ನವದೆಹಲಿ:ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಿಳಿಸಿರುವಂತೆ; ರಾಜ್ಯ ರಾಜಕೀಯ ಪರಿಸ್ಥಿತಿಯ ಜತೆಗೆ ಕೊಬರಿ ಖರೀದಿ, ಕಾಡುಗೊಲ್ಲ ಜಾತಿಗೆ ಮೀಸಲಾತಿ ಸೌಲಭ್ಯ ಹಾಗೂ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಮಾಜಿ ಪ್ರಧಾನಿಗಳು ಮೋದಿ ಅವರ ಜತೆ ಚರ್ಚೆ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಭೇಟಿ ಸಂಸತ್ ಭವನದ ಪ್ರಧಾನಿಗಳ ಕಾರ್ಯಾಲಯದಲ್ಲಿ ನಡೆಯಿತು.
ಇದೇ ವೇಳೆ ಕೊಬರಿಗೆ ಬೆಂಬಲ ಬೆಲೆ ನೀಡುವುದು ಹಾಗೂ ನಾಫೆಡ್ ಮೂಲಕ ಖರೀದಿ ಮಾಡಬೇಕು ಎಂಬ ಬಗ್ಗೆ ಪ್ರಧಾನಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಬಗ್ಗೆ ಪ್ರಧಾನಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.ಬಳಿಕ ಮಾಜಿ ಮುಖ್ಯಮಂತ್ರಿ ಕುಮಾಸ್ವಾಮಿ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ನಿಖಿಲ್ ಕುಮಾರಸ್ವಾಮಿ ಪ್ರಚಾರ ಮಾಡುತ್ತಾರೆ:
ನಿಖಿಲ್ ಕುಮಾರಸ್ವಾಮಿ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರಾ? ಎನ್ನುವ ಪ್ರಶ್ನೆಗೆ ಉತ್ತರ ನೀಡಿದ ಮಾಜಿ ಮುಖ್ಯಮಂತ್ರಿಗಳು; ನಿಖಿಲ್ ಅವರು ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿಯೂ ಪ್ರಚಾರ ಮಾಡುತ್ತಾರೆ. ಯಾವುದೇ ಕಾರಣಕ್ಕೂ ಅವರು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಆದರೆ, ಜನರು ಚುನಾವಣೆಗೆ ನಿಲ್ಲಿ ಎಂದು ಹೇಳುತ್ತಿದ್ದಾರೆ. ಮಂಡ್ಯ ಕ್ಷೇತ್ರದಿಂದಲೇ ಕಣಕ್ಕೆ ಇಳಿಯಲಿ ಎಂದು ಬಯಸುತ್ತಿದ್ದಾರೆ. ಎರಡು ಬಾರಿ ಅವರು ಸೋತಿದ್ದಾರೆ. ಹೀಗಾಗಿ ಜನರ ಅನುಕಂಪವೂ ಇದೆ. ಆದರೆ, ಅವರಿಗೆ ಸ್ಪರ್ಧೆ ಮಾಡುವ ಉದ್ದೇಶವಿಲ್ಲ ಎಂದು ತಿಳಿಸಿದರು.
ಜನವರಿ ಅಂತ್ಯದ ಹೊತ್ತಿಗೆ ಕ್ಷೇತ್ರ ಹಂಚಿಕೆ:
ಜೆಡಿಎಸ್ ಮತ್ತು ಬಿಜೆಪಿ ನಡುವೆ ಕ್ಷೇತ್ರ ಹಂಚಿಕೆ ವಿಚಾರದಲ್ಲಿ ಯಾವುದೇ ಸಮಸ್ಯೆ, ಗೊಂದಲ ಇಲ್ಲ. ಯಾವ ಯಾವ ಕ್ಷೇತ್ರದಲ್ಲಿ ಯಾರು ಯಾರು ಸ್ಪರ್ಧೆ ಮಾಡುತ್ತಾರೆ ಎನ್ನುವುದನ್ನು ನಾವೇ ಪರಸ್ಪರ ಕೂತು ಅಂತಿಮಗೊಳಿಸುತ್ತೇವೆ. ಆ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ಒಂದು ಕ್ಷೇತ್ರ ಹೆಚ್ಚೂ ಕಡಿಮೆ ಆಗಬಹುದು ಅಷ್ಟೇ. ಅದರಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ಮುಖ್ಯವಾಗಿ ಪರಸ್ಪರ ವಿಶ್ವಾಸ ಬೇಕು ಅಷ್ಟೇ, ಅದನ್ನು ನಾವು ಉಳಿಸಿಕೊಳ್ಳಬೇಕು. ಅದಕ್ಕೆ ಏನೆಲ್ಲಾ ಮಾಡಬೇಕೋ ಅದನ್ನು ಮಾಡುತ್ತೇನೆ. ಜನವರಿ ಅಂತ್ಯದ ಒಳಗೆ ನಾವು ಎಲ್ಲಾ ನಿರ್ಧಾರ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ನೀವು ಎಷ್ಟು ಕ್ಷೇತ್ರ ಕೇಳುತ್ತಿದ್ದೀರಿ? ಎನ್ನುವ ಪ್ರಶ್ನೆಗೂ ಉತ್ತರ ಕೊಟ್ಟ ಕುಮಾರಸ್ವಾಮಿ ಅವರು; ನಾವು ಎಷ್ಟು ಗೆಲ್ಲುತ್ತೇವೆ ಎನ್ನುವ ಕಡೆಯಷ್ಟೇ ನಾವು ಕೇಳುತ್ತೇವೆ. ನಾವು ಎಲ್ಲೆಲ್ಲಿ ಗೆಲ್ಲುತ್ತೇವೆ ಅಂತ ನಮ್ಮ ಬಳಿ ರಿಪೋರ್ಟ್ ಇದೆ. ಆ ರಿಪೋರ್ಟ್ ಪ್ರಕಾರ ನಾವು ಕೆಲಸ ಮಾಡುತ್ತೇವೆ. ಇಲ್ಲಿ ಸೀಟ್ ಹಂಚಿಕೆ ಒಂದೇ ಪ್ರಮುಖ ಅಲ್ಲಾ. ನಾವು ಪರಸ್ಪರ ವಿಶ್ವಾಸ, ನಂಬಿಕೆಯಿಂದ ಕೆಲಸ ಮಾಡುತ್ತೇವೆ. ಮೂರನೇ ಅವಧಿಗೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಲು ನಾವೆಲ್ಲಾ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.
ಲೋಕಸಭೆ ಚುನಾವಣೆಗೆ ನಿಲ್ಲಲ್ಲ ಎಂದ ಹೆಚ್ಡಿಕೆ:
ತಮ್ಮ ಸ್ಪರ್ಧೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿದ ಅವರು; ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಉದ್ದೇಶ ನನ್ನ ಮುಂದೆ ಇಲ್ಲ. ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿ ಬರುತ್ತಿದೆ. ಅದು ನಮ್ಮ ಜನರು, ಕಾರ್ಯಕರ್ತರು ಹಾಗೆ ಭಾವನೆ ಮಾಡುವುದಕ್ಕೆ ಕಾರಣವಾಗಿದೆ. ನಾನೇನಿದ್ದರೂ ರಾಜ್ಯ ರಾಜಕಾರಣಕ್ಕೆ ಸೀಮಿತ. ನಾನು ಇಲ್ಲಿಯೇ ಇದ್ದರೆ ರಾಜ್ಯಕ್ಕೆ ಒಳ್ಳೆಯದು ಎನ್ನುವುದು ಅನೇಕ ಜನರ ಅಭಿಪ್ರಾಯ, ನನ್ನ ಅಭಿಪ್ರಾಯವೂ ಅದೇ ಆಗಿದೆ. ನಾನು ಕರ್ನಾಟಕದಲ್ಲೇ ಇರಲು ತೀರ್ಮಾನ ಮಾಡಿದ್ದೇನೆ ಎಂದರು.
ಕುಮಾರಸ್ವಾಮಿ ಅವರು ಸೆಂಟ್ರಲ್ ಮಿನಿಸ್ಟರ್ ಆಗ್ತಾರಾ? ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದ ಕುಮಾರಸ್ವಾಮಿ ಅವರು; ಯಾರ ಹಣೆಯ ಮೇಲೆ ಏನ್ ಬರೆದಿದೆಯೋ ಅಂತ ಗೊತ್ತಿಲ್ಲಾ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಕಾದು ನೋಡೋಣ, ಮುಂದೆ ಏನೇನು ನಡೆಯುತ್ತೋ ಎಂದರು.
ಕರ್ನಾಟಕದಲ್ಲಿ ರಾಜಕೀಯ ಪರಿಸ್ಥಿತಿ ಹಾಗೂ ಲೋಕಸಭೆ ಚುನಾವಣೆಯ ನಂತರ ರಾಜ್ಯ ಕಾಂಗ್ರೆಸ್ ಸರಕಾರ ಉರುಳುತ್ತಾ ಎನ್ನುವ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು; ಕರ್ನಾಟದ ರಾಜಕೀಯದಲ್ಲಿ ಶಿಂಧೆಯೂ ಇದ್ದಾರೆ, ಅಜೀತ್ ಪವಾರ್ ಸಹ ಇದ್ದಾರೆ. ಯಾರು ಮೊದಲು ಮುಂದೆ ಬರುತ್ತಾರೋ ಕಾದು ನೋಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ಏನು ಬೇಕಾದರೂ ಆಗಬಹುದು ಎಂದು ಮಾರ್ಮಿಕವಾಗಿ ಉತ್ತರ ಕೊಟ್ಟರು.
