ವೇಗವಾಗಿ ನುಗ್ಗುತ್ತಿರುವ ರೈಲಿನ ಕಿಟಕಿಯಿಂದ ಹೊರಗಡೆ ನೋಡುತ್ತಿದ್ದಾರೆ ಆತ. ಹೊರಗಿನ ಹಸಿರು ಹೊಲ ಗದ್ದೆಗಳು, ಗಿಡಮರಗಳು, ಇದಾವುದೂ ಆತನ ಮುಖದಲ್ಲಿ ದಟ್ಟವಾಗಿ ಮೂಡಿರುವ ಚಿಂತೆಯ ಗೆರೆಗಳನ್ನು ಅಳಿಸುತ್ತಿಲ್ಲ. ಇಳಿ ವಯಸ್ಸಿನ ಆತನ ಪತ್ನಿಯು ವಿಚಿತ್ರ ಖಾಯಿಲೆಯಿಂದ ನರಳುತ್ತಾ ಹಾಸಿಗೆ ಹಿಡಿದಿದ್ದಾರೆ. ಬೆಂಗಳೂರಿನ ಯಾವ ವೈದ್ಯರು ನೀಡಿದ ಔಷಧಿಯೂ ಪರಿಣಾಮ ಬೀರುತ್ತಿಲ್ಲ. ಸ್ನೇಹಿತರೊಬ್ಬರ ಸಲಹೆಯ ಮೇರೆಗೆ ಹೈದರಾಬಾದಿನ ವೈದ್ಯರೊಬ್ಬರನ್ನು ಭೇಟಿಮಾಡಿ, ರೈಲಿನಲ್ಲಿ ಬೆಂಗಳೂರಿಗೆ ಹಿಂತಿರುಗುತ್ತಿದ್ದಾರೆ ಆತ. ಪತ್ನಿಯ ಆರೈಕೆಗೆ ಸಹಾಯಕರೊಬ್ಬರನ್ನು ನೇಮಿಸಿ ಬಂದಿದ್ದಾರೆ. ಆದಷ್ಟು ಬೇಗ ಮನೆಗೆ ತೆರಳುವ ತವಕ.
ತುಂಗಭದ್ರಾ ನಿಲ್ದಾಣವನ್ನು ಸಮೀಪಿಸುತ್ತಿದೆ ರೈಲು. ಸಹ ಪ್ರಯಾಣಿಕರಲ್ಲಿ ಹಬ್ಬದ ಸಡಗರ. “ರಾಘವೇಂದ್ರ ರಾಘವೇಂದ್ರ” ಎಂಬ ನಾಮ ಘೋಷ ರೈಲಿನ ತುಂಬೆಲ್ಲಾ ಮೊಳಗುತ್ತಿದೆ. ರಾಘವೇಂದ್ರ ಸ್ವಾಮಿಗಳ ಹೆಸರೇ ಕೇಳಿರದ ಆತ ಕುತೂಹಲದಿಂದ ಸಹ ಪ್ರಯಾಣಿಕರೊಬ್ಬರನ್ನು ವಿಚಾರಿಸಿದರು “ಯಾಕಿಷ್ಟು ಸಡಗರ? ಯಾರೀ ರಾಘವೇಂದ್ರ?”. ಆ ಸಹ ಪ್ರಯಾಣಿಕ ಮುಗುಳ್ನಕ್ಕು “ಭವದ ರೋಗಗಳೆಲ್ಲವನ್ನೂ ನಾಶ ಮಾಡುವ ವೈದ್ಯ ಆ ರಾಘವೇಂದ್ರ. ಅವರ ದರುಶನಕ್ಕಾಗಿ ನಾವೆಲ್ಲಾ ಹೊರಟಿದ್ದೇವೆ. ತುಂಗಭದ್ರಾ ತಟದಲ್ಲಿರುವ ಮಂತ್ರಾಲಯ ಎಂಬಲ್ಲಿ ಅವರ ವಾಸ್ತವ್ಯ.” ಎಂದರು. ಪತ್ನಿಯ ಖಾಯಿಲೆಯಿಂದ ಚಿಂತಾಕ್ರಾಂತರಾಗಿದ್ದ ಆತನಿಗೆ ಆ ಮಾತುಗಳು ಹೊಸ ಚೈತನ್ಯವನ್ನು ಮೂಡಿಸಿದವು. “ಎಂತಹ ಖಾಯಿಲೆಗಾದರೂ ಔಷಧ ಕೊಡುತ್ತಾರೆಯೇ ಅವರು?” ಎಂದು ಆಸೆಯಿಂದ ಕೇಳಿದರು. ಸಹಪ್ರಯಾಣಿಕರು ನಗುತ್ತಾ “ರಾಘವೇಂದ್ರ ರಾಯರು ವಾಸಿ ಮಾಡದ ಖಾಯಿಲೆಯೇ ಇಲ್ಲ. ಅವರ ದರುಶನಕ್ಕಾಗಿ ಹೊರಟಿರುವ ಈ ಸಹಸ್ರಾರು ಪ್ರಯಾಣಿಕರನ್ನು ನೋಡಿ. ಅಂತಹ ಪ್ರಸಿದ್ಧ ವೈದ್ಯರು ನಮ್ಮ ಗುರುರಾಜರು ” ಎಂದರು. ಗುರುರಾಜರನ್ನೊಮ್ಮೆ ಭೇಟಿ ಮಾಡಿ ಪತ್ನಿಯ ಖಾಯಿಲೆಗೆ ಔಷಧವನ್ನು ತೆಗೆದು ಕೊಂಡು ಹೋಗೋಣವೆಂದು ಆತನೂ ರೈಲಿಂದ ಇಳಿದು, ಸಹಸ್ರಾರು ಭಕ್ತರ ಜೊತೆಗೂಡಿ ತಾವೂ ಮಂತ್ರಾಲಯಕ್ಕೆ ಆಗಮಿಸಿದರು.
ತುಂಗಭದ್ರೆಯಲ್ಲಿ ಸ್ನಾನ ಆಹ್ನೀಕಗಳಾದವು. “ಎಲ್ಲಿರುತ್ತಾರೆ ಗುರುರಾಜರು” ಎಂದು ಅಲ್ಲಿದ್ದವರನ್ನು ಕೇಳಿದಾಗ “ಇಲ್ಲೇ ಮಠದಲ್ಲಿದ್ದಾರೆ ಬನ್ನಿ” ಎಂದು ಕರೆದೊಯ್ದು” ಅದರೊಳಗಿದ್ದಾರೆ ನಮ್ಮ ಗುರುರಾಜರು. ಭಕ್ತಿಯಿಂದ ಕೈ ಮುಗಿದು ಕೇಳಿದವರಿಗೆ ಇಷ್ಟಾರ್ಥಗಳನ್ನು ಕರುಣಿಸುತ್ತಾರೆ” ಎಂದು ಬೃಂದಾವನವನ್ನು ತೋರಿಸಿದರು. ಯಾವುದೋ ಹಿರಿಯ ವೈದ್ಯರನ್ನು ಕಾಣುವೆನೆಂದು ಆಸೆಯಿಂದ ಬಂದಿದ್ದ ಆತನಿಗೆ ಆ ಕಲ್ಲು ಬೃಂದಾವನವನ್ನು ನೋಡಿ ನಿರಾಸೆಯಾಯಿತು. ನಾಸ್ತಿಕರಾದ ಆತನಿಗೆ ದೇವರು ಗುರುಗಳ ಬಗ್ಗೆ ನಂಬಿಕೆ ಕಡಿಮೆ. ಊಟವನ್ನು ಮುಗಿಸಿ, ವಿಶ್ರಾಂತಿ ತೆಗೆದುಕೊಂಡು, ಊಟದ ಕಾಣಿಕೆಯಾಗಿ ಹುಂಡಿಗೆ ನಾಲ್ಕಾಣಿ (ಇಪ್ಪತೈದು ಪೈಸೆ) ಹಾಕಿ, ರಾತ್ರಿಯ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
