ಬೆಂಗಳೂರು: ಈಕ್ಯೂ ಮ್ಯಾಗಝೀನ್ ಸಂಸ್ಥೆಯು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಬಹುನೀರಿಕ್ಷಿತ ಸೂರ್ಯಕಾನ್ ಬೆಂಗಳೂರು 2025 ಕಾರ್ಯಕ್ರವು ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಸೌರ ಶಕ್ತಿ ಕ್ಷೇತ್ರದ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಉದ್ಯಮದ ಮುಖಂಡರು, ನೀತಿ ನಿರೂಪಕರು ಮತ್ತು ಸಂಶೋಧಕರು ಮಹತ್ವದ ಸಂವಾದವನ್ನು ನಡೆಸಿದರು.
ಕಾರ್ಯಕ್ರಮದಲ್ಲಿ ಚರ್ಚಾ ಗೋಷ್ಠಿಗಳು, ತಂತ್ರಜ್ಞಾನ ಪ್ರದರ್ಶನಗಳು, ನೆಟ್ ವರ್ಕಿಂಗ್ ಸೆಷನ್ ಗಳು ನಡೆದುವು. ಜೊತೆಗೆ ಪ್ರತಿಷ್ಠಿತ ಕರ್ನಾಟಕ ವಾರ್ಷಿಕ ಸೋಲಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಈ ಕಾರ್ಯಕ್ರಮವು 25 ಗಿಗಾ ವ್ಯಾಟ್ ಗಿಂತಲೂ ಹೆಚ್ಚು ಸಾಮರ್ಥ್ಯ ಹೊಂದಿರುವ ಕರ್ನಾಟಕವನ್ನು ಸೌರ ಶಕ್ತಿಯ ಪ್ರಮುಖ ಕೇಂದ್ರವಾಗಿ ಪ್ರಸ್ತುತಪಡಿಸಿತು.
ಉದ್ಯಮದ ದಿಗ್ಗಜರು ಸೌರ ಮಾರುಕಟ್ಟೆ ಟ್ರೆಂಡ್ ಗಳು, ನೀತಿ ನವೀಕರಣಗಳು, ಯೋಜನೆಗಳು ಮತ್ತು ರಾಜ್ಯದ ನಿಯಂತ್ರಣ ಚೌಕಟ್ಟಿನ ಬಗ್ಗೆ ಚರ್ಚೆ ನಡೆಸಿದರು. ಗ್ರಿಡ್ ಕರ್ಟೈಲ್ಮೆಂಟ್, ಪಿಪಿಎ ಮರು ಮಾತುಕತೆ, ಮತ್ತು ಓಪನ್ ಆಕ್ಸೆಸ್ ಅವಕಾಶಗಳಂತಹ ವಿಚಾರಗಳ ಕುರಿತು ಸಂವಾದ ನಡೆಯಿತು. ಕರ್ನಾಟಕದ ಸೌರ ಪಾರ್ಕ್ ಗಳು ಮತ್ತು ಕೆ ಆರ್ ಇ ಡಿ ಎಲ್ ನ ಶಕ್ತಿ ಸಂಗ್ರಹ ಯೋಜನೆಗಳ ಕುರಿತೂ ಬೆಳಕು ಚೆಲ್ಲಲಾಯಿತು.
ಗೋಷ್ಠಿಯಲ್ಲಿ ಭಾಗವಹಿಸಿದ ಸಂಪನ್ಮೂಲ ವ್ಯಕ್ತಿಗಳು ಕರ್ನಾಟಕದ ರೂಫ್ ಟಾಪ್ ಸೌರ ವಲಯವನ್ನು ಮುನ್ನಡೆಸಲು ಅವಶ್ಯವಿರುವ ಸ್ಮಾರ್ಟ್ ತಂತ್ರಜ್ಞಾನಗಳು, ಶಕ್ತಿ ಸಂಗ್ರಹ ಮತ್ತು ಗ್ರಿಡ್ ಏಕೀಕರಣದ ಮಹತ್ವವನ್ನು ಚರ್ಚಿಸಿದರು. ಉದ್ಯಮ ಮಾದರಿಗಳು, ನೀತಿ ಬದಲಾವಣೆಗಳು ಮತ್ತು ಸರ್ಕಾರಿ ಕಟ್ಟಡಗಳಲ್ಲಿ ಸೌರ ಶಕ್ತಿ ಬಳಕೆಯನ್ನು ಹೆಚ್ಚಿಸುವ ರಾಜ್ಯದ ಪ್ರಯತ್ನಗಳ ಕುರಿತು ಮಾತುಕತೆ ನಡೆಯಿತು.
ಉದ್ಯಮ ತಜ್ಞರು ಭಾರತದ ಸೌರ ಉತ್ಪಾದನಾ ಕ್ಷೇತ್ರದ ಕುರಿತು ಮಾತನಾಡುತ್ತಾ ಇಪಿಸಿ ಗುಣಮಟ್ಟ, ಹೊಸ ಸೌರ ತಂತ್ರಜ್ಞಾನಗಳು ಮತ್ತು ಸೌರ ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ಎಐ, ಎಸ್ ಸಿ ಎ ಡಿ ಎ ಮತ್ತು ಡ್ರೋನ್ ಗಳ ಪಾತ್ರಗಳ ಕುರಿತು ಚರ್ಚೆ ನಡೆಸಿದರು. ‘ಮೇಕ್ ಇನ್ ಇಂಡಿಯಾ’ ಪಾಲಿಸಿಗಳು ಮತ್ತು ಆಂಟಿ-ಡಂಪಿಂಗ್ ಸುಂಕಗಳ ವಿಚಾರವೂ ಪ್ರಧಾನ ಚರ್ಚೆಯ ವಿಷಯವಾಗಿತ್ತು.
ಕಾರ್ಯಕ್ರಮದಲ್ಲಿ ಉತ್ತಮ ಸಾಧನೆ ಮಾಡಿದ ಕಂಪನಿಗಳು, ವಿನೂತನ ಯೋಜನೆಗಳು ಮತ್ತು ಉದ್ಯಮದ ಪ್ರವರ್ತಕರನ್ನು ಗೌರವಿಸಲಾಯಿತು. ಕರ್ನಾಟಕದ ಸೌರ ವಲಯದ ಬೆಳವಣಿಗೆ ಮತ್ತು ಸುಸ್ಥಿರತೆಯ ಪ್ರಯತ್ನಗಳಿಗೆ ಅವರು ನೀಡಿರುವ ಕೊಡುಗೆಗೆ ಗೌರವ ಸಲ್ಲಿಸಲಾಯಿತು.
ಭಾರತದ ನಂ.1 ಮತ್ತು ಅತ್ಯಂತ ಹಳೆಯ ಸೌರ ಶಕ್ತಿ ಮಾಧ್ಯಮ ಜಾಲವಾದ ಈಕ್ಯೂ ಇಂಟರ್ನ್ಯಾಷನಲ್ ಮ್ಯಾಗಝೀನ್ ಡಿಜಿಟಲ್ ಆವೃತ್ತಿಯ ಮೂಲಕ 400,000ಕ್ಕೂ ಹೆಚ್ಚು ವೃತ್ತಿಪರರನ್ನು ಮತ್ತು ಮುದ್ರಣ ಆವೃತ್ತಿಯ ಮೂಲಕ 75,000 ಓದುಗರನ್ನು ತಲುಪುತ್ತಿದ್ದು, ಉದ್ಯಮದಲ್ಲಿ ಮುಂಚೂಣಿಯಲ್ಲಿದೆ.