ಬೆಂಗಳೂರು: ಮದರಸಾಗಳ ಶಿಕ್ಷಕರು ಕನ್ನಡ ಕಲಿಯುವುದರಿಂದ ಸಂವಹನ, ಬಾಂಧವ್ಯ ಉತ್ತಮಗೊಳ್ಳುವುದು ಎಂದು ವಸತಿ, ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಬಿ.ಜಡ್. ಜಮೀರ್ ಅಹ್ಮದ್ ಖಾನ್ ತಿಳಿಸಿದರು.
ಕೆಎಂಡಿಸಿ ಭವನದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಅರೆಬಿಕ್ ಮದರಸಾಗಳ ಶಿಕ್ಷಕರುಗಳಿಗೆ ಕನ್ನಡ ಕಲಿಸುವ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ನಮಗೆ ನೀಡಿರುವ ಸಂವಿಧಾನದಿಂದ ನಾವು ಇಂದು ಅಸ್ತಿತ್ವದಲ್ಲಿದ್ದೇವೆ. ರಾಜ್ಯದಲ್ಲಿ ಕಲಬುರಗಿ, ಯಾದಗಿರಿ, ಬೀದರ್ ಮುಂತಾದ ಜಿಲ್ಲೆಗಳಲ್ಲಿ ಬಹುತೇಕರಿಗೆ ಕನ್ನಡ ಮಾತನಾಡಲು ಬರುವುದಿಲ್ಲ. ಕರ್ನಾಟಕದಲ್ಲಿ ಆಡು ಭಾಷೆ ಹಾಗೂ ಆಡಳಿತ ಭಾಷೆ ಕನ್ನಡದಲ್ಲಿರುವುದರಿಂದ ಕನ್ನಡ ಕಲಿಯುವುದು ಅತ್ಯವಶ್ಯಕವಾಗಿದೆ ಎಂದರು.
ಈ ನಿಟ್ಟಿನಲ್ಲಿ ರಾಜ್ಯದ ವಿವಿಧ ಅರೇಬಿಕ್ ಮದರಸಾಗಳ 200 ಶಿಕ್ಷಕರಿಗೆ ಕನ್ನಡವನ್ನು ಮೊದಲ ಹಂತವಾಗಿ ಕಲಿಸಿಕೊಡಲಾಗುವುದು. ಇವರಿಗೆ ಒಟ್ಟು 36 ಗಂಟೆಗಳ ಕನ್ನಡ ಪಾಠವನ್ನು 3 ತಿಂಗಳೊಳಗೆ ಹೇಳಿಕೊಡಲಾಗುವುದು. ಮುಂದಿನ ಹಂತದಲ್ಲಿ ಎಲ್ಲಾ ಮದರಸಾಗಳ ಶಿಕ್ಷಕರಿಗೆ ಕನ್ನಡ ಕಲಿಸುವ ಕಾರ್ಯಕ್ರಮ ವಿಸ್ತರಿಸಲಾಗುವುದು. ಮುಂಬರುವ ದಿನಗಳಲ್ಲಿ ಮಸೀದಿ ಗುರುಗಳಿಗೂ ಕನ್ನಡ ಕಲಿಕಾ ತರಗತಿ ನಡೆಸಲಾಗುವುದು. ಇವರು ಕನ್ನಡ ಓದು, ಬರಹವನ್ನು ಕಲಿತರೆ ಕನ್ನಡದಲ್ಲಿ ವ್ಯವಹರಿಸಲು ಸುಲಭವಾಗುತ್ತದೆ. ಇದರಿಂದ ಬಹು ಹಾಗೂ ಅಲ್ಪಸಂಖ್ಯಾತರ ನಡುವಿನ ಭೇದ ಹೋಗಲಾಡಿಸಿ, ಕನ್ನಡ ಭಾಷೆಯನ್ನು ಬಲಪಡಿಸದಂತಾಗುತ್ತದೆ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಅವರು ಮಾತನಾಡಿ, ಇತರ ಭಾಷೆಗಳ ಜೊತೆಗೆ ಕನ್ನಡವನ್ನು ಸಂವಹನ ಭಾಷೆಯಾಗಿ ಕಲಿಯಬೇಕು. ಇದರಿಂದ ನಮಗೆ ಇತರ ಭಾಷಿಕರ ನಡುವೆ ಬಾಂಧವ್ಯ ಹೆಚ್ಚುತ್ತದೆ. ಭಾಷೆಗಳನ್ನು ಜನರು ಪ್ರೀತಿಸಬೇಕು. ಭಾಷೆ ಮೂಲಕ ಯಾರೂ ಸಹ ಅಪಹಾಸ್ಯಕ್ಕೆ ಗುರಿಯಾಗಬಾರದು ಎಂದರು. ಕರ್ನಾಟಕದಲ್ಲಿ ಸುಮಾರು 850 ಕ್ಕೂ ಹೆಚ್ಚು ಮುಸಲ್ಮಾನ ಬರಹಗಾರರಿದ್ದಾರೆ. ಲೇಖಕಿ ಸಾರಾ ಅಬೂಬಕ್ಕರ್, ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರ ಸಾಧನೆ ಅದ್ವಿತೀಯವಾಗಿದೆ. ಮುಂದಿನ 100 ವರ್ಷಗಳಲ್ಲಿ ಬಹಳಷ್ಟು ಭಾಷೆಗಳು ನಶಿಸಿ ಹೋಗುವ ಸಾಧ್ಯತೆ ಇದೆ. ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ನಾವು ತೊಡಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ನಸೀರ್ ಅಹ್ಮದ್, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಿ.ಕೆ.ಅಲ್ತಾಪ್ ಖಾನ್, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ನಿಸಾರ್ ಅಹ್ಮದ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಡಾ.ಸಂತೋಷ್ ಹಾನಗಲ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು