ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಟಿಬಿ(ಕ್ಷಯ ರೋಗ) ಮುಕ್ತ ಅಭಿಯಾನದಲ್ಲಿ ನಗರ ಪಾಲುದಾರರೆಲ್ಲರೂ ಪಾಲ್ಗೊಳ್ಳಲು *ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್* ರವರು ಮನವಿ ಮಾಡಿದರು.
ಬಿಬಿಎಂಪಿಯು ವಿವೇಕಾನಂದ ಯೂತ್ ಮೂಮೆಂಟ್ ಸಂಸ್ಥೆಯವರ ಸಹಯೋಗದೊಂದಿಗೆ ಇಂದು ಮಲ್ಲೇಶ್ವವರಂ ಐಪಿಪಿ ತರಬೇತಿ ಕೇಂದ್ರದಲ್ಲಿ “ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದಡಿ” ಪಾಲುದಾರರ ಜೊತೆ ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಕ್ಷಯ ರೋಗ ನಿರ್ಮೂಲನೆ ಮಾಡಲು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಬೆಂಗಳೂರು ನಗರದಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. 100 ದಿನಗಳ ಕ್ಷಯರೋಗ ಅಭಿಯಾನದಲ್ಲಿ ಈಗಾಗಲೇ 50 ದಿನಗಳು ಮುಗಿದಿದ್ದು, ಇನ್ನು ಬಾಕಿಯಿರುವ ದಿನಗಳಲ್ಲಿ ಏನೆಲ್ಲಾ ಕ್ರಮಗಳು ಕೈಗೊಳ್ಳಬೇಕು, ಅದನ್ನು ಹೇಗೆ ನಿಯಂತ್ರಿಸಬೇಕು ಎಂಬುದರ ಬಗ್ಗೆ ಅರಿವು ಮೂಡಿಸಿ ಕ್ಷಯ ಮುಕ್ತ ನಗರವನ್ನಾಗಿಸಬೇಕೆಂದು ಹೇಳಿದರು.
ಕ್ಷಯ ರೋಗ ನಿರ್ಮೂಲನೆಗಾಗಿ ತಮ್ಮ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ ಟಿಬಿ ರೋಗ ಲಕ್ಷಣಗಳಿದ್ದರೆ ಆರಂಭಿಕ ಹಂತದಲ್ಲಿಯೇ ಮುಂಜಾಗ್ರತಾ ಕ್ರಮ ತೆಗೆದುಕೊಂಡು ನಿಯಂತ್ರಣಕ್ಕೆ ತರಬೇಕು. ನಿಮ್ಮ ಇಲಾಖೆಗಳಲ್ಲಿ ಕ್ಷಯ ರೋಗದ ಟೆಸ್ಟಿಂಗ್ ಮಾಡುವುದು ಬಹಳಾ ಮುಖ್ಯ ಎಂದು ತಿಳಿಸಿದರು.
ನಮ್ಮ ಕ್ಲೀನಿಕ್ಗಳಲ್ಲಿ ಚಿಕಿತ್ಸೆ:
ಪಾಲಿಕೆಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಮ್ಮ ಕ್ಲೀನಿಕ್ಗಳಲ್ಲಿ ಹಾಗೂ ಹೆರಿಗೆ ಆಸ್ಪತ್ರಿಗಳಲ್ಲಿ ಕ್ಷಯ ರೋಗಕ್ಕೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಎಲ್ಲರೂ ಹತ್ತಿರದಲ್ಲಿರುವ ಆಸ್ಪತ್ರೆಗಳಿಗೆ ಭೇಟಿ ನೀಡಿ ಕ್ಷಯ ರೋಗಕ್ಕೆ ಚಿಕಿತ್ಸೆ ಪಡೆದು ಕ್ಷಯ ಮುಕ್ತ ನಗರವನ್ನಾಗಿ ಮಾಡಲು ಶ್ರಮವಹಿಸೋಣ ಎಂದು ಹೇಳಿದರು.
ಮನೆ-ಮನೆ ಭೇಟಿ:
ಕ್ಷಯರೋಗ ನಿರ್ಮೂಲನೆ ಮಾಡುವ ಸಲುವಾಗಿ ಟಿಬಿ ರೋಗಲಕ್ಷಣಗಳಿರುವ ಮನೆಗಳು, ವೃದ್ಧಾಶ್ರಮಗಳು, ನಿರಾಶ್ರಿತ ಕೇಂದ್ರಗಳು, ಅನಾಥಾಶ್ರಮಗಳು, ಕೊಳೆಗೇರಿ ಪ್ರದೇಶಗಳು ಸೇರಿದಂತೆ ಇನ್ನಿತರೆ ಸ್ಥಳಗಳಿಗೆ ಭೇಟಿ ನೀಡಿ ಉಚಿತವಾಗಿ ಟಿಬಿ ಪರೀಕ್ಷೆ ಮಾಡಲಾಗುವುದು. ಟಿಬಿ ರೋಗಲಕ್ಷಣಗಳನ್ನು ತೋರಿಸುವವರು ಅಥವಾ ಅಪಾಯದಲ್ಲಿರುವವರು ಪರೀಕ್ಷೆಗಾಗಿ ಕಫ ಸಂಗ್ರಹಣೆಗೆ ಒಳಗಾಗುತ್ತಾರೆ. ನಂತರ ಆ ಮಾದರಿಗಳನ್ನು NAAT(ನ್ಯೂಕ್ಲಿಯಿಕ್ ಆಸಿಡ್ ಆಂಪ್ಲಿಫಿಕೇಶನ್ ಟೆಸ್ಟ್)ಗಾಗಿ ಕಳುಹಿಸಲಾಗುತ್ತದೆ. ಟಿಬಿ ನಿರ್ಮೂಲನೆಗಾಗಿ ಉತ್ತಮ ಉಚಿತ ಚಿಕಿತ್ಸೆ ನೀಡಿ ಗುಣಪಡಿಸಲಾಗುತ್ತದೆ.
