ಬೆಂಗಳೂರು: ಆರೋಗ್ಯವಂತ ಭಾರತ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬಹುದೊಡ್ಡ ಕ್ರಾಂತಿ ಆಗಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನ 14ನೇ ಬ್ಯಾಚ್ ನ (2023) ಘಟಿಕೋತ್ಸವದಲ್ಲಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಿದರು ಅವರು.
ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಭಾರತ ಆರೋಗ್ಯ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಯನ್ನು ಕಂಡಿದೆ. ಶ್ರೀಸಾಮಾನ್ಯನಿಗೂ ಅತ್ಯಂತ ಸುಲಭ ದರದಲ್ಲಿ ಆರೋಗ್ಯ ಸೇವೆ ಲಭ್ಯವಾಗುತ್ತಿದೆ. ಪ್ರಧಾನಿಗಳ ಸಾಮಾಜಿಕ ಕಾಳಜಿ ಹಾಗೂ ದೂರದೃಷ್ಟಿಯಿಂದ ಇದೆಲ್ಲಾ ಸಾಧ್ಯವಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.
ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಮ್ಮ ದೇಶದಲ್ಲಿ ಆರೋಗ್ಯ ವ್ಯವಸ್ಥೆ ಅತ್ಯಂತ ಬಲಿಷ್ಠವಾಗಿ ಬೆಳೆದಿದ್ದು, ದೇಶದ ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಬೆನ್ನೆಲುಬಾಗಿ ಕೆಲಸ ಮಾಡುತ್ತಿದೆ. ಈಗ ಪ್ರತಿಯೊಬ್ಬ ನಾಗರಿಕನಿಗೂ ಅತ್ಯಂತ ಗುಣಮಟ್ಟದ ವೈದ್ಯ ಸೇವೆ ದೊರೆಯುತ್ತಿದೆ ಎಂದು ಅವರು ಒತ್ತಿ ಹೇಳಿದರು.
ಕಳೆದ ಹತ್ತು ವರ್ಷಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳು ಜಾರಿಗೆ ಬಂದಿವೆ. ಅದರಲ್ಲಿ ಆಯುಷ್ಮಾನ್ ಭಾರತ್ ಯೋಜನೆಯು ಒಂದು. ಇದು ಜಗತ್ತಿನಲ್ಲಿಯೇ ಅತಿದೊಡ್ಡ ಆರೋಗ್ಯ ಸೇವಾ ಯೋಜನೆ. ದೇಶದ 500 ದಶಲಕ್ಷ ಜನರು ಆರೋಗ್ಯ ವಿಮೆ ವ್ಯಾಪ್ತಿಗೆ ಬಂದಿದ್ದಾರೆ. ಜತೆಗೆ, ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ, ಪಿಎಂ ಆತ್ಮನಿರ್ಭರ್ ಸ್ವಾಸ್ಥ ಭಾರತ್ ಯೋಜನೆ, ಡಿಜಿಟಲ್ ಆರೋಗ್ಯ ಮಿಷನ್, ಮಿಶನ್ ಇಂದ್ರಧನುಷ್, ಜನೌಷಧಿ ಕೇಂದ್ರಗಳ ಸ್ಥಾಪನೆ ಸೇರಿದಂತೆ ಅನೇಕ ಸರಿಸಾಟಿ ಇಲ್ಲದ ಕಾರ್ಯಕ್ರಮಗಳನ್ನು ಮೋದಿ ಸರ್ಕಾರ ಜಾರಿ ಮಾಡಿದೆ ಎಂದು ಕೇಂದ್ರ ಸಚಿವರು ಒತ್ತಿ ಹೇಳಿದರು.
ವೈದ್ಯಕೀಯ ಕ್ಷೇತ್ರ ಅತ್ಯಂತ ಮಹತ್ವದ್ದು, ಶ್ರೇಷ್ಠವಾದದ್ದು ಆಗಿದ್ದು, ವೈದ್ಯರು ಒಬ್ಬ ವ್ಯಕ್ತಿಯ ಆರೋಗ್ಯವನ್ನೇ ಅಲ್ಲ, ಇಡೀ ದೇಶದ ಆರೋಗ್ಯ ಕಾಪಾಡುತ್ತಾರೆ ಎಂದ ಅವರು; ಈ ದಿನ ವೈದ್ಯ ಪದವಿ ಪಡೆಯುತ್ತಿರುವ ಎಲ್ಲರೂ ಭವಿಷ್ಯದಲ್ಲಿ ಉತ್ತಮ ವೈದ್ಯರಾಗಿ ಸಮಾಜಮುಖಿ ಸೇವೆ ಮಾಡಬೇಕು ಎಂದು ಸಚಿವರು ಮನವಿ ಮಾಡಿದರು.
ರಾಜರಾಜೇಶ್ವರಿ ವೈದ್ಯ ಕಾಲೇಜಿನ ಸಂಸ್ಥಾಪಕ ಕುಲಪತಿ ಡಾ.ಎ.ಸಿ.ಷಣ್ಮುಗಂ, ಕಾಲೇಜಿನ ಅಧ್ಯಕ್ಷ ಅರುಣ್ ಕುಮಾರ್, ಡೀನ್ ಡಾ.ಸತ್ಯಮೂರ್ತಿ, ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಎಸ್.ವಿಜಯಾನಂದ ಮುಂತಾದವರು ಉಪಸ್ಥಿತರಿದ್ದರು.
ಇದೇ ಕೇಂದ್ರ ಸಚಿವರು ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಪ್ರಮಾಣಪತ್ರ ವಿತರಿಸಿ ಶುಭ ಕೋರಿದರು.