ಪ್ರಧಾನಿಗಳ ಭೇಟಿ ಬಗ್ಗೆ ಹೆಚ್ಡಿಕೆ ಹರ್ಷ:
ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇವೇಗೌಡರು, ನಾನು, ಪ್ರಜ್ವಲ್, ರೇವಣ್ಣ, ಬಾಲಕೃಷ್ಣ ಭೇಟಿ ಮಾಡಿದ್ದೆವು. ಪ್ರತ್ಯೇಕವಾಗಿ ಪ್ರಧಾನಿಗಳ ಜತೆ ದೇವೇಗೌಡರು ಮತ್ತು ನಾನು ಬಹಳಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡಿದೆವು. ಮೋದಿ ಅವರು ದೇವೇಗೌಡರ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಮೋದಿಯವರು ನಮ್ಮ ಕುಟುಂಬದ ಬಗ್ಗೆ ಇಟ್ಟಿರುವ ವಿಶ್ವಾಸ ಇವತ್ತಿಗೂ ಕಡಿಮೆಯಾಗಿಲ್ಲ. ನಾನು ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಮೋದಿ ಅವರು ಹಲವಾರು ಉತ್ತಮ ಸಲಹೆಗಳನ್ನು ನೀಡಿದ್ದರು ಎಂದು ಸಂತಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಡೆ ಬಗ್ಗೆ ಕಟು ಟೀಕೆ:
ಸಂಸತ್ ಭವನದಲ್ಲಿ ಯುವಕರು ಹೊಗೆ ಬಿಟ್ಟ ಪ್ರಕರಣವನ್ನೇ ದೊಡ್ಡದು ಮಾಡಿ ಕಾಂಗ್ರೆಸ್ ಪಕ್ಷ ಸಂಸತ್ ಕಲಾಪವನ್ನು ಹಾಳು ಮಾಡುತ್ತಿರುವುದು ಸರಿಯಲ್ಲ. ಈ ವಿಚಾರದಲ್ಲಿ ವಿಪಕ್ಷಗಳ ನಡೆ ಸರಿ ಇಲ್ಲ. ಖರ್ಗೆ, ಸಿದ್ದರಾಮಯ್ಯ ಅವರಿಗೆ ನಾನು ಕೇಳಬಯಸುತ್ತೇನೆ, ಸಂಸತ್ ಘಟನೆಯನ್ನೇ ಭದ್ರತಾ ವೈಫಲ್ಯ ಅನ್ನುವುದಾದರೆ ವಿಧಾನಸಭೆಯ ಅಧಿವೇಶನದ ವೇಳೆ ಒಬ್ಬ ವ್ಯಕ್ತಿ ಸದನದ ಒಳಕ್ಕೆ ಬಂದು ಒಂದೂವರೆ ಗಂಟೆ ಕಲಾಪದಲ್ಲಿ ಭಾಗಿಯಾಗಿದ್ದ. ಅದನ್ನು ಏನೆಂದು ಕರೆಯಬೇಕು ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು ಕುಮಾರಸ್ವಾಮಿ ಅವರು.
ಈ ವೈಫಲ್ಯದ ಬಗ್ಗೆ ಯಾಕೆ ಚರ್ಚೆ ಮಾಡುತ್ತಿಲ್ಲ ಕಾಂಗ್ರೆಸ್ಸಿಗರು? ಎಂದ ಕೇಳಿದ ಮಾಜಿ ಮುಖ್ಯಮಂತ್ರಿಗಳು; ಇದೇ ವಿಧಾನಸಭೆಯ ಕಳೆದ ಕಲಾಪದಲ್ಲಿ ಸಭಾಧ್ಯಕ್ಷರ ಮೇಲೆ ಪೇಪರ್ ಎಸೆದರು ಎಂದು ವಿಪಕ್ಷಗಳ ಶಾಸಕರನ್ನು ಸದನದಿಂದ ಹೊರ ಹಾಕಿದ್ದರು. ಅದನ್ನು ಏನೆಂದು ಕರೆಯುತ್ತಾರೆ? ಅದು ಯಾವ ರಾಜಕೀಯ? ಒಬ್ಬ ದಲಿತ ಉಪಾಧ್ಯಕ್ಷರು ಅಂಥ ಹೇಳಿ ಶಾಸಕರನ್ನು ಸದನದಿಂದ ಹೊರ ಹಾಕಿದ್ದರು ಕರ್ನಾಟಕದಲ್ಲಿ. ಇದರ ಬಗ್ಗೆ ಯಾಕೆ ಪ್ರಶ್ನೆ ಮಾಡುತ್ತಿಲ್ಲ ಖರ್ಗೆಯವರೇ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಹೆಚ್.ಡಿ.ರೇವಣ್ಣ, ಮಾಜಿ ಸಂಸದರಾದ ಕುಪೇಂದ್ರ ರೆಡ್ಡಿ, ಸಂಸದರಾದ ಪ್ರಜ್ವಲ್ ರೇವಣ್ಣ, ಶಾಸಕರಾದ ಸಿ.ಎನ್.ಬಾಲಕೃಷ್ಣ ಜತೆಯಲ್ಲಿದ್ದರು.