ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ತನ್ನ 60 ವರ್ಷಗಳ ಸುದೀರ್ಘ ಸೇವೆಯನ್ನು ಪೂರ್ಣಗೊಳಿಸಿ ವಜ್ರ ಮಹೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ 59ನೇ ಘಟಿಕೋತ್ಸವವನ್ನು ವಿಶೇಷವಾಗಿ ಮೇ 15 ರಂದು ಬೆಳಗ್ಗೆ 11.00 ಘಂಟೆಗೆ ಜಿ.ಕೆ.ವಿ.ಕೆ. ಆವರಣದ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರಾಷ್ಟ್ರೀಯ ಸಭಾಂಗಣದಲ್ಲಿ ಆಚರಿಸಲಾಗುತ್ತಿದೆ ಎಂದು ಕುಲಪತಿಗಳಾದ ಡಾ.ಎಸ್.ವಿ.ಸುರೇಶ ಅವರು ತಿಳಿಸಿದರು.
ಪ್ರೆಸ್ ಕ್ಲಬ್ನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರು ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಥಾವರ್ಚಂದ್ ಗೆಹ್ಲೋಟ್ ಘಟಿಕೋತ್ಸವದ ಅಧ್ಯಕ್ಷತೆಯನ್ನು ವಹಿಸಲಿದ್ದು, ಕೃಷಿ ಸಚಿವರು ಹಾಗೂ ಕೃಷಿ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿಗಳಾದ ಎನ್. ಚಲುವರಾಯಸ್ವಾಮಿ ಅವರು ಉಪಸ್ಥಿತರಿರುವರು. ನವದೆಹಲಿಯ ಇಪ್ಕೋ ವ್ಯವಸ್ಥಾಪಕ ನಿರ್ದೆಶಕರಾದ ಡಾ. ಯು.ಎಸ್. ಅವಸ್ಥಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಘಟಿಕೋತ್ಸವದ ಭಾಷಣ ಮಾಡಲಿರುವರು.
1271 ವಿದ್ಯಾರ್ಥಿಗಳಿಗೆ ವಿವಿಧ ಸ್ನಾತಕ, ಸ್ನಾತಕೋತ್ತರ ವಿಷಯಗಳಲ್ಲಿ ಪದವಿ ಪ್ರದಾನ
59ನೇ ಘಟಿಕೋತ್ಸವದಲ್ಲಿ 2023-24 ಶೈಕ್ಷಣಿಕ ವರ್ಷದಲ್ಲಿ ತೇರ್ಗಡೆಯಾದ ಒಟ್ಟಾರೆ 1271 ವಿದ್ಯಾರ್ಥಿಗಳಿಗೆ ವಿವಿಧ ಸ್ನಾತಕ ಹಾಗೂ ಸ್ನಾತಕೋತ್ತರ ವಿಷಯಗಳಲ್ಲಿ ಪದವಿ ಪ್ರದಾನ ಮಾಡಲಾಗುವುದು. ಅದರಲ್ಲಿ, 871 ವಿದ್ಯಾರ್ಥಿಗಳು ವಿವಿಧ ಸ್ನಾತಕ ಪದವಿಗಳನ್ನು, 311 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಹಾಗೂ 89 ವಿದ್ಯಾರ್ಥಿಗಳು ಡಾಕ್ಟೊರಲ್ ಪದವಿಗಳನ್ನು ಪಡೆಯಲಿದ್ದಾರೆ.
ಸಮಾರಂಭದಂದು, ಡಾಕ್ಟರ್ ಆಫ್ ಫಿಲಾಸೊಫಿ ಪದವಿಯಲ್ಲಿ ಒಟ್ಟು 30 ಚಿನ್ನದ ಪದಕಗಳನ್ನು ಪ್ರದಾನ ಮಾಡಲಿದ್ದು, ಅದರಲ್ಲಿ 13 ವಿದ್ಯಾರ್ಥಿನಿಯರು ಹಾಗೂ 03 ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾನಿಲಯದ 14 ಚಿನ್ನದ ಪದಕಗಳನ್ನು, 10 ದಾನಿಗಳ ಚಿನ್ನದ ಪದಕಗಳು, 05 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರ ಹಾಗೂ 01 ಆವರಣದ ಚಿನ್ನದ ಪದಕಗಳನ್ನು ಹಂಚಿಕೊಂಡಿರುತ್ತಾರೆ.
ಸ್ನಾತಕೋತ್ತರ ಪದವಿಯಲ್ಲಿ ಒಟ್ಟು 62 ಚಿನ್ನದ ಪದಕಗಳನ್ನು ಪ್ರದಾನ ಮಾಡಲಿದ್ದು, ಇದರಲ್ಲಿ 23 ವಿದ್ಯಾರ್ಥಿನಿಯರು ಹಾಗೂ 05 ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾನಿಲಯ ನೀಡುವ 17 ಚಿನ್ನದ ಪದಕಗಳು ಹಾಗೂ 07 ಆವರಣದ ಚಿನ್ನದ ಪದಕಗಳನ್ನು, 25 ದಾನಿಗಳ ಚಿನ್ನದ ಪದಕಗಳು ಹಾಗೂ 13 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಹಂಚಿಕೊಂಡಿರುತ್ತಾರೆ.
