ಚನ್ನರಾಯಪಟ್ಟಣ: ಹೋಬಳಿಯ 13 ಹಳ್ಳಿಗಳ 1777 ಎಕರೆ ಫಲವತ್ತಾದ ಕೃಷಿ ಭೂಮಿ ಸ್ವಾಧೀನವನ್ನು ವಿರೋಧಿಸಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿಯು 559 ದಿನಗಳು ತಲುಪಿದೆ. ಈ ಮದ್ಯೆ ದಿನಾಂಕ 18.10.2023ರಂದು ಉಸ್ತುವಾರಿ ಸಚಿವರಾದ ಕೆಎಚ್ ಮುನಿಯಪ್ಪನವರು ಮತ್ತು ಕೈಗಾರಿಕಾ ಸಚಿವರಾದ ಎಂಬಿ ಪಾಟೀಲ್ ರವರು ಚನ್ನರಾಯಪಟ್ಟಣ ಭೂಸ್ವಾಧೀನಕ್ಕೆ ಸಂಬಂದಿಸಿದ ರೈತರೊಂದಿಗೆ ನಡೆಸಿದ ಸಭೆಯ ನಂತರ ನಡೆದ ಗ್ರಾಮವಾರು ರೈತ ಸಭೆಗಳು ಮತ್ತು ರೈತ ಸಭೆಗಳ ತೀರ್ಮಾನದ ಕುರಿತು ತಿಳಿಸುವ ಕಾರಣಕ್ಕೆ ಧರಣಿ ಸ್ಥಳದಲ್ಲಿ ಮಾದ್ಯಮ ಗೋಷ್ಠಿ ನಡೆಸಲಾಯಿತು.
ಉಸ್ತುವಾರಿ ಸಚಿವರು ಮತ್ತು ಕೈಗಾರಿಕಾ ಸಚಿವರು ರೈತರೊಂದಿಗೆ ನಡೆಸಿದ ಸಭೆಯಲ್ಲಿ ಚರ್ಚೆಗೆ ಬಂದ ವಿಚಾರಗಳನ್ನು ಗ್ರಾಮಾವಾರು ರೈತ ಸಭೆಗಳಲ್ಲಿ ಚರ್ಚಿಸಲಾಗಿ ಸಭೆಯಲ್ಲಿ ಸರ್ಕಾರ ಪ್ರಸ್ತಾಪಿಸಿದ ಯಾವುದೇ ರೀತಿಯ ಪರಿಹಾರಕ್ಕೂ ಕೂಡ ರೈತರು ಒಪ್ಪದೆ, ಸರ್ವಾನುಮತದಿಂದ ಸರ್ಕಾರದ ಪರಿಹಾರದ ಪ್ರಸ್ತಾವನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದರು. ಅಲ್ಲದೆ ನಮ್ಮ ಭೂಮಿಯನ್ನು ಯಾವುದೇ ಕಾರಣಕ್ಕೂ ಮತ್ತು ಎಂತದ್ದೆ ಸಂದರ್ಭದಲ್ಲೂ ಬಿಟ್ಟುಕೊಡುವ ಪ್ರಶ್ನೆಯೆ ಇಲ್ಲ ಎಂದು ತೀರ್ಮಾನಿಸಿ, ಭೂಸ್ವಾಧೀನದ ಪ್ರಾಥಮಿಕ ಆದೇಶವನ್ನು ತಕ್ಷಣವೆ ರದ್ದುಪಡಿಸಬೇಕು ಇಲ್ಲವಾದಲ್ಲಿ ಹೋರಾಟವನ್ನು ಮತಷ್ಟು ತೀರ್ವಗೊಳಿಸಲಾಗುವುದು ಎಂದು ರೈತರು ಎಚ್ಚರಿಸಿದರು.
