯ ಕಛೇರಿಯ ಸಭಾಂಗಣದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಳೆಗಾಲದ ವೇಳೆ ಯಾವುದೇ ರೀತಿಯ ಸಮಸ್ಯೆಗಳಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಎಲ್ಲಾ ವಿಭಾಗಗಳ ಇಂಜಿನಿಯರ್ಗಳಿಗೆ, ಅರಣ್ಯ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆಗಾಲದ ವೇಳೆ ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳು ಹಾಗೂ ರಸ್ತೆಗಳಲ್ಲಿ ಜಲಾವೃತವಾಗುವ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ರಸ್ತೆ ಬದಿಯ ಚರಂಡಿಗಳಲ್ಲಿರುವ ಹೂಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಸ್ವಚ್ಛವಾಗಿಟ್ಟುಕೊಳ್ಳಲು ತಿಳಿಸಿದರು.
ಪಶ್ಚಿಮ ವಲಯದಲ್ಲಿ ಬರುವ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಬರುವ ನೀರುಗಾಲುವೆ ಹಾಗೂ ಚರಂಡಿಗಳಲ್ಲಿ ನಿರಂತರವಾಗಿ ಹೂಳೆತ್ತಬೇಕು. ಅಲ್ಲದೆ 6 ಉಪ ವಿಭಾಗಗಳಲ್ಲಿ ತೆರೆದಿರುವ ನಿಯಂತ್ರಣ ಕೊಠಡಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ನಾಗರಿಕರಿಂದ ಬರುವ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಿ ಕೂಡಲೇ ಇತ್ಯರ್ಥಪಡಿಸಲು ಸೂಚಿಸಿದರು.
*ಕಾಮಗಾರಿಗೆ ಅಂದಾಜು ಪಟ್ಟಿ ಸಿದ್ದಪಡಿಸಿ:*
ಮಳೆಗಾಲದ ವೇಳೆ ಕೆ.ಆರ್ ಮಾರುಕಟ್ಟೆ ಹಾಗೂ ವಾಹನಗಳ ನಿಲುಗಡೆಯ ಸ್ಥಳದಲ್ಲಿ ನೀರು ನಿಲ್ಲುವುದರಿಂದ ವ್ಯಾಪಾರಸ್ತರು ಹಾಗೂ ಗ್ರಾಹಕರು/ನಾಗರಿಕರಿಗೆ ಸಾಕಷ್ಟು ಸಮಸ್ಯೆಯಾಗಲಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಕಾಮಗಾರಿ ನಡೆಸಲು ಅಂದಾಜು ಪಟ್ಟಿ ಸಿದ್ದಪಡಿಸಲು ಅಧಿಕಾರಿಗಳು ಸೂಚಿಸಿದರು.
ಈ ವೇಳೆ ವಲಯ ಜಂಟಿ ಆಯುಕ್ತರಾದ ಸಂಗಪ್ಪ, ಮುಖ್ಯ ಅಭಿಯಂತರರಾದ ಶಶಿಕುಮಾರ್, ಕಾರ್ಯಪಾಕ ಅಭಿಯಂತರರು, ಕಂದಾಯ ಅಧಿಕಾರಿಗಳು, ಆರೋಗ್ಯ ವೈದ್ಯಾಧಿಕಾರಿ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.