ಸ್ನಾತಕ ಪದವಿಯಲ್ಲಿ ಒಟ್ಟು 58 ಚಿನ್ನದ ಪದಕಗಳ ಪ್ರದಾನ
ಇದಲ್ಲದೆ, ಸ್ನಾತಕ ಪದವಿಯಲ್ಲಿ ಒಟ್ಟು 58 ಚಿನ್ನದ ಪದಕಗಳನ್ನು ಪ್ರದಾನ ಮಾಡಲಿದ್ದು, ಇದರಲ್ಲಿ 13 ವಿದ್ಯಾರ್ಥಿನಿಯರು ಹಾಗೂ 06 ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾನಿಲಯ ನೀಡುವ 06 ಚಿನ್ನದ ಪದಕಗಳು, 04 ಆವರಣದ ಚಿನ್ನದ ಪದಕಗಳು, 01 ಕೃವಿವಿಯ ಕ್ರೀಡಾ ಚಿನ್ನದ ಪದಕ, 41 ದಾನಿಗಳ ಚಿನ್ನದ ಪದಕಗಳು ಹಾಗೂ 06 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಹಂಚಿಕೊಂಡಿರುತ್ತಾರೆ.
ಸಮಾರಂಭದಲ್ಲಿ ಒಟ್ಟಾರೆ 150 ಚಿನ್ನದ ಪದಕ ಹಾಗೂ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿದ್ಯಾರ್ಥಿಗಳು ಪಡೆಯಲಿದ್ದು ಅದರಲ್ಲಿ 49 ವಿಧ್ಯಾರ್ಥಿನಿಯರಿಗೆ ವಿಶ್ವವಿದ್ಯಾನಿಲಯದ 29 ಚಿನ್ನದ ಪದಕ, 66 ದಾನಿಗಳ ಚಿನ್ನದ ಪದಕ, 09 ಆವರಣದ ಚಿನ್ನದ ಪದಕ ಹಾಗೂ 19 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಅದರಂತೆ 14 ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯದ 08 ಚಿನ್ನದ ಪದಕ, 10 ದಾನಿಗಳ ಚಿನ್ನದ ಪದಕ ಹಾಗೂ 05 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು, 03 ಆವರಣದ ಚಿನ್ನದ ಪದಕಗಳು ಹಾಗೂ 01 ಕೃವಿವಿಯ ಕ್ರೀಡಾ ಚಿನ್ನದ ಪದಕಗಳನ್ನು ವಿತರಿಸಲಾಗುವುದು.
ಒಟ್ಟು 63 ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯದ 50 ಚಿನ್ನದ ಪದಕಗಳನ್ನು, 76 ದಾನಿಗಳ ಚಿನ್ನದ ಪದಕಗಳನ್ನು (50+76=126) ಹಾಗೂ 24 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು. ಬಿ.ಎಸ್ಸಿ (ಆನರ್ಸ್), ಕೃಷಿ ಪದವಿಯಲ್ಲಿ ಕೃಷಿ ಕಾಲೇಜು, ಜಿಕೆವಿಕೆ, ಬೆಂಗಳೂರಿನ ವಿದ್ಯಾರ್ಥಿನಿಯಾದ ಕುಮಾರಿ. ದೀಪ್ತಿ ಟಿ ಎಲ್ ಅತಿ ಹೆಚ್ಚು ಅಂದರೆ 13 ಚಿನ್ನದ ಪದಕಗಳು ಹಾಗೂ 4 ದಾನಿಗಳ ಪ್ರಮಾಣ ಪತ್ರಗಳನ್ನು ಪಡೆದುಕೊಂಡಿರುತ್ತಾರೆ.
ಕೃಷಿ ವಿ.ವಿ. ಬೆಂಗಳೂರಿನ 59 ನೇ ಘಟಿಕೋತ್ಸವಕ್ಕೆ ವಿಶ್ವವಿದ್ಯಾನಿಲಯ ಸಕಲ ರೀತಿಯಲ್ಲಿ ಸಜ್ಜಾಗಿದ್ದು ಕಾರ್ಯಕ್ರಮದಲ್ಲಿ ವಿ.ವಿ.ಆಡಳಿತ ಮಂಡಳಿ ಸದಸ್ಯರು, ವಿಶೇಷ ಆಹ್ವಾನಿತರು, ಅಧಿಕಾರಿಗಳು, ಶಿಕ್ಷಣ ಪರಿಷತ್ ಸದಸ್ಯರು, ವಿಶ್ರಾಂತ ಕುಲಪತಿಗಳು, ಪೋಷಕರು ಮತ್ತು ವಿಶ್ವವಿದ್ಯಾನಿಲಯದ ಸಿಬ್ಬಂದಿ ವರ್ಗದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.