ಬೆಂಗಳೂರು:ಸಾರಿಗೆ ನಿಗಮದಲ್ಲಿ ಕಳೆದ 5,6 ವರ್ಷಗಳಿಂದ ನೇಮಕಾತಿ ಬೇರೆ ಬೇರೆ ಕಾರಣ ಗಳಿಂದ ನಡೆದಿರಲಿಲ್ಲ. ಇದೀಗ ತಾಂತ್ರಿಕ ಸಹಾಯಕ ಹುದ್ದೆಗೆ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳುವ ಮೂಲಕ ತೆರವಾಗಿದ್ದ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲಾಗಿದೆ ಎಂದು ಸಾರಿಗೆ ಹಾಗು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದರು.
ನೇಮಕಗೊಂಡ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ವಿತರಿಸಿ, ಅಭ್ಯರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ನೇಮಕಾತಿಯನ್ನು ಸಂಪೂರ್ಣವಾಗಿ ಪಾರದರ್ಶಕವಾಗಿ ನಡೆಸಿ, ಅಭ್ಯರ್ಥಿಗಳಿಗೆ ಅವರಿಚ್ಚೆಯಂತೆಯೆ ಘಟಕಗಳನ್ನು ಸಹ ಆರಿಸಿಕೊಳ್ಳಲು ಗಣಕೀಕರಣದ ಮೂಲಕ ಅವಕಾಶ ಕಲ್ಪಿಸಲಾಗಿದೆ. ನೇಮಕಗೊಂಡಿರುವ ಸಿಬ್ಬಂದಿಗಳು ಶ್ರಮವಹಿಸಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ನಿಗಮಕ್ಕೆ ಕೀರ್ತಿ ತರುವಂತೆ ತಿಳಿಸಿದರು.
ಸುಮಾರು 8 ವರುಷಗಳ ನಂತರ ನೇಮಕಾತಿ ನಡೆಸಿದೆ, 2016 ರಿಂದ ಇಲ್ಲಿಯವರೆಗೆ 13888 ಸಿಬ್ಬಂದಿಗಳು ನಿವೃತ್ತಿ ಇತರೆ ಕಾರಣಗಳಿಂದ ತೆರವಾಗಿರುವ ಹುದ್ದೆಯನ್ನು ಭರ್ತಿ ಮಾಡಿರಲಿಲ್ಲ. ಇದರಿಂದ ಬಸ್ಸುಗಳ ಸಮರ್ಪಕ ಕಾರ್ಯಚರಣೆಗೆ ತೊಂದರೆಯುಂಟಾಗುತ್ತಿತ್ತು. ಸದರಿ ನೇಮಕಾತಿ ಸ್ವಲ್ಪ ಮಟ್ಟಿಗೆ ನಿಗಮಕ್ಕೆ ಸಹಕಾರಿಯಾಗಲಿದೆ. ಮಾರ್ಚ್ ನಂತರ ಮತ್ತಷ್ಟು ತಾಂತ್ರಿಕ ಸಹಾಯಕ ಸಿಬ್ಬಂದಿಗಳ ನೇಮಕಾತಿಗೆ ಸರ್ಕಾರದಿಂದ ಅನುಮತಿ ಪಡೆಯಲಾಗುವುದು ಎಂದು ತಿಳಿಸಿದರು.
ನಿಗಮದ ಪ್ರಸಕ್ತ ಕಾರ್ಯಾಚರಣೆಯ ಅಂಕಿಅಂಶಗಳ ವಿವರವು ಕೆಳಗಿನಂತಿವೆ.
ವಿಭಾಗಗಳು – 17 ಘಟಕಗಳು – 83 ಬಸ್ಸು ನಿಲ್ದಾಣಗಳು – 175 ಸಾರಿಗೆ ಸೇವೆಗಳು – 7640 ಒಟ್ಟು ಬಸ್ಸುಗಳು – 8358 ಪ್ರತಿನಿತ್ಯ ಕಾರ್ಯಾಚರಿಸಿರುವ ಕಿ.ಮೀ – 27.84 ಲಕ್ಷ ಕಿಮೀ ಪ್ರತಿನಿತ್ಯ ಪ್ರಯಾಣಿಸಿರುವ ಅಂದಾಜು ಒಟ್ಟು ಪ್ರಯಾಣಿಕರ ಸಂಖ್ಯೆ – 32.34 ಲಕ್ಷ, ಶಕ್ತಿ ಯೋಜನೆ- ಪ್ರಯಾಣಿಸುವ ಮಹಿಳೆಯರ ಸಂಖ್ಯೆ -18.40 ಲಕ್ಷ, ಶಕ್ತಿ ಯೋಜನೆ- ಪ್ರಯಾಣಿಸುವ ಮಹಿಳೆಯರ ಟಿಕೇಟ್ ಮೊತ್ತ- 5.48 ಕೋಟಿ, ಒಟ್ಟು ಸಿಬ್ಬಂದಿ – 33932
ಕರಾರಸಾ ನಿಗಮದಲ್ಲಿ ತಾಂತ್ರಿಕ ಸಹಾಯಕ ಹುದ್ದೆಯ ನೇಮಕಾತಿ ಪ್ರಕ್ರಿಯೆ ಕುರಿತು.
ನಿಗಮದಲ್ಲಿ ಪ್ರಸ್ತುತ 4588 ತಾಂತ್ರಿಕ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ 353 ಮಹಿಳಾ ತಾಂತ್ರಿಕ ಸಿಬ್ಬಂದಿಗಳಾಗಿರುತ್ತಾರೆ. ಕೋವಿಡ್-19ರ ಕಾರಣ ಸ್ಥಗಿತಗೊಂಡಿದ್ದ 726 ತಾಂತ್ರಿಕ ಸಹಾಯಕ ಹುದ್ದೆಗಳಲ್ಲಿ 300 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರವು ಸುಮಾರು 08 ( ಕೊನೆಯ ನೇಮಕಾತಿ 2016 ನಡೆದದ್ದು) ವರ್ಷಗಳ ನಂತರ ಅಂದರೆ ದಿನಾಂಕ: 13-10-2023 ರಂದು ಅನುಮತಿ ನೀಡಿರುತ್ತದೆ. ನಿಗಮದ ಪದವೃಂದ & ನೇಮಕಾತಿ ನಿಯಮಾವಳಿಯನ್ವಯ ಸಾಮಾನ್ಯ ಸಾಮಥ್ರ್ಯ ಪರೀಕ್ಷೆಯಲ್ಲಿ ಕನಿಷ್ಟ ಶೇಕಡ 30 ಹಾಗೂ ಅದಕ್ಕಿಂತ ಹೆಚ್ಚಿನ ಅಂಕ ಪಡೆದ ಅಭ್ಯರ್ಥಿಗಳು ಮಾತ್ರ ಮುಂದಿನ ಆಯ್ಕೆ ಪ್ರಕ್ರಿಯೆಗೆ ಅರ್ಹರಿದ್ದು, ಅದರಂತೆ 554 ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.
ಸರ್ಕಾರವು ಅನುಮತಿ ನೀಡಿದ 300 ಹುದ್ದೆಗಳ ನೇಮಕಾತಿಗೆ ನಿಗಮದ ವಿಶೇಷ ನಿರ್ದೇಶಕ ಮಂಡಳಿಯ ಅನುಮೋದನೆ ಪಡೆದು ಅಧಿಸೂಚನೆ ಸಂದರ್ಭದಲ್ಲಿ ಚಾಲ್ತಿಯಲ್ಲಿದ್ದ ಮೀಸಲಾತಿ ನಿಯಮಗಳನ್ವಯ ವರ್ಗವಾರು ಹುದ್ದೆಗಳ ಸಂಖ್ಯೆಯನ್ನು ವಿಂಗಡಣೆ ಮಾಡಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿರುತ್ತದೆ. ಅರ್ಹರಾದ ಅಭ್ಯರ್ಥಿಗಳಿಗೆ ಮೂಲ ದಾಖಲಾತಿ ಮತ್ತು ದೇಹದಾಢ್ರ್ಯತೆ ಪರಿಶೀಲನೆಯನ್ನು ದಿನಾಂಕ: 26-12-2023 ರಿಂದ 28-12-2023 ರವರೆಗೆ ಹಾಗೂ ಹೆಚ್ಚುವರಿಯಾಗಿ (ಗೈರುಹಾಜರಾದ ಅಭ್ಯರ್ಥಿಗಳಿಗೆ) ದಿನಾಂಕ: 03-01-2024 ರಂದು ನಡೆಸಲಾಯಿತು.