ಬೆಳಗಿನ ಜಾವ ಬೆಂಗಳೂರು ತಲುಪಿ ಮನೆಯ ಬಾಗಿಲನ್ನು ತಟ್ಟಿದರು. ಬಾಗಿಲು ತೆರೆಯಿತು. ಏನಾಶ್ಚರ್ಯ! ಆತನ ಪತ್ನಿಯೇ ಬಂದು ಬಾಗಿಲು ತೆರೆದಿದ್ದಾರೆ!! ಹಲವು ತಿಂಗಳುಗಳಿಂದ ಹಾಸಿಗೆ ಹಿಡಿದಿರುವ ಪತ್ನಿ ತಾನೇ ನಡೆಯುತ್ತಿದ್ದಾಳೆ. ಅವರಿಗೆ ತಮ್ಮ ಕಣ್ಣುಗಳನ್ನು ನಂಬಲಾಗಲಿಲ್ಲ. “ಹಾಸಿಗೆಯಿಂದ ಕದಲಲಾಗದ ನೀನು ನಡೆಯುತ್ತಿರುವೆಯಲ್ಲಾ, ಹೇಗೆ?” ಎಂದು ಪ್ರಶ್ನಿಸಿದರು. ಗಂಡನ ಪ್ರಶ್ನೆಯಿಂದ ಆಶ್ಚರ್ಯಗೊಂಡ ಆಕೆ “ನಿನ್ನೆ ಸಂಜೆ ಮನೆಗೆ *ಗುರುರಾಜರಾವ್ಎಂಬ ವೈದ್ಯರು ಬಂದಿದ್ದರು. ನೀವೇ ಮನೆ ವಿಳಾಸವನ್ನು ಕೊಟ್ಟು ಕಳುಹಿಸಿದ್ದಿರಂತೆ. ಇಂಜೆಕ್ಷನ್ ಒಂದನ್ನು ನೀಡಿದರು. ತಕ್ಷಣವೇ ನಾನು ಮೊದಲಿನಂತಾದೆ. ಅವರ ಶುಲ್ಕ (ಫೀಸ್) ಒಂದು ರೂಪಾಯಿಯಂತೆ. ನೀವು ನಿನ್ನೆಯೇ ನಾಲ್ಕಾಣಿ (ಇಪ್ಪತೈದು ಪೈಸೆಗಳು) ಮುಂಗಡವಾಗಿ ಪಾವತಿಸಿದ್ದೀರಂತೆ. ಉಳಿದ ಹನ್ನೆರಡಾಣಿ (ಎಪ್ಪತ್ತೈದು ಪೈಸೆಗಳು) ನನಗೆ ತಲುಪಿಸುವಂತೆ ನಿನ್ನ ಗಂಡನಿಗೆ ಹೇಳು ಎಂದರು”.
ಹೆಂಡತಿಯ ಮಾತುಗಳನ್ನು ಕೇಳಿ ಸ್ತಂಭೀಭೂತರಾಗಿ ಬಾಗಿಲಲ್ಲೇ ನಿಂತುಬಿಟ್ಟರು ಆತ. ಆಗ ಪತ್ನಿಯು ಆತನ ಕೈ ಹಿಡಿದು ಮನೆಯೊಳಗೆ ಕರೆದೊಯ್ದು “ವೈದ್ಯರು ನನಗೆ ಇಂಜೆಕ್ಷನ್ ನೀಡಿದ ನಂತರ ಸಿರಿಂಜನ್ನು ಇಲ್ಲೇ ಮರೆತು ಹೋಗಿದ್ದಾರೆ. ನೀವು ಅವರಿಗೆ ಉಳಿದ ಶುಲ್ಕವನ್ನು ಕೊಡುವಾಗ ಸಿರಿಂಜನ್ನು ಅವರಿಗೇ ತಲುಪಿಸಿ ಬಿಡಿ” ಎಂದರು. ಕೂಡಲೇ ಆತ ಸಿರಿಂಜನ್ನು ಕಣ್ಣಿಗೊತ್ತಿಕೊಂಡು, ತಲೆಯ ಮೇಲಿಟ್ಟುಕೊಂಡು ಧಾರಾಕಾರವಾಗಿ ಕಣ್ಣೀರು ಸುರಿಸುತ್ತಾ ಅಲ್ಲಿಯೇ ಕುಳಿತುಬಿಟ್ಟರು. ಗಂಡನ ವಿಚಿತ್ರ ವರ್ತನೆಯನ್ನು ನೋಡಿ ಗಾಬರಿಗೊಂಡು ಬಿಟ್ಟರು ಆಕೆ. ಸ್ವಲ್ಪ ಸಮಯದ ನಂತರ ಆತ ಯಥಾಸ್ಥಿತಿಗೆ ಬಂದು ತಾವು ಯಾವುದೋ ದೊಡ್ಡ ವೈದ್ಯರಿರಬಹುದೆಂಬ ಆಸೆಯಿಂದ ಮಂತ್ರಾಲಯಕ್ಕೆ ತೆರೆಳಿದ್ದು, ಅಲ್ಲಿ ರಾಯರ ಬೃಂದಾವನವನ್ನು ನೋಡಿದ್ದು, ಊಟದ ಕಾಣಿಕೆಯಾಗಿ ನಾಲ್ಕಾಣಿಯನ್ನು (ಇಪ್ಪತೈದು ಪೈಸೆಗಳು) ಹುಂಡಿಗೆ ಹಾಕಿ ಬೆಂಗಳೂರಿಗೆ ಮರಳಿದ್ದು, ಹೀಗೆ ಎಲ್ಲ ಘಟನೆಗಳನ್ನೂ ವಿವರಿಸಿದರು. “ಮಂತ್ರಾಲಯದ ಆ ಗುರುರಾಜರೇ ನಿನ್ನೆ ಸಂಜೆ “ಡಾಕ್ಟರ್ ಗುರುರಾಜ ರಾವ್” ಆಗಿ ಬಂದು ಇಂಜೆಕ್ಷನ್ ನೀಡಿದ್ದು” ಎಂದರು. ಗಂಡನ ಮಾತುಗಳನ್ನು ಕೇಳಿದ ಆಕೆಗೆ ” ನಿನ್ನೆ ಮನೆಗೆ ಬಂದು, ಔಷಧವಿತ್ತು ತನ್ನನ್ನು ಗುಣಮಾಡಿದ್ದು ಸಾಕ್ಷಾತ್ ರಾಘವೇಂದ್ರ ಸ್ವಾಮಿಗಳೇ” ಎಂದು ಅರಿವಾಯಿತು.
ತಡಮಾಡದೇ ದಂಪತಿಗಳಿಬ್ಬರೂ ಅಂದೇ ಮಂತ್ರಾಲಯಕ್ಕೆ ಪ್ರಯಾಣ ಬೆಳೆಸಿದರು. ಗುರುರಾಜರ ಬೃಂದಾವನದ ಮುಂದೆ ಭಕ್ತಿಯಿಂದ ಕೈ ಮುಗಿದು ನಿಂತು, ತಮ್ಮನ್ನನುಗ್ರಹಿಸಿದ ರಾಯರನ್ನು ಸ್ತುತಿಸುತ್ತಾ ನಿಂತು ಬಿಟ್ಟರು. ಸಮಯದ ಪರಿವೆಯೇ ಇಲ್ಲ ಅವರಿಗೆ. ಗುರುರಾಜರ ಬೃಂದಾವನವನ್ನು ಎಷ್ಟು ನೋಡಿದರೂ ತೃಪ್ತಿಯಾಗುತ್ತಿಲ್ಲ. ಅವರನ್ನು ಎಷ್ಟು ಸ್ತುತಿಸಿದರೂ ಸಾಕಾಗುತ್ತಿಲ್ಲ ಆ ದಂಪತಿಗಳಿಗೆ.
ಹಸಿವು ನೀರಡಿಕೆಗಳ ಪರಿವೆಗಳಿಲ್ಲದೆ ಬೆಳಗಿನಿಂದ ಬೃಂದಾವನದ ಮುಂದೆ ಕಣ್ಣೀರು ಸುರಿಸುತ್ತಾ ನಿಂತಿರುವ ತಮ್ಮನ್ನು ಕುತೂಹಲದಿಂದ ವಿಚಾರಿಸಿದ ಹಿರಿಯರೊಬ್ಬರಿಗೆ, ಗುರುರಾಜರು ವೈದ್ಯರಾಗಿ ಬಂದು ತಮ್ಮ ಮೇಲೆ ಮಾಡಿದ ಅನುಗ್ರಹವನ್ನು ಭಕ್ತಿಯಿಂದ ವಿವರಿಸಿದರು.
ರಾಯರ ಆ ಮಹಿಮೆಯನ್ನು ಕೇಳಿ ಭಕ್ತಿಪುಳುಕಿತರಾದ ಆ ಹಿರಿಯರು, ರೋಗಹರರಾದ ಆ ರಾಘವೇಂದ್ರರನ್ನು “ರೋಗಹರನೇ ಕೃಪಾಸಾಗರ ಶ್ರೀ ಗುರು ರಾಘವೇಂದ್ರ ಪರಿಪಾಲಿಸೋ” ಎಂದು ಸ್ತುತಿಸ ತೊಡಗಿದರು.