ಸರ್ಕಾರ ಪ್ರಸ್ತಾಪಿಸಿದ್ದ ಪ್ರತಿ ಎಕರೆಗೆ 10800 ಚದುರ ಅಡಿ ಅಭಿವೃದ್ದಿ ಪಡಿಸಿದ ಭೂಮಿಯ ಪರಿಹಾರವನ್ನು ಸಭೆ ಸೇರಿದ್ದ ರೈತರು ಸಂಪೂರ್ಣವಾಗಿ ಸರ್ವಾನುಮತದಿಂದ ದಿಕ್ಕರಿಸಿದರು ಮತ್ತು ಇರುವ ಭೂಮಿಯನ್ನೆ ನಾವು ಆದುನಿಕ ಕೃಷಿ ಅಳವಡಿಸಿಕೊಂಡು ಸುಸ್ಥಿರತೆ ಕಂಡುಕೊಳ್ಳುವ ಮತ್ತು ಉದ್ಯೋಗ ಸೃಷ್ಟಿ ಕೂಡ ಮಾಡಿ ಸ್ವಾವಲಂಭಿಯಾಗಿ ಬದುಕುವ ಸಾದ್ಯತೆ ಇರುವಾಗ ಸರ್ಕಾರದ ನೀಡುವ ತುಂಡುಭೂಮಿ ಪರಿಹಾರ ನಮಗೆ ಬೇಕಿಲ್ಲ ಎಂದು ಗ್ರಾಮಗಳ ರೈತ ಸಭೆಗಳಲ್ಲಿ ತೀರ್ಮಾನಿಸಿರುವುದನ್ನು ಪ್ರಕಟಿಸಲಾಯಿತು.
ಇದರ ಜೊತೆಗೆ “ಗೋಕರೆ ಬಚ್ಚೇನಹಳ್ಳಿ ಮತ್ತು ಹ್ಯಾಡಾಳ ಗ್ರಾಮದ ರೈತರು ಭೂಮಿ ಕೊಡಲು ಸಿದ್ದರಿದ್ದಾರೆ ಎಂದು ಹಬ್ಬಿಸುತ್ತಿರುವ ಸುಳ್ಳುಸುದ್ದಿ”ಯ ಕುರಿತು ಗೋಕರೆ ಬಚ್ಚೇನಹಳ್ಳಿ ಬೇಚಾರ್ ಗ್ರಾಮದ ಭೂಮಿಯ ವಾರಸುದಾರರಿರುವ ನಾಗನಾಯಕನಹಳ್ಳಿ, ಚನ್ನರಾಯಪಟ್ಟಣ ಮತ್ತು ಮಟ್ಟಬಾರ್ಲು ಗ್ರಾಮದ ರೈತರು ಮತ್ತು ಹ್ಯಾಡಾಳ ಗ್ರಾಮದ ರೈತರು ಆಯಾ ಗ್ರಾಮಗಳಲ್ಲಿ ನಡೆದ ಸಭೆಯಲ್ಲಿ ಈ ಸುದ್ದಿಯನ್ನು ನಿರಾಕರಿಸಿದರು ಮತ್ತು ಇದು ನಮ್ಮ ಭೂಮಿಗೆ ಸಂಬಂದಪಡದ ಭೂದಲ್ಲಾಳಿಗಳು ಸರ್ಕಾರದ ಅಧಿಕಾರಿಗಳ ಕುಮಕ್ಕಿನಿಂದ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಅರೋಪಿಸಿ ಈ ಪತ್ರಿಕಾಗೋಷ್ಟಿಯಲ್ಲಿ ನೇರ ಹಾಜರಿದ್ದು ತಮ್ಮ ಮೇಲಿನ ಸುಳ್ಳುಸುದ್ದಿಯನ್ನು ತಿರಸ್ಕರಿಸಿದರು.
ಮಂತ್ರಿಗಳು ರೈತರೊಂದಿಗೆ ನಡೆಸಿದ ಸಭೆಯಲ್ಲಿ 559 ಎಕರೆ ಸರ್ಕಾರಿ ಭೂಮಿ ಇರುವುದಾಗಿ ಮಾಹಿತಿಯನ್ನು ಹಂಚಿಕೊಂಡಿದ್ದರು, ಆದರೆ ವಾಸ್ತವದಲ್ಲಿ ಇದು ಸಂಪೂರ್ಣವಾಗಿ ತಪ್ಪು ಮಾಹಿತಿಯಾಗಿದ್ದು ಅಧಿಕಾರಿಗಳು ಸಚಿವರ ದಾರಿ ತಪ್ಪಿಸಲು ಇಂತಹ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇದು ಸರ್ಕಾರಿ ದಾಖಲೆಗಳಲ್ಲಿ ಭೂಮಿಯ ವಿಧ “ಖರಾಬು” ಎಂದು ದಾಖಲಾಗಿರುವ, ಗ್ರಾಂಟ್ ಮತ್ತು ಸಾಗುವಳಿ ಮೂಲಕ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ಜಾತಿಗಳ ರೈತರಿಗೆ ಸೇರಿದ ಖಾಸಗಿ ಭೂಮಿಯಾಗಿದೆ ಮತ್ತು ಇದೇ ಭೂಮಿಯಲ್ಲಿ ರೈತರು ಸುಮಾರು ವರ್ಷಗಳಿಂದ ಕೊಳವೆ ಭಾವಿ ನೀರಾವರಿ, ತೋಟಗಾರಿಕಾ ಬೆಳೆಗಳು ಸೇರಿದಂತೆ ಹಲವು ಅಭಿವೃದ್ದಿ ಮಾಡಿಕೊಂಡಿದ್ದೇವೆ ಎಂದು ಸ್ಪಷ್ಟನೆ ನೀಡಿದರಲ್ಲದೆ ಅಧಿಕಾರಿಗಳು ಈ ರೀತಿಯ ತಪ್ಪು ಮಾಹಿತಿ ನೀಡದಿರುವಂತೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಮಂತ್ರಿಗಳು ಕಳೆದ ಸಭೆಯಲ್ಲಿ ತಿಳಿಸಿದಂತೆ ದಿನಾಂಕ 25.10.2023 ರ ನಂತರ ರೈತರ ಸಭೆ ಕರೆದು ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದು, ಇದುವರೆಗೂ ಯಾವುದೇ ಸಭೆ ಕರೆಯದೆ ಇರುವುದು ಸರಿಯಲ್ಲ, ಆದಷ್ಟೂ ಬೇಗ ರೈತರ ಸಭೆ ಕರೆದು ಭೂಸ್ವಾಧೀನವನ್ನು ಕೈಬಿಡುವ ನಿರ್ಧಾರವನ್ನು ಪ್ರಕಟಿಸಲಿ ಇಲ್ಲವಾದರೆ ಹೋರಾಟವನ್ನು ಮತ್ತಷ್ಟು ತೀರ್ವಗೊಳಿಸಬೇಕಾಗುತ್ತದೆ ಎಂದು ತಾಕೀತು ಮಾಡಿದರು.
ಈ ಎಲ್ಲಾ ತೀರ್ಮಾನಗಳು ದಿನಾಂಕ ಅಕ್ಟೋಬರ್ 30 ರಿಂದ ನವೆಂಬರ್ 4ರ ವರೆಗೂ ನಡೆದ ಗ್ರಾಮವಾರು ರೈತರ ಸಭೆಗಳಲ್ಲಿ ಚರ್ಚೆಯಾಗಿ ತೀರ್ಮಾನವಾದ ವಿಚಾರಗಳನ್ನು ಸಾರ್ವಜನಿಕರ ಗಮನಕ್ಕೆ ಮತ್ತು ಸರ್ಕಾರದ ಗಮನಕ್ಕೆ ಸಮಿತಿಯು ತಂದು ಪತ್ರಿಕಾಗೋಷ್ಠಿ ನಡೆಸಿತು.
ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ಚಂದ್ರ ತೇಜಸ್ವಿ, ಪ್ರಭಾ ಬೆಳವಂಗಲ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದರು.
ರೈತ ಮುಖಂಡರಾದ ನಲ್ಲಪ್ಪನಹಳ್ಳಿ ನಂಜಪ್ಪ,ಮಾರೇಗೌಡ, ಕಾರಳ್ಳಿ ಶ್ರೀನಿವಾಸ್, ಮಾರೇಗೌಡ ಹ್ಯಾಡಾಳ, ಅಶ್ವಥಪ್ಪ, ಸುಬ್ರಹ್ಮಣ್ಯ, ವೆಂಕಟರಾಯಪ್ಪ, ವೆಂಕಟಪ್ಪ, ನಂದನ್, ಪ್ರಮೋದ್, ಮುಕುಂದ್, ಮೋಹನ್, ವೆಂಕಟರಮಣಪ್ಪ, ಸೇರಿದಂತೆ 13 ಹಳ್ಳಿಗಳ ನೂರಾರು ರೈತರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.