ದಿನಾಂಕ: 05-01-2024 ರಂದು 262 ಆಯ್ಕೆಯಾದ ಅಭ್ಯರ್ಥಿಗಳ ಸಂಭವನೀಯ ಆಯ್ಕೆಪಟ್ಟಿಯನ್ನು ಪ್ರಕಟಿಸಿ ಆಕ್ಷೇಪಣೆಗಳಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಸಲ್ಲಿಸಿಲು 7 ದಿನಗಳ ಕಾಲಾವಕಾಶ ನೀಡಲಾಗಿರುತ್ತದೆ.ಸಲ್ಲಿಸಲಾದ ಆಕ್ಷೇಪಣೆಗಳನ್ನು ಪರಿಶೀಲಿಸಿ ಅರ್ಹ ಆಕ್ಷೇಪಣೆಗಳನ್ನು ಪುರಸ್ಕರಿಸಿ ಅಂತಿಮವಾಗಿ ದಿನಾಂಕ: 13-01-2024 ರಂದು 264 ಅಭ್ಯರ್ಥಿಗಳ ಅಂತಿಮ ಆಯ್ಕೆಪಟ್ಟಿ ಪ್ರಕಟಿಸಲಾಗಿರುತ್ತದೆ. ಆಯ್ಕೆಗೊಂಡ ಅಭ್ಯರ್ಥಿಗಳಿಗೆ ದಿನಾಂಕ: 17.01.2024 ರಂದು ಮೆರಿಟ್ ಕಂ ರೋಸ್ಟರ್ ಆಧಾರದ ಮೇಲೆ ನೇರವಾಗಿ ಅವರ ಆಯ್ಕೆಯ ಘಟಕಗಳಿಗೆ ನಿಯೋಜನೆ ಮಾಡಲಾಗಿದೆ.
ಇದೇ ಪ್ರಪ್ರಥಮ ಬಾರಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಗಣಕೀಕೃತ ಕೌನ್ಸಿಲಿಂಗ್ ಮೂಲಕ ನೇರವಾಗಿ ಘಟಕಗಳನ್ನು ಆಯ್ಕೆ ಮಾಡುವ ಅವಕಾಶವನ್ನು ಒದಗಿಸಿ ಕೊಟ್ಟು ಸ್ಥಳ ನಿಯೋಜನೆಯಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಅನುಸರಿಸಲಾಗಿದೆ. ತಾಂತ್ರಿಕ ಸಹಾಯಕರ ನೇಮಕಾತಿ ಪ್ರಕ್ರಿಯೆಯನ್ನು 03 ತಿಂಗಳ ಒಳಗಾಗಿಯೇ ಪೂರ್ಣಗೊಳಿಸಲು ಕ್ರಮವಹಿಸಲಾಗಿದೆ. ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಅಧಿಸೂಚನೆ ಸಂದರ್ಭದಲ್ಲಿ ನಿಗಧಿಪಡಿಸಲಾಗಿದ್ದ 02 ವರ್ಷಗಳ ತರಬೇತಿ ಅವಧಿಯನ್ನು 01 ವರ್ಷಕ್ಕೆ ಇಳಿಕೆ ಮಾಡಲಾಗಿದೆ. ಮುಂದುವರೆದು, ಮಾಹೆಯಾನ ನಿಗಧಿಪಡಿಸಲಾಗಿದ್ದ ತರಬೇತಿ ಭತ್ಯೆಯನ್ನು ರೂ.9,100/- ರಿಂದ ರೂ.14,000/- ಕ್ಕೆ ಏರಿಕೆ ಮಾಡಲಾಗಿದೆ.ನಿಗಮವು 2000 ಚಾಲಕ ಕಂ ನಿರ್ವಾಹಕ ಹುದ್ದೆಯ ನೇಮಕಾತಿಗಾಗಿ ಸದ್ಯದಲ್ಲಿಯೇ ಚಾಲನಾ ಪರೀಕ್ಷೆಗೆ ಕ್ರಮ ಜರುಗಿಸಲಿದೆ.
ಸಮಾರಂಭದಲ್ಲಿ ವಿ.ಅನ್ಬುಕುಮಾರ್, ಭಾ.ಆ.ಸೇ., ವ್ಯವಸ್ಥಾಪಕ ನಿರ್ದೇಶಕರು, ಕ ರಾ ರ ಸಾ ನಿಗಮ, ಡಾ. ನಂದಿನಿ ದೇವಿ. ಕೆ, ಭಾ.ಆ.ಸೇ, ನಿರ್ದೇಶಕರು (ಸಿಬ್ಬಂದಿ ಮಾತ್ತು ಜಾಗೃತೆ), ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪರಿತರಿದ್ದರು.