ಟಿಬಿ ಪ್ರಿವೆಂಟಿವ್ ಥೆರಪಿ ಚಿಕಿತ್ಸೆ:
CYTB ಪರೀಕ್ಷೆಯನ್ನು ನಡೆಸಿ, ಸಕ್ರಿಯ ಟಿಬಿಯನ್ನು ಪತ್ತೆಹಚ್ಚಿ ಹೆಚ್ಚಿನ ಅಪಾಯದಲ್ಲಿರುವ ವ್ಯಕ್ತಿಗಳಿಗೆ ಟಿಬಿ ಪ್ರಿವೆಂಟಿವ್ ಥೆರಪಿ (ಟಿಪಿಟಿ) ಒದಗಿಸಲು ಅಭಿಯಾನವು ಆದ್ಯತೆ ನೀಡುತ್ತಿದೆ. ಇದು ಹೊಸ ಪ್ರಕರಣಗಳನ್ನು ತಡೆಗಟ್ಟುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿ ಕ್ಷಯಾ ಮುಕ್ತ ಭಾರತ್ ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆ.
100 ದಿನಗಳ ಕ್ಷಯರೋಗ ಅಭಿಯಾನ:
2025ರ ವೇಳೆಗೆ ಟಿಬಿ-ಮುಕ್ತ ಭಾರತವನ್ನು ಸಾಧಿಸುವ ರಾಷ್ಟ್ರವ್ಯಾಪಿ ಅಭಿಯಾನದ ಭಾಗವೇ ಈ 100 ದಿನಗಳ ಕ್ಷಯರೋಗ ಅಭಿಯಾನ. ಇದರಡಿ ಹೆಚ್ಚಿನ ಅಪಾಯದ ವ್ಯಕ್ತಿಗಳನ್ನು ಗುರುತಿಸುವುದು, ಸಮಗ್ರ ಆರೈಕೆಯನ್ನು ಒದಗಿಸುವುದು, ಟಿಬಿಗೆ ತುತ್ತಾಗುವ ಹೆಚ್ಚಿನ ಅಪಾಯದಲ್ಲಿರುವ ದುರ್ಬಲ ಜನಸಂಖ್ಯೆಯನ್ನು ಗುರುತಿಸುವುದು, ಟಿಬಿ ರೋಗಿಗಳ ಮನೆಯ ಸಂಪರ್ಕಗಳು, ಟಿಬಿಯ ಹಿಂದಿನ ಇತಿಹಾಸ ಹೊಂದಿರುವ ವ್ಯಕ್ತಿಗಳು, ಮದ್ಯ ವ್ಯಸನಿಗಳು, ಧೂಮಪಾನಿಗಳು(ಪ್ರಸ್ತುತ ಮತ್ತು ಹಿಂದಿನ ಎರಡೂ), ಅಪೌಷ್ಟಿಕ ವ್ಯಕ್ತಿಗಳು(18.5 kg/m² ಗಿಂತ ಕಡಿಮೆ BMI ಹೊಂದಿರುವವರು), HIV ಯೊಂದಿಗೆ ವಾಸಿಸುವ ಜನರು ಮತ್ತು ಮಧುಮೇಹಿಗಳು. ಈ ಹೆಚ್ಚಿನ ಅಪಾಯದ ಗುಂಪುಗಳನ್ನು ಗುರಿಯಾಗಿಸುವ ಮೂಲಕ ಟಿಬಿ ಹರಡುವಿಕೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
ಈ ವೇಳೆ ಮುಖ್ಯ ಆರೋಗ್ಯಾಧಿಕಾರಿಯಾದ ಡಾ. ಸಿರಾಜುದ್ದೀನ್ ಮದನಿ, ವಲಯ ಆರೋಗ್ಯಾಧಿಕಾರಿಗಳು, ಪಾಲುದಾರ ಇಲಾಖೆಗಳಾದ ಪೊಲೀಸ್ ಇಲಾಖೆ, ಎಫ್.ಕೆ.ಸಿ.ಸಿ.ಐ, ಡಬ್ಲ್ಯೂ.ಸಿ.ಡಿ, ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಫ್ಯಾಕ್ಟರೀಸ್ & ಬಾಯ್ಲರ